ಹೈಟಿ ಅಧ್ಯಕ್ಷ ಮೊಯಿಸ್ ಹತ್ಯೆ ಪ್ರಕರಣ: 17 ಶಂಕಿತ ವಿದೇಶಿ ಆರೋಪಿಗಳ ಬಂಧನ; ಪೊಲೀಸರ ಹೇಳಿಕೆ

Update: 2021-07-09 14:23 GMT
photo: twitter/@arabnews

ಪೋರ್ಟ್ ಒ-ಪ್ರಿನ್ಸ್, ಜು.9: ಹೈಟಿಯ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರನ್ನು ಅಮೆರಿಕ ಮತ್ತು ಕೊಲಂಬಿಯಾದ ಪ್ರಜೆಗಳಿದ್ದ 28 ಮಂದಿಯಿದ್ದ ತಂಡ ಹತ್ಯೆ ಮಾಡಿದ್ದು ಇದರಲ್ಲಿ 17 ಶಂಕಿತರನ್ನು ಬಂಧಿಸಲಾಗಿದೆ. ಇನ್ನೂ 8 ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ಹೈಟಿಯ ಪೊಲೀಸರು ಗುರುವಾರ ಹೇಳಿದ್ದಾರೆ. ಹಂತಕರು ಬಳಸಿದ್ದ ಶಸ್ತ್ರ ಹಾಗೂ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದವರು ಹೇಳಿದ್ದಾರೆ.

28 ಮಂದಿಯ ಹಂತಕರ ತಂಡದಲ್ಲಿ 26 ಕೊಲಂಬಿಯಾದ ಪ್ರಜೆಗಳಾಗಿದ್ದರು. ಇವರಲ್ಲಿ 15 ಕೊಲಂಬಿಯಾ ಪ್ರಜೆಗಳು ಹಾಗೂ ಅಮೆರಿಕ ಮೂಲದ ಇಬ್ಬರು ಹೈಟಿ ಪ್ರಜೆಗಳನ್ನು ಬಂಧಿಸಲಾಗಿದೆ. ಕೊಲಂಬಿಯಾದ 3 ಪ್ರಜೆಗಳನ್ನು ಹತ್ಯೆ ಮಾಲಾಗಿದ್ದು 8 ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ಹೈಟಿಯ ನ್ಯಾಷನಲ್ ಪೊಲೀಸ್ ಪಡೆಯ ಮುಖ್ಯಸ್ಥ ಲಿಯೋನ್ ಚಾರ್ಲ್ಸ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. 

ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೈವಾನ್, ಹೈಟಿಯಲ್ಲಿರುವ ತನ್ನ ದೂತಾವಾಸದ ಆವರಣದಲ್ಲಿ ಅವಿತಿದ್ದ 11 ಶಂಕಿತರನ್ನು ಬಂಧಿಸಿರುವುದು ದೃಢಪಟ್ಟಿದೆ. ದೂತಾವಾಸದ ಒಳ ಪ್ರವೇಶಿಸಲು ಪೊಲೀಸರು ಅನುಮತಿ ಪಡೆದಿದ್ದರು ಎಂದಿದೆ. ಹಂತಕರ ತಂಡದಲ್ಲಿದ್ದ ಕೊಲಂಬಿಯಾ ಪ್ರಜೆಗಳಲ್ಲಿ ಕನಿಷ್ಠ 6 ಸದಸ್ಯರು ಮಾಜಿ ಯೋಧರಾಗಿರುವ ಸಾಧ್ಯತೆಯಿದ್ದು ತನಿಖೆಗೆ ಸಹಕರಿಸುವಂತೆ ಸೇನೆ ಹಾಗೂ ಪೊಲೀಸರಿಗೆ ಸೂಚಿಸಿರುವುದಾಗಿ ಕೊಲಂಬಿಯಾದ ರಕ್ಷಣಾ ಸಚಿವ ಡಿಯೆಗೊ ಮೊಲಾನೊ ಹೇಳಿದ್ದಾರೆ. 

