ಮಾದಕ ವಸ್ತು ಮಾರಾಟ ಆರೋಪ: ಕಾನೂನು ವಿದ್ಯಾರ್ಥಿ ಸೇರಿ ಐವರ ಸೆರೆ

Update: 2021-06-23 12:33 GMT

ಬೆಂಗಳೂರು, ಜೂ.23: ಮಾದಕ ವಸ್ತು ಮಾರಾಟ ಸರಬರಾಜು ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಕಾನೂನು ವಿದ್ಯಾರ್ಥಿ ಸೇರಿದಂತೆ ಐವರನ್ನು ಬಂಧಿಸಿ 30 ಲಕ್ಷ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬ್ಯಾಡರಹಳ್ಳಿಯ ಭಾರತ್‍ನಗರ ವ್ಯಾಪ್ತಿಯ ನಾಜಯ್ಯ ಲೇಔಟ್‍ನ ಕಾಲೇಜ್ ಬಳಿಯ ಪಿಜಿಯಲ್ಲಿದ್ದ ಬಂಧಿತ ಆರೋಪಿಗಳು, ಗಾಂಜಾ, ಎಕ್ಸ್ ಟಿಸಿ ಪಿಲ್ಸ್, ಹ್ಯಾಶಿಷ್ ಉಂಡೆ, ಎಲ್‍ಎಸ್‍ಡಿ ಸ್ಟ್ರಿಪ್ಸ್ ಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಬಂಧಿಸಲಾಗಿದೆ.

ಆರೋಪಿಗಳು ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳ ಜೊತೆಗೆ ಮಾದಕ ವಸ್ತುಗಳನ್ನು ಖರೀದಿ ಮಾಡುವ ಉದ್ದೇಶದಿಂದ ಹಿಮಾಚಲ ಪ್ರದೇಶದಲ್ಲಿ ಉಳಿದುಕೊಂಡು ಡಾರ್ಕ್‍ವೆಬ್ ಸೈಟ್‍ನ ಮತ್ತು ಇತರೆ ವೆಬ್ ಸೈಟ್‍ನಿಂದ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆದು ವ್ಯವಹಾರ ಕುದುರಿಸುತ್ತಿದ್ದರು. ಬಿಟ್‍ಕಾಯಿನ್ ಮುಖಾಂತರ ಹಣ ಪಾವತಿಸಿ ಕಡಿಮೆ ಬೆಲೆಗೆ ವಿದೇಶದಿಂದ ಎಕ್ಸ್ಟೆಸಿ ಮಾತ್ರೆ ಸೇರಿದಂತೆ ಮಾದಕ ವಸ್ತುಗಳನ್ನು ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳ ಪೈಕಿ ಇಬ್ಬರು ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳಾಗಿದ್ದು, ಇವರು ಹೆಚ್ಚು ಗಿರಾಕಿಗಳನ್ನು ಹೊಂದುವ ಉದ್ದೇಶದಿಂದ ತಮ್ಮ ಜೊತೆ ಕೆಲಸ ಮಾಡುವ ಸಹೋದ್ಯೋಗಿಗಳನ್ನು ಮನವೊಲಿಸಿ ಅವರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ಉದ್ದೇಶ ಹೊಂದಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.

ಮತ್ತೊಬ್ಬ ಆರೋಪಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಲ್‍ಎಲ್‍ಬಿ ಓದುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಟ್ಟಾರೆ ಆರೋಪಿಗಳಿಂದ ಸುಮಾರು 30 ಲಕ್ಷ ಮೌಲ್ಯದ ಎಂಡಿಎಂಎ ಎಕ್ಸ್ಟೆಸಿ ಮಾತ್ರೆಗಳು, ಎಲ್‍ಎಸ್‍ಡಿ ಸ್ಟ್ರಿಪ್ಸ್ ಗಳು, ಹ್ಯಾಶಿಶ್, ಗಾಂಜಾ, ಮೊಬೈಲ್‍ಗಳು, 1 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News