×
Ad

ಕೊಲೆ ಪ್ರಕರಣ: ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

Update: 2021-06-24 17:07 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.24: ರೌಡಿ ಸೈಯದ್ ಕರೀಂ ಕೊಲೆ ಪ್ರಕರಣ ಸಂಬಂಧ ಆರೋಪಿಯೋರ್ವನ ಕಾಲಿಗೆ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೋವಿಂದಪುರದ ಮುಹಮ್ಮದ್ ಸಲೀಂ(28) ಬಂಧಿತ ಆರೋಪಿಯಾಗಿದ್ದು, ಗುಂಡೇಟಿನಿಂದ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಗುರುವಾರ ಆರೋಪಿಯನ್ನು ಬೆನ್ನತ್ತಿ ಹೋದ ಗೋವಿಂದಪುರ ಪೊಲೀಸ್ ಪೇದೆ ಹಂಸ ಬೀಳಗಿ ಅವರಿಂದ ತಪ್ಪಿಸಿಕೊಳ್ಳಲು ಸಲೀಂ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋವಿಂದಪುರ ಬಳಿಯ ಆಂಜನೇಯ ದೇವಸ್ಥಾನದ ಬಳಿ ಇತ್ತೀಚಿಗೆ ರೌಡಿ ಸೈಯದ್ ಕರೀಂನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದರು.

ಗೋವಿಂದಪುರ ಬಳಿ ಗುರುವಾರ ಮುಂಜಾನೆ ಆರೋಪಿ ಸಲೀಂ ಅಡಗಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಪಿಎಸ್ಸೈ ಇಮ್ರಾನ್ ನೇತೃತ್ವದ ತಂಡ, ಸ್ಥಳಕ್ಕೆ ತೆರಳಿ ಬಂಧಿಸಲು ಮುಂದಾಗಿದೆ. ಬಂಧಿಸಲು ಬೆನ್ನತ್ತಿ ಹೋದ ಗೋವಿಂದಪುರ ಪೊಲೀಸ್ ಪೇದೆ ಹಂಸ ಬೀಳಗಿ ಅವರಿಂದ ತಪ್ಪಿಸಿಕೊಳ್ಳಲು ಸಲೀಂ ಹಲ್ಲೆ ನಡೆಸಿದ್ದಾನೆ.

ಚಾಕುವನ್ನು ದೂರ ಎಸೆದು ಶರಣಾಗುವಂತೆ ಸೂಚನೆ ನೀಡಲಾಯಿತಾದರೂ ಮತ್ತೆ ಹಲ್ಲೆಗೆ ಯತ್ನಿಸಿದ ಸಲೀಂಗೆ ಪಿಎಸ್ಸೈ ಇಮ್ರಾನ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಚಾಕು ಹಿಡಿದು ಬಂದ ಸಲೀಂ ಮೇಲೆ ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಕಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದು, ಆನಂತರ ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News