ಬಂಧಿತರು ಅಮೆರಿಕನ್ ಮೂಲದ ವ್ಯಕ್ತಿಗಳು ಎಂದು ತಾನು ದೃಢಪಡಿಸುವುದಿಲ್ಲ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆ ಹೇಳಿದೆ. ಹಂತಕರು ವೃತ್ತಿಪರ ಹಂತಕರ ಕೃತ್ಯ ಇದಾಗಿದೆ ಎಂದು ವಾಶಿಂಗ್ಟನ್ನಲ್ಲಿರುವ ಹೈಟಿ ರಾಯಭಾರಿ ಹೇಳಿದ್ದಾರೆ. ಅತ್ಯಂತ ಬಿಗಿಭದ್ರತೆಯ ಅಧ್ಯಕ್ಷರ ನಿವಾಸಕ್ಕೇ ನುಗ್ಗಿ ಹತ್ಯೆಗೈದಿರುವುದು ಭದ್ರತಾ ಲೋಪಕ್ಕೆ ಉದಾಹರಣೆಯಾಗಿದೆ ಎಂದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. 

ಹೈಟಿ ರಾಜಧಾನಿ ಪೋರ್ಟ್-ಒ-ಸ್ಪೇನ್ನಲ್ಲಿ ಅಂಗಡಿ, ಬ್ಯಾಂಕ್ ಹಾಗೂ ಗ್ಯಾಸ್ ಸ್ಟೇಷನ್ಗಳು ಮುಚ್ಚಿದ್ದು, ನೆರೆಯ ಡೊಮಿನಿಕನ್ ರಿಪಬ್ಲಿಕ್ ಜತೆಗಿನ ಗಡಿಯನ್ನು ಮುಚ್ಚಲಾಗಿದೆ. ತನಿಖೆಗೆ ಅಮೆರಿಕದ ಸಹಕಾರ ಕೋರಲಾಗಿದೆ ಎಂದು ಹೈಟಿ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಅಮೆರಿಕದ ಅತ್ಯಂತ ಬಡದೇಶ ಎನಿಸಿರುವ ಹೈಟಿಯಲ್ಲಿ ಅಧ್ಯಕ್ಷರ ಹತ್ಯೆ ಬಳಿಕ ಇಬ್ಬರು ತಾವೇ ಪ್ರಧಾನಿ ಎಂದು ಪ್ರತಿಪಾದಿಸಿರುವುದು ಹೊಸ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ. ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಜೋಸೆಫ್ ಕ್ಲಾಡ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. 

ಆದರೆ ಅಧ್ಯಕ್ಷ ಮೊಯಿಸ್ ತನ್ನನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ ಎಂದು ಆರಿಯಲ್ ಹೆನ್ರಿ ಹೇಳಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಜೋಸೆಫ್ ಪ್ರಧಾನಿಯಲ್ಲ. ಒಂದು ದೇಶಕ್ಕೆ ಹಲವು ಪ್ರಧಾನಿಗಳಿರಲು ಸಾಧ್ಯವೇ ಎಂದು ಹೆನ್ರಿ ಪ್ರಶ್ನಿಸಿದ್ದಾರೆ. ಹೈಟಿಯಲ್ಲಿ 2018ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಆದರೆ ಅಧ್ಯಕ್ಷ ಮೊಯಿಸ್ ಅಧಿಕಾರಾವಧಿ ಮುಕ್ತಾಯಗೊಳ್ಳುವ ಅವಧಿ ಬಗ್ಗೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ, ನ್ಯಾಯಾಲಯದ ಆದೇಶದಂತೆ ಮೊಯಿಸ್ ಅವರೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದರು. ಆದರೆ ಮೊಯಿಸ್ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದಾಹ, ದೇಶದ ಆರ್ಥಿಕ ವ್ಯವಸ್ಥೆ ಹದಗೆಡಿಸಿದ್ದು ಮತ್ತಿತರ ಆರೋಪಗಳಿದ್ದು 2017ರ ಬಳಿಕ ಅವರ ವಿರುದ್ಧ ದೇಶದಲ್ಲಿ ನಿರಂತರ ಪ್ರತಿಭಟನೆ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News