ಖಾಸಗಿ ಶಾಲಾ ಶುಲ್ಕ: ಪ್ರತಿಷ್ಠೆಯ ಕಣವಾಗದಿರಲಿ

Update: 2021-06-24 06:28 GMT

2021-22 ನೇ ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಾಲಾ ಶುಲ್ಕದ ಹೊರೆ ಪೋಷಕರನ್ನು ಕಾಡುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಮಕ್ಕಳು ಸರಿಯಾಗಿ ಭೌತಿಕ ತರಗತಿಗಳಿಗೆ ಹಾಜರಾಗಿಲ್ಲ. ಈ ವರ್ಷದಿಂದಲಾದರೂ ಮಕ್ಕಳು ಭೌತಿಕ ತರಗತಿಗೆ ಹಾಜರಾಗಲಿ ಎಂಬ ಆಶಯಕ್ಕೆ ಶಾಲಾ ಶುಲ್ಕ ಕತ್ತರಿ ಹಾಕುವಂತಿದೆ. ಶಾಲಾ ಶುಲ್ಕ ಪಾವತಿ ಎಂಬುದು ಬಹುತೇಕ ಪಾಲಕರಿಗೆ ನುಂಗಲಾರದ ಬಿಸಿ ತುಪ್ಪಇದ್ದಂತೆ. ನಮ್ಮ ಮಕ್ಕಳೂ ಸಹ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲಿ ಎಂಬ ಆಶಯಕ್ಕೆ ತಮ್ಮ ಆಸೆ ಆಮಿಷಗಳನ್ನೇ ತ್ಯಾಗ ಮಾಡಿದ ಪಾಲಕರು ಸಾವಿರಾರು ಜನರಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಇದ್ದ ಅಲ್ಪಸ್ವಲ್ಪ ಜಮೀನನ್ನೂ ಮಾರಿದ, ತಾಳಿ ಅಡವಿಟ್ಟ, ತಮ್ಮನ್ನೇ ಜೀತಕ್ಕಿಟ್ಟುಕೊಂಡ ಅದೆಷ್ಟೋ ಪಾಲಕರಿದ್ದಾರೆ. ಅಂಕಗಳೇ ಶಿಕ್ಷಣದ ಜೀವಾಳ ಎಂಬಂತೆ ಬಿಂಬಿಸಿದ್ದೇ ಇಷ್ಟೆಲ್ಲಾ ದುರಂತಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಖಾಸಗಿ ಶಾಲೆಗಳಲ್ಲಿ ಓದಿದರೆ ಹೆಚ್ಚು ಅಂಕಗಳಿಸುತ್ತಾರೆ ಎಂಬ ಭ್ರಮೆಯಲ್ಲಿ ಬಹುತೇಕ ಪಾಲಕರು ಮುಳುಗಿದರು. ಈಗ ಅಂಕಗಳೇ ಎಲ್ಲರಿಗೂ ಮುಳುವಾಗಿವೆ. ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳು ಪಾರಮ್ಯ ಹೊಂದಿದ್ದರಿಂದ ಶಿಕ್ಷಣದ ಭಾಗೀದಾರರೆಲ್ಲರಿಗೂ ವಿಭಿನ್ನ ಒತ್ತಡಗಳು ಪ್ರಾರಂಭವಾದವು. ನಮ್ಮ ಮಗು ಹೆಚ್ಚು ಅಂಕಗಳಿಸಲಿ ಎಂದು ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗೆ ಹಾಕಿ ತಮ್ಮ ಜೀವನವನ್ನು ಒತ್ತಡಕ್ಕೆ ನೂಕಿಕೊಂಡರು. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಓದಿದ ಎಲ್ಲರೂ ಹೆಚ್ಚು ಅಂಕಗಳಿಸಬೇಕೆಂಬ ಹಪಹಪಿ ಶಿಕ್ಷಣ ಸಂಸ್ಥೆಗಳನ್ನು ಕಾಡತೊಡಗಿತು. ಅದಕ್ಕೆ ಶಿಕ್ಷಕರೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಅಂಕಗಳಿಸುವ ದಾರಿಗಳನ್ನೇ ಹುಡುಕುವ ಒತ್ತಡದಲ್ಲಿ ಸಿಲುಕಿದರು.

