ಅಪಘಾನ್ ಶಾಂತಿ ಮಾತುಕತೆಗೆ ಬದ್ಧ: ತಾಲಿಬಾನ್ ಘೋಷಣೆ

Update: 2021-06-21 17:29 GMT

ಕಾಬೂಲ್, ಜೂ.21: ಅಪಘಾನಿಸ್ತಾನದಲ್ಲಿ ಸಾಂಸ್ಕತಿಕ ಸಂಪ್ರದಾಯ ಮತ್ತು ಧಾರ್ಮಿಕ ನಿಯಮಗಳ ಅನುಸಾರ ಮಹಿಳೆಯರ ಹಕ್ಕನ್ನು ಹೊಂದಿರುವ ವಾಸ್ತವಿಕ ಇಸ್ಲಾಮಿಕ್ ವ್ಯವಸ್ಥೆ ಇರಬೇಕು ಎಂದು ತಾವು ಬಯಸುತ್ತಿದ್ದು ಶಾಂತಿ ಮಾತುಕತೆಗೆ ಬದ್ಧವಾಗಿದ್ದೇವೆ ಎಂದು ತಾಲಿಬಾನ್ ರವಿವಾರ ಹೇಳಿದೆ. ಅಪಘಾನಿಸ್ತಾನದಲ್ಲಿದ್ದ ವಿದೇಶಿ ಶಾಂತಿಪಾಲನಾ ಪಡೆಗಳನ್ನು ಸೆಪ್ಟಂಬರ್ 11ರಂದು ವಾಪಾಸು ಕರೆಸಿಕೊಂಡ ಬಳಿಕ ಆ ದೇಶದಲ್ಲಿ ಹಿಂಸಾಕೃತ್ಯ ಉಲ್ಬಣಿಸಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಗುಂಪು ಹಾಗೂ ಅಪಘಾನ್ ಸರಕಾರದ ಪ್ರತಿನಿಧಿಗಳೊಂದಿಗೆ ಖತರ್‌ನಲ್ಲಿ ಶಾಂತಿ ಮಾತುಕತೆ ಪ್ರಗತಿಯಲ್ಲಿರುವಂತೆಯೇ ತಾಲಿಬಾನ್ ಈ ಹೇಳಿಕೆ ನೀಡಿದೆ.

ವಿದೇಶಿ ಪಡೆಗಳ ನಿರ್ಗಮನದ ಬಳಿಕ ಅಪಘಾನಿಸ್ತಾನದಲ್ಲಿ ರೂಪಿಸಬೇಕಾದ ವ್ಯವಸ್ಥೆಯ ಬಗ್ಗೆ ವಿಶ್ವದಲ್ಲಿ ಹಾಗೂ ಅಪಘಾನಿಸ್ತಾನದಲ್ಲಿ ಹಲವು ಪ್ರಶ್ನೆ, ಸಂದೇಹ ಇದೆ ಎಂಬುದು ನಮಗೆ ತಿಳಿದಿದೆ. ನಿಜವಾದ ಇಸ್ಲಾಮಿಕ್ ವ್ಯವಸ್ಥೆಯೇ ಅಪಘಾನಿಸ್ತಾನದ ಎಲ್ಲಾ ಸಮಸ್ಯೆಗೆ ಏಕೈಕ ಮತ್ತು ಅತ್ಯುತ್ತಮ ಪರಿಹಾರವಾಗಿದೆ. ನಾವು ಒಪ್ಪಂದದ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲಿ ವಿಶ್ವಾಸ ಇರಿಸಿದ್ದೇವೆ ಎಂಬುದಕ್ಕೆ ಶಾಂತಿ ಮಾತುಕತೆಯಲ್ಲಿ ಪಾಲ್ಗೊಂಡಿರುವುದೇ ಸೂಕ್ತ ನಿದರ್ಶನವಾಗಿದೆ ಎಂದು ತಾಲಿಬಾನ್ ಸಹಸಂಸ್ಥಾಪಕ ಮತ್ತು ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದರ್ ಹೇಳಿದ್ದಾರೆ.

ಅಪಘಾನಿಸ್ತಾನದಲ್ಲಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ದೊರಕಲಿದೆ. ಎನ್‌ಜಿಒಗಳು, ರಾಜತಾಂತ್ರಿಕರ ಕಾರ್ಯನಿರ್ವಹಣೆಗೆ ಭದ್ರತೆ ಒದಗಿಸಲಾಗುವುದು. ಅಪಘಾನ್ ಸಮಾಜದ ಉದಾತ್ತ ಸಂಪ್ರದಾಯ ಮತ್ತು ಇಸ್ಲಾಮ್‌ನ ಭವ್ಯ ಧಾರ್ಮಿಕ ನಿಯಮಗಳಿನುಸಾರವಾಗಿ ನಮ್ಮ ದೇಶದಲ್ಲಿ ಪ್ರಜೆಗಳ ಎಲ್ಲಾ ಹಕ್ಕುಗಳ ಸ್ಥಾಪನೆಗೆ ನಾವು ಬದ್ಧರಾಗಿದ್ದೇವೆ. ಮಹಿಳೆಯರ ಶಿಕ್ಷಣಕ್ಕೆ ಮತ್ತು ಉದ್ಯೋಗಕ್ಕೆ ವ್ಯವಸ್ಥೆ ಮಾಡಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News