ಕೋವಿಡ್ ನಿಂದ ತೀವ್ರ ಆರ್ಥಿಕ ಸಂಕಷ್ಟ ತಾಳಲಾರದೆ ಮಗುವನ್ನೇ ಮಾರಿದ ತಾಯಿ!

Update: 2021-06-22 06:24 GMT
photo: The new Indian express

ಕೇಂದ್ರಪಾರಾ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು  ತನ್ನ 10 ತಿಂಗಳ ಮಗುವನ್ನು 5,000 ರೂ.ಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ  ಕೇಂದ್ರಪಾರಾ ಜಿಲ್ಲೆಯಲ್ಲಿ ರವಿವಾರ ನಡೆದಿದೆ.

ಗ್ರಾಮಸ್ಥರಿಂದ ಈ ವಿಚಾರವನ್ನು ತಿಳಿದುಕೊಂಡ ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ ಹಾಗೂ ಪೊಲೀಸರು ಶಿಶುವನ್ನು ಸೋಮವಾರ ರಕ್ಷಿಸಿದ್ದಾರೆ.

ರಾಜ್ ಕನಿಕಾ ಪೊಲೀಸ್ ವ್ಯಾಪ್ತಿಯಲ್ಲಿ ಮಾಹುರಿಯ ನಿವಾಸಿ 34 ವಯಸ್ಸಿನ  ಅರುಂಧತಿ ರೌಲ್ ಹೆಸರಿನ ಮಹಿಳೆ ನಿರುದ್ಯೋಗದಿಂದಾಗಿ ಕುಟುಂಬವನ್ನು ಸಲಹಲು  ಸಾಧ್ಯವಾಗದ ಕಾರಣ ತನ್ನ ಹೆಣ್ಣು ಮಗುವನ್ನು ಹತ್ತಿರದ ಹಳ್ಳಿಯ ಮಕ್ಕಳಿಲ್ಲದ ದಂಪತಿಗೆ ಮಾರಿದ್ದಾರೆ ಎಂದು ವರದಿಯಾಗಿದೆ.

ಮೂವರು ಹೆಣ್ಣುಮಕ್ಕಳ ತಾಯಿಯಾದ ಅರುಂಧತಿ ಹಲವಾರು ಗ್ರಾಮಸ್ಥರ ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಜಿಲ್ಲೆಯಾದ್ಯಂತ ಕೋವಿಡ್-19 ಎರಡನೇ ಅಲೆ ಆರಂಭವಾದ ಬಳಿಕ  ಮಹಿಳೆಯ  ಉದ್ಯೋಗದಾತರು ಕೆಲಸಕ್ಕೆ ಬರಬಾರದು ಎಂದು ಹೇಳಿದ್ದರು.

ಮಹಿಳೆ  ಜೀವನೋಪಾಯಕ್ಕೆ ಇತರ ಕೆಲಸಕ್ಕಾಗಿ ಪ್ರಯತ್ನಿಸಿದ್ದರು. ಆದರೆ ಅದರಲ್ಲಿ ವಿಫಲವಾದರು. ಹೆಣ್ಣುಮಕ್ಕಳಿಗೆ ಎರಡು ಹೊತ್ತಿನ ಊಟದ ವ್ಯವಸ್ಥೆ ಮಾಡಲು ಸಾಧ್ಯವಾಗದಷ್ಟು ಮಟ್ಟಿಗೆ ಆಕೆಯ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು ಎಂದು ವರದಿಯಾಗಿದೆ.

 "ಬಡತನದ ವಿರುದ್ಧ ಹೋರಾಡುವ ಸಲುವಾಗಿ ಆಕೆಗೆ ತನ್ನ ಶಿಶುವನ್ನು ಮಾರುವ ಸ್ಥಿತಿ ಎದುರಾಯಿತು" ಎಂದು ಮಹೂರಿ ಗ್ರಾಮ ಪಂಚಾಯಿತಿಯ ಸರಪಂಚ್ ಮಮತಾ ಮಂಜರಿ ಮಲ್ಲಿಕ್ ಹೇಳಿದ್ದಾರೆ.

ಅರುಂಧತಿ ಸುಮಾರು 11 ವರ್ಷಗಳ ಹಿಂದೆ ಸಮೀರ್ ರೌಲ್ ಎಂಬಾತನನ್ನು ವಿವಾಹವಾಗಿದ್ದರು. ಪತಿ ಕಳೆದ ವರ್ಷ ಮಹಿಳೆಯನ್ನು ತೊರೆದಿದ್ದ, ನಂತರ ಮಹಿಳೆ ತನ್ನ ಹೆಣ್ಣುಮಕ್ಕಳೊಂದಿಗೆ ಮಹೂರಿಯಲ್ಲಿರುವ ತನ್ನ ತವರು ಮನೆಗೆ ಮರಳಿದ್ದರು.

ಮಗುವಿನ ಮಾರಾಟದ ಸುದ್ದಿ ಹರಡಿದ ನಂತರ, ಕೆಲವು ಗ್ರಾಮಸ್ಥರು ಘಟನೆಯ ಬಗ್ಗೆ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ ಹಾಗೂ  ಪೊಲೀಸರು ಕ್ರಮ ಕೈಗೊಂಡು ಶಿಶುವನ್ನು ಸೋಮವಾರ ರಕ್ಷಿಸಿದ್ದಾರೆ. ಹೆಣ್ಣು ಮಗುವನ್ನು ಕೋರಾ ಗ್ರಾಮದಲ್ಲಿರುವ ಸರಕಾರಿ ಮಕ್ಕಳ ಆರೈಕೆ ಸಂಸ್ಥೆಗೆ (ಸಿಸಿಐ) ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News