ಆನ್‍ಲೈನ್ ಮೂಲಕ ಕೋಟ್ಯಂತರ ರೂ. ವಂಚನೆ ಪ್ರಕರಣ: ಓರ್ವನ ಬಂಧನ

Update: 2021-06-22 13:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.22: ಆನ್‍ಲೈನ್ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ 2 ಸಾವಿರಕ್ಕೂ ಹೆಚ್ಚು ಮಂದಿಗೆ ವಂಚಿಸಿ ಕೋಟ್ಯಂತರ ರೂ. ಹಣ ವಸೂಲಿ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಂಗನಾಥ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಆನ್‍ಲೈನ್ ಮೂಲಕ ಅನಧಿಕೃತವಾಗಿ ಡಿಜಿಟೆಕ್ ಕಂಪೆನಿ ಆರಂಭಿಸಿ ಹಣದ ವಾಹಿವಾಟು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಡಿಜಿಟೆಕ್ ಮಾರ್ಕ್ ಲೈವ್ ವೆಬ್‍ಸೈಟ್ ಮೂಲಕ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಜನರನ್ನು ಚೈನ್ ಲಿಂಕ್ ಸದಸ್ಯರನ್ನಾಗಿ ಮಾಡಿಕೊಂಡು ಅವರಿಗೆ ಹೆಚ್ಚಿನ ಲಾಭಾಂಶ ನೀಡುವ ಆಮಿಷ ನೀಡಿ ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ

15 ಸಾವಿರ ಹಣ ಹೂಡಿಕೆ ಮಾಡಿದರೆ ಡಿಸೆಂಬರ್ 2021ರ ನಂತರ 1 ಲಕ್ಷ, 2022ರ ನಂತರ 5 ಲಕ್ಷ, 2023ರ ನಂತರ 12 ಲಕ್ಷ ಹಾಗೂ ಜನವರಿ 2025ರವರೆಗೆ ಹೂಡಿಕೆ ಮಾಡಿದರೆ 25 ಲಕ್ಷ ರೂ. ಹಣ ಹಿಂತಿರುಗಿಸುವುದಾಗಿ ಆಮಿಷ ಒಡ್ಡಿದ್ದ. 50 ಸಾವಿರ ಒಂದೇ ಬಾರಿ ಹಣ ಹೂಡಿಕೆ ಮಾಡಿದರೆ ಡಿಸೆಂಬರ್ 2021ರ ವೇಳೆಗೆ 3 ಲಕ್ಷ, 2022ರ ವೇಳೆಗೆ 30 ಲಕ್ಷ, 2023ಕ್ಕೆ 45 ಲಕ್ಷ. ಇನ್ನು, ಜನವರಿ 2025ರವರೆಗೆ ಹೂಡಿಕೆ ಮಾಡಿದರೆ 2 ಕೋಟಿ ಹಾಗೂ ಒಂದು ಲಕ್ಷ ಹೂಡಿಕೆ ಮಾಡಿದರೆ ಡಿಸೆಂಬರ್ 2021ರ ವೇಳೆಗೆ 7 ಲಕ್ಷ, 2022ರ ವೇಳೆಗೆ 40 ಲಕ್ಷ, 2023ರ ವೇಳೆಗೆ 90 ಲಕ್ಷ ಹಾಗೂ ಜನವರಿ 2025ರ ವೇಳೆಗೆ 3 ಕೋಟಿ ಹಣ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ರಂಗನಾಥ್ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ಹಲವಾರು ರೀತಿಯ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News