ಕುಂಭ ಮೇಳದಲ್ಲಿ ಕೋವಿಡ್ ಪರೀಕ್ಷೆ ಅಕ್ರಮ: ಅಧಿಕಾರಿಗಳ ನಿರ್ಲಕ್ಷ್ಯ ಬಹಿರಂಗ; ವರದಿ

Update: 2021-06-21 17:43 GMT

ಡೆಹ್ರಾಡೂನ್, ಜೂ. 21: ಕಳೆದ ಎಪ್ರಿಲ್‌ನಲ್ಲಿ ನಡೆದ ಕುಂಭಮೇಳದ ಸಂದರ್ಭ ಹರಿದ್ವಾರದಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದ್ದರೂ ಸಂಬಂಧಿತ ಅಧಿಕಾರಿಗಳು ಕಾರ್ಯೋನ್ಮುಖವಾಗದಿರುವುದು ಇದೀಗ ಬೆಳಕಿಗೆ ಬಂದಿದೆ

ಮಹಾ ಕುಂಭಮೇಳ 2021ರ ಸಂದರ್ಭ ಎಪ್ರಿಲ್ 1ರಿಂದ 30ರ ವರೆಗೆ ಕೋವಿಡ್ ಪರೀಕ್ಷೆ ಹಾಗೂ ಪಾಸಿಟಿವಿಟಿ ದರವನ್ನು ‘The new Indian Express’ ವಿಶ್ಲೇಷಣೆ ನಡೆಸಿದೆ. ರಾಜ್ಯದ ಇತರ ಭಾಗಗಳಿಗಿಂತ ಹರಿದ್ವಾರದಲ್ಲಿ ಹೆಚ್ಚಿನ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಆದರೆ, ಪತ್ತೆ ಹಚ್ಚಲಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಎಂಬುದನ್ನು ಈ ವಿಶ್ಲೇಷಣೆ ತೋರಿಸಿಕೊಟ್ಟಿದೆ. ಹರಿದ್ವಾರದಲ್ಲಿ ಎಪ್ರಿಲ್ 1ರಿಂದ 30ರ ವರೆಗೆ ಒಟ್ಟು 6,00,291 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ ಕೇವಲ 17,375 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದೇ ಅವಧಿಯಲ್ಲಿ ರಾಜ್ಯದ ಉಳಿದ 12 ಜಿಲ್ಲೆಗಳಲ್ಲಿ 4,42,432 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಇಲ್ಲಿ 62,735 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಶೇಕಡವಾರು ರೀತಿಯಲ್ಲಿ ಹೇಳುವುದಾದರೆ, ಹರಿದ್ವಾರದಲ್ಲಿ ಎಪ್ರಿಲ್‌ನಲ್ಲಿ ಬಹುತೇಕ ಶೇ. 60 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ, ರಾಜ್ಯದ ಉಳಿದ ಭಾಗಗಳಿಗಿಂತ ಕೆಲವೇ ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಯಿತು. ಅಧಿಕೃತ ದತ್ತಾಂಶದ ವಿಶ್ಲೇಷಣೆ ಎಪ್ರಿಲ್ ತಿಂಗಳಲ್ಲಿ ಉತ್ತರಾಖಂಡದಲ್ಲಿ ಸರಾಸರಿ ಪಾಸಿಟಿವ್ ದರ ಶೇ. 14.18, ಆದರೆ, ಹರಿದ್ವಾರದ ಜಿಲ್ಲೆಯ ಪಾಸಿಟಿವ್ ದರದ ಸಂಖ್ಯೆ ಕೇವಲ ಶೇ. 2.89 ಎಂದು ತೋರಿಸಿದೆ. ಅಂದರೆ ಮಹಾಕುಂಭ ಮೇಳದ ಸಂದರ್ಭ ಹರಿದ್ವಾರದಲ್ಲಿ ಪಾಸಿಟಿವ್ ದರ ರಾಜ್ಯದ ಇತರ ಸ್ಥಳಕ್ಕಿಂತ ಶೇ. 80ಕ್ಕಿಂತ ಕಡಿಮೆ ಇತ್ತು. ಈ ಅಂಕಿ-ಅಂಶಗಳು ಎರಡು ಅಂಶಗಳನ್ನು ಸೂಚಿಸುತ್ತದೆ.

ಒಂದು ಅತ್ಯಧಿಕ ನಕಲಿ ಕೋವಿಡ್ ಪರೀಕ್ಷೆ ನಡೆದಿದೆ ಎಂಬುದು. ಇನ್ನೊಂದು ಪಾಸಿಟಿವ್ ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಲಾಗಿದೆ. ‘‘ಕುಂಭ ಮೇಳಕ್ಕೆ ಪ್ರತಿ ದಿನ ಸಾವಿರಾರು ಜನರು ಆಗಮಿಸಿದ್ದಾರೆ. ಪ್ರತಿಯೊಬ್ಬರ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಆದುದರಿಂದ ಕಡಿಮೆ ಪ್ರಕರಣಗಳು ವರದಿಯಾಗಿವೆ’’ ಎಂದು ಹರಿದ್ವಾರದ ಜಿಲ್ಲಾ ದಂಡಾಧಿಕಾರಿ ಸಿ ರವಿಶಂಕರ್ ಅವರು ಹೇಳಿದ್ದಾರೆ.

3 ಸಂಸ್ಥೆಗಳಿಗೆ ಉತ್ತರಾಖಂಡ ಎಸ್‌ಐಟಿ ನೋಟಿಸ್

ಇತ್ತೀಚೆಗೆ ಮುಕ್ತಾಯವಾದ ಕುಂಭ ಮೇಳದ ಸಂದರ್ಭ ಉತ್ತರಾಖಂಡದಲ್ಲಿ ಕೋವಿಡ್-19 ಪರೀಕ್ಷೆಯಲ್ಲಿ ನಡೆದ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಮೂರು ಸಂಸ್ಥೆಗಳಿಗೆ ನೋಟಿಸು ಜಾರಿ ಮಾಡಿದೆ. ಹೊಸದಿಲ್ಲಿಯ ಮ್ಯಾಕ್ಸ್ ಕಾರ್ಪೋರೇಟ್ ಸರ್ವೀಸ್, ಹರ್ಯಾಣದ ನಲ್ವಾ ಲ್ಯಾಬೋರೇಟರಿಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಡಾ. ಲಾಲ್‌ಚಂದಾನಿ ಲ್ಯಾಬ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸು ಜಾರಿ ಮಾಡಲಾಗಿದೆ. ಈ 3 ಸಂಸ್ಥೆಗಳಿಗೆ ತಮ್ಮ ಮುಂದೆ ಹಾಜರಾಗಲು ನಾಲ್ಕು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಕಳೆದ ಎರಡು ದಿನಗಳಿಂದ ಎಸ್‌ಐಟಿ ನಿಯೋಜಿತ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಎನ್. ಝಾ ಅವರು ಕುಂಭಮೇಳದ ಮುಖ್ಯ ವೈದ್ಯಾಧಿಕಾರಿ ಡಾ. ಅರ್ಜುನ್ ಸಿಂಗ್ ಸೆಂಗಾರ್ ಅವರ ಹೇಳಿಕೆಯನ್ನು ದಾಖಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News