ಪಾಲಕರು ತನ್ನನ್ನು ಇಲ್ಲಿ ಸೇರಿಸಿದ್ದಾರೆ, ಶಿಕ್ಷಕರು ತನಗೆ ಅಂಕಗಳಿಸುವುದನ್ನು ಕಲಿಸುತ್ತಿದ್ದಾರೆ, ಹಾಗಾಗಿ ತಾನು ಹೆಚ್ಚು ಅಂಕಗಳಿಸಬೇಕು ಎಂದು ಒತ್ತಡದ ವರ್ತುಲದಲ್ಲಿ ಮಗು ಸಿಲುಕಿತು. ಒತ್ತಡದ ವಿಷಯವನ್ನು ಬದಿಗಿಟ್ಟು ಶುಲ್ಕದ ವಿಚಾರ ಚರ್ಚಿಸುವುದಾದರೆ ಶುಲ್ಕದ ಹಣವನ್ನು ಪಾಲಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಈ ಮೂರು ಆಯಾಮಗಳಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ಪೂರ್ಣ ಪ್ರಮಾಣದ ಶುಲ್ಕ ಪಾವತಿಸಲು ಪೋಷಕರಲ್ಲಿ ಆರ್ಥಿಕ ಸಬಲತೆ ಇಲ್ಲ. ಏಕೆಂದರೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ ಬಹುತೇಕ ಪಾಲಕರು ಬಡ ಹಾಗೂ ಮಧ್ಯಮ ವರ್ಗದವರು. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅವರಿಗೆ ದುಡಿಮೆ ಇಲ್ಲ. ಬದುಕು ಬರ್ಬರವಾದ ಪ್ರಸ್ತುತ ದಿನಗಳಲ್ಲಿ ಶುಲ್ಕ ಪಾವತಿ ಬಡವನ ಬೆನ್ನ ಮೇಲೆ ಬೆಟ್ಟವಿಟ್ಟಂತೆ. ಪಾಲಕರು ಶುಲ್ಕ ಪಾವತಿಸಿದರೆ ಮಾತ್ರ ಶಿಕ್ಷಕರಿಗೆ ವೇತನ ಎಂಬುದು ಕಳೆದ ಎರಡು ವರ್ಷಗಳಲ್ಲಿ ಸರ್ವವಿಧಿತವಾಯಿತು. ಪ್ರತಿಷ್ಠಿತ ಹಾಗೂ ಶ್ರೀಮಂತ ಶಿಕ್ಷಣ ಸಂಸ್ಥೆಗಳೂ ಸಹ ತಮ್ಮ ಶಿಕ್ಷಕರಿಗೆ ಶುಲ್ಕದ ಹೊರತಾಗಿ ವೇತನ ನೀಡಲು ಹಿಂದೇಟು ಹಾಕಿರುವುದು ಗಮನಾರ್ಹ. ವೇತನ ಇಲ್ಲದೆ ಶಿಕ್ಷಕರು ಅನುಭವಿಸಿದ ಯಾತನೆ ಯಾವ ಹುದ್ದೆಗೂ ಬೇಡ ಎಂಬಂತಾಯಿತು. ಇತ್ತ ವೇತನವಿಲ್ಲದ, ಅತ್ತ ಬೇರೆ ದುಡಿಮೆ ಗೊತ್ತಿರದ ಬಹುತೇಕ ಶಿಕ್ಷಕರು ಬೀದಿಗೆ ಬಿದ್ದರು. ಅದೆಷ್ಟೋ ಶಿಕ್ಷಕರು ಬೀದಿ ಬದಿ ಹಣ್ಣು ತರಕಾರಿ ಮಾರಿದರು. ಅದೆಷ್ಟೋ ಶಿಕ್ಷಕರು ಗಾರೆ ಹಾಗೂ ಪ್ಲಂಬಿಂಗ್ ಕೆಲಸ ಹುಡುಕಿಕೊಂಡರು. ಅದೆಷ್ಟೊ ಶಿಕ್ಷಕಿಯರು ಪಾತ್ರೆ ಹಾಗೂ ಬಟ್ಟೆ ತೊಳೆಯುವ ಮನೆಕೆಲಸ ಮಾಡಿಕೊಂಡು ಬದುಕಿದರು. ಏಕೆಂದರೆ ಅವರಿಗೆಲ್ಲ ಜೀವ ಹಾಗೂ ಜೀವನ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಶಿಕ್ಷಣ ಸೇವೆಯ ನೆಪದಲ್ಲಿ ತಲೆ ಎತ್ತಿದ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ಶುಲ್ಕವನ್ನೇ ತಮ್ಮ ಬಂಡವಾಳವನ್ನಾಗಿ ನಂಬಿವೆ. ಶುಲ್ಕವಿಲ್ಲದೆ ಶಾಲಾ ನಿರ್ವಹಣೆ ಕಷ್ಟವಾಗಿದೆ. ಕಟ್ಟಡ, ವಿದ್ಯುತ್, ಸಿಬ್ಬಂದಿ ವೇತನ ಹೀಗೆ ವಿವಿಧ ಬಾಬ್ತುಗಳಿಗೆ ಶುಲ್ಕವೇ ಮೂಲಾಧಾರ. ಕಳೆದ ವರ್ಷ ಭೌತಿಕ ತರಗತಿಗಳು ಸಂಪೂರ್ಣವಾಗಿ ನಡೆಯದ ಕಾರಣ ಸರಕಾರ ಶುಲ್ಕ ವಿನಾಯಿತಿ ನೀಡಿತ್ತು. ಆದರೆ ಈ ಬಾರಿ ಪೂರ್ಣ ಪ್ರಮಾಣದ ಶುಲ್ಕ ಪಾವತಿ ಕಡ್ಡಾಯ ಎಂಬುದು ಖಾಸಗಿ ಸಂಸ್ಥೆಗಳ ಅನಿಸಿಕೆ. ಏನೇ ಇರಲಿ. ಅವರವರ ಕಷ್ಟ ಅವರವರಿಗೆ. ಆದಾಗ್ಯೂ ಇಂತಹ ವಿಷಮ ಪರಿಸ್ಥಿತಿಗಳಲ್ಲಿ ಮಾನವೀಯತೆ ಮೊೆಯುವುದು ಅನಿವಾರ್ಯ. ಸರಕಾರ ನಿಗದಿಪಡಿಸಿದಷ್ಟು ಶುಲ್ಕ ಪಾವತಿ ಕಡ್ಡಾಯವಾದರೆ ಕಂತುಗಳಲ್ಲಿ ತುಂಬಲು ಪೋಷಕರಿಗೆ ಅವಕಾಶ ನೀಡಬೇಕು. ಶಿಕ್ಷಣ ಸಂಸ್ಥೆಗಳು ಶುಲ್ಕದ ಮೊತ್ತದಿಂದ ಶಿಕ್ಷಕರಿಗೆ ಪೂರ್ಣ ಪ್ರಮಾಣದ ವೇತನ ನೀಡಬೇಕು. ಈ ವರ್ಷವೂ ಸಂಸ್ಥೆಗಳು ಲಾಭದ ಆಸೆಯನ್ನು ಬದಿಗಿಟ್ಟು ನಿರ್ವಹಣೆಗೆ ಅಗತ್ಯವಾದಷ್ಟು ಶುಲ್ಕ ವಸೂಲಿ ಮಾಡುವ ಮೂಲಕ ವಾಸ್ತವಿಕತೆಯ ಅರಿವನ್ನು ಮೊೆಯಲಿ ಎಂಬುದೇ ಎಲ್ಲರ ಆಶಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News