ಅಸ್ಸಾಂ: ಜಗತ್ತಿನ ಅತಿ ಸಣ್ಣ ಹಂದಿ ಕಾಡಿಗೆ ಬಿಡುಗಡೆ

Update: 2021-06-27 17:57 GMT

ಮಾನಸ್, ಜೂ. 27: ಅಳಿವಿನಂಚಿನಲ್ಲಿರುವ ಪ್ರಬೇಧ ಎಂದು ಒಮ್ಮೆ ಭಾವಿಸಲಾಗಿದ್ದ ಜಗತ್ತಿನ ಅತಿ ಸಣ್ಣ ಹಂದಿ (ಪಿಗ್ಮಿ ಹಾಗ್)ಗಳ ಸಂಖ್ಯೆ ಹೆಚ್ಚಿಸುವ ಸಂರಕ್ಷಣಾ ಕಾರ್ಯಕ್ರಮದ ಒಂದು ಭಾಗವಾಗಿ ಭಾರತದ ಈಶಾನ್ಯ ಕಾಡಿನಲ್ಲಿ 12 ಪಿಗ್ಮಿ ಹಾಗ್ ಗಳನ್ನು ಬಿಡುಗಡೆ ಮಾಡಲಾಗಿದೆ.

ಪೊರ್ಕ್ಯುಲಾ ಸಲ್ವಾನಿಯಾ ಎಂದು ವೈಜ್ಞಾನಿಕವಾಗಿ ಕರೆಯಲಾಗುವ ಪಿಗ್ಮಿ ಹಾಗ್ಗಳು ಉದ್ದ, ಆರ್ದ್ರ ಹುಲ್ಲುಗಾವಲಿನಲ್ಲಿ ವಾಸಿಸುತ್ತವೆ. ಒಮ್ಮೆ ಭಾರತ, ನೇಪಾಳ ಹಾಗೂ ಭೂತಾನ್ನಲ್ಲಿರುವ ಹಿಮಾಲಯದ ತಪ್ಪಲಿನ ಬಯಲು ಪ್ರದೇಶಗಳಲ್ಲಿ ಕಂಡು ಬಂದಿತ್ತು.
1960ರಲ್ಲಿ ಇದರ ಸಂಖ್ಯೆ ಕುಸಿಯಿತು. ಪರಿಣಾಮ 1971ರಲ್ಲಿ ಭಾರತದ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಮತ್ತೆ ಪತ್ತೆಯಾಗುವ ವರೆಗೆ ಪಿಗ್ಮಿ ಹಾಗ್ಗಳು ಅಳಿದು ಹೋಗಿವೆ ಎಂದು ಆಂತಕಪಡಲಾಗಿತ್ತು ಎಂದು ಸಂರಕ್ಷಣಾ ತಜ್ಞರು ಹೇಳಿದ್ದಾರೆ.

1993ರ ಹೊತ್ತಿಗೆ ಇದು ಭೂತಾನ್ ಗಡಿಯಲ್ಲಿರುವ ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದ ಕೆಲವು ಕಡೆಗಳಲ್ಲಿ ಮಾತ್ರ ಪತ್ತೆಯಾಗಿತ್ತು. ಪಿಗ್ಮಿ ಹಾಗ್ ಸಂರಕ್ಷಣಾ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸೇರಿದಂತೆ ಹಲವು ಸಂಘಟನೆಗಳು ಒಳಗೊಂಡಿದ್ದು, ಪಿಗ್ಮಿ ಹಾಗ್ಗಳ ಸಂಖ್ಯೆಯನ್ನು ಪುನರುಜ್ಜೀವನಗೊಳಿಸಲು 1996ರಲ್ಲಿ 6 ಪಿಗ್ಮಿ ಹಾಗ್ಗಳೊಂದಿಗೆ ಸಂತಾನೋತ್ಪತ್ತಿ ಯೋಜನೆ ಆರಂಭಿಸಲಾಗಿತ್ತು.
  
‘‘5 ಹೆಣ್ಣು ಹಾಗೂ 7 ಗಂಡು ಸೇರಿದಂತೆ 12 ಪಿಗ್ನಿ ಹಾಗ್ಗಳನ್ನು ಈ ಬಾರಿ ಬಿಡುಗಡೆ ಮಾಡಿದ್ದೇವೆ’’ ಎಂದು ಕಾರ್ಯಕ್ರಮದ ಕ್ಷೇತ್ರ ವಿಜ್ಞಾನಿ ಧೃತಿಮನ್ ದಾಸ್ ಅವರು ಪಿಗ್ಮಿ ಹಾಗ್ಗಳನ್ನು ಬಿಡುಗಡೆ ಮಾಡಲಾದ ಮಾನಸ್ ರಾಷ್ಟ್ರೀಯ ಉದ್ಯಾನದಲ್ಲಿ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News