ಇರಾಕ್: ಅಮೆರಿಕ ರಾಯಭಾರಿ ಕಚೇರಿಯತ್ತ ರಾಕೆಟ್ ದಾಳಿ; ಇಬ್ಬರು ಅಮೆರಿಕನ್ನರಿಗೆ ಗಾಯ

Update: 2021-07-08 18:34 GMT

ಬಗ್ದಾದ್, ಜು.8: ಕಳೆದ 24 ಗಂಟೆಯ ಅವಧಿಯಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿರುವ ಅಮೆರಿಕಾದ ರಾಜತಾಂತ್ರಿಕರು ಮತ್ತು ಸೇನಾಪಡೆಯನ್ನು ಗುರಿಯಾಗಿಸಿಕೊಂಡು ಕನಿಷ್ಟ 3 ರಾಕೆಟ್ ಮತ್ತು ಡ್ರೋನ್ ದಾಳಿ ನಡೆದಿದೆ ಎಂದು ಅಮೆರಿಕ ಮತ್ತು ಇರಾಕ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ‌

ಇರಾಕ್ನಲ್ಲಿರುವ ಅಮೆರಿಕನ್ ಸೇನಾನೆಲೆಯ ಮೇಲೆ ಕನಿಷ್ಟ 14 ರಾಕೆಟ್ ದಾಳಿ ನಡೆದಿದ್ದು ಇಬ್ಬರು ಅಮೆರಿಕನ್ ಸಿಬಂದಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ. ವಾಯುನೆಲೆಯ ಹೊರ ಆವರಣದಲ್ಲಿ ರಾಕೆಟ್ ಅಪ್ಪಳಿಸಿದ್ದು ಇಬ್ಬರಿಗೆ ಅಲ್ಪಪ್ರಮಾಣದ ಗಾಯಗಳಾಗಿವೆ ಎಂದು ಮೈತ್ರಿಪಡೆಯ ವಕ್ತಾರ, ಅಮೆರಿಕ ಸೇನೆಯ ಕರ್ನಲ್ ವೇಯ್ನಾ ಮೊರೊಟ್ಟೊ ಹೇಳಿದ್ದಾರೆ. ದಾಳಿಯ ಹೊಣೆಯನ್ನು ತಕ್ಷಣ ಯಾರೂ ವಹಿಸಿಕೊಂಡಿಲ್ಲವಾದರೂ, ಇರಾನ್ ಬೆಂಬಲಿತ ಸಶಸ್ತ್ರ ಗುಂಪಿನ ಕೃತ್ಯ ಇದಾಗಿರಬಹುದು ಎಂದು ಶಂಕಿಸಲಾಗಿದೆ. 

ಇರಾಕ್ನಲ್ಲಿ ಐಸಿಸ್ ವಿರುದ್ಧದ ಅಂತರಾಷ್ಟ್ರೀಯ ಮೈತ್ರಿಪಡೆಯ ಭಾಗವಾಗಿ ನಿಯೋಜಿಸಲಾಗಿರುವ ಅಮೆರಿಕದ 2,500 ಸೈನಿಕರನ್ನು ಗುರಿಯಾಗಿಸಿಕೊಂಡು ಕಳೆದ 1 ವರ್ಷ ಸುಮಾರು 50 ದಾಳಿ ನಡೆದಿದೆ. ಕಳೆದ ತಿಂಗಳು ಇರಾಕ್-ಸಿರಿಯಾ ಗಡಿಭಾಗದಲ್ಲಿ ಅಮೆರಿಕ ಪಡೆ ನಡೆಸಿದ ದಾಳಿಯಲ್ಲಿ ತಮ್ಮ 4 ಸದಸ್ಯರನ್ನು ಕಳೆದುಕೊಂಡ ಇರಾನ್ ಬೆಂಬಲಿತ ಇರಾಕ್ ಬಂಡುಕೋರರ ತಂಡವು ಈ ದಾಳಿಗೆ ಪ್ರತೀಕಾರ ತೀರಿಸುವುದಾಗಿ ಘೋಷಿಸಿತ್ತು. 

ಗುರುವಾರ ಬಗ್ದಾದ್ನಲ್ಲಿರುವ ಅಮೆರಿಕ ದೂತಾವಾಸದ ಮೇಲೆ 2 ರಾಕೆಟ್ ಉಡಾಯಿಸಲಾಗಿತ್ತು. ರಾಯಭಾರಿ ಕಚೇರಿಯ ರಾಕೆಟ್ ನಿರೋಧಕ ವ್ಯವಸ್ಥೆಯು ಇದರಲ್ಲಿ ಒಂದರ ದಿಕ್ಕು ಬದಲಿಸಲು ಶಕ್ತವಾಗಿದೆ. 2ನೇ ರಾಕೆಟ್ ಕಚೇರಿಯ ಹೊರಭಾಗದಲ್ಲಿ ಬಿದ್ದಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿರಿಯಾದ ಪೂರ್ವಭಾಗದಲ್ಲಿ ಇರಾಕ್ ಗಡಿಭಾಗದಲ್ಲಿರುವ ಅಲ್ ಒಮರ್ ತೈಲಬಾವಿಯ ಮೇಲೆ ಡ್ರೋನ್ ದಾಳಿ ನಡೆಸಲಾಗಿದ್ದು ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News