ಜುಲೈ1ರಿಂದ ಬನ್ನೇರುಘಟ್ಟ ಮೃಗಾಲಯ, ಸಫಾರಿ ಪುನರಾರಂಭ

Update: 2021-06-29 11:55 GMT

ಬೆಂಗಳೂರು, ಜೂ.29: ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ 91 ದಿನಗಳಿಂದ ಮುಚ್ಚಲಾಗಿದ್ದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಜು.1ರಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಕೆಲವು ನಿರ್ಬಂಧಗಳೊಂದಿಗೆ ಮೃಗಾಲಯಕ್ಕೆ ಹಾಗೂ ಸಫಾರಿಗೆ ಅವಕಾಶ ಮಾಡಿಕೊಡಲಾಗಿದೆ. ಸಫಾರಿಗೆ ಬಳಸಲಾಗುವ ವಾಹನ ಎಸಿ ರಹಿತವಾಗಿರಬೇಕು, ಹೊರಗಿನಿಂದ ಆಹಾರ ತರುವಂತಿಲ್ಲ, ಜನರು ಪ್ರಾಣಿಗಳಿಗೆ ಆಹಾರ ನೀಡುವಂತಿಲ್ಲ ಎಂಬಿತ್ಯಾದಿ ನಿಯಮಗಳನ್ನು ವಿಧಿಸಲಾಗಿದೆ. ಮೃಗಾಲಯದ ಆವರಣದಲ್ಲಿ ಪ್ಯಾಕ್ ಮಾಡಿದ ಆಹಾರ ಸೇವಿಸಲು ಮಾತ್ರ ಅವಕಾಶ ನೀಡಲಾಗಿದೆ.

ಉದ್ಯಾನ ಹಾಗೂ ಸಫಾರಿಗೆ ಅವಕಾಶ ನೀಡುವಂತೆ ಕೋರಿ ಕಳೆದ ವಾರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ಬನ್ನೇರುಘಟ್ಟ ಮೃಗಾಲಯ ಆಡಳಿತ ಪ್ರಸ್ತಾವ ಸಲ್ಲಿಸಿತ್ತು.

ಒಂದು ಬ್ಯಾಚ್‍ನಲ್ಲಿ 2 ಸಾವಿರ ಜನರಿಗೆ ಅನುಮತಿ ನೀಡಲಿದ್ದು, ದಿನಕ್ಕೆ ನಾಲ್ಕು ಬ್ಯಾಚ್‍ಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆ ಇದಕ್ಕೆ ಅನುಮತಿ ನೀಡಿದ್ದು, ಇದೇ ಜು.1ರಿಂದ ಉದ್ಯಾನ ತೆರೆಯುತ್ತೇವೆ ಎಂದು ಮೃಗಾಲಯ ಆಡಳಿತಾಧಿಕಾರಿ ತಿಳಿಸಿದ್ದಾರೆ.

732 ಎಕರೆ ಪ್ರದೇಶದ ಈ ಉದ್ಯಾನದಲ್ಲಿ ಮೃಗಾಲಯ, ಸಫಾರಿ, ಚಿಟ್ಟೆ ಪಾರ್ಕ್ ಹಾಗೂ ಪ್ರಾಣಿ ಸಂರಕ್ಷಣಾ ಕೇಂದ್ರವಿದೆ. ಏಪ್ರಿಲ್ 28ರಂದು ಕೊರೋನ ಕಾರಣವಾಗಿ ಮೃಗಾಲಯವನ್ನು ಮುಚ್ಚಲಾಗಿತ್ತು. ಲಾಕ್‍ಡೌನ್‍ನಿಂದಾಗಿ ಉದ್ಯಾನವನ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದೀಗ 91 ದಿನಗಳ ಪುನರಾರಂಭವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News