ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸಿಸಿಬಿ ದಾಳಿ: ಮಾದಕ ವಸ್ತು, ಮೊಬೈಲ್, ಚಾಕುಗಳು ವಶಕ್ಕೆ

Update: 2021-07-10 04:30 GMT

ಬೆಂಗಳೂರು, ಜು.10: ನಗರದ ಪರಪ್ಪನ ಅಗ್ರಹಾರ ಕಾರಾಗೃಹದೊಳಗೆ ಸಿಸಿಬಿ ಪೊಲೀಸರು ಶನಿವಾರ ಮುಂಜಾನೆ ದಿಢೀರ್ ದಾಳಿ ಮಾಡಿದ್ದು, ಕೈದಿಗಳಿಂದ ಗಾಂಜಾ, ಚಾಕು, ಮೊಬೈಲ್‌ ಫೋನ್ ಗಳು, ಸಿಮ್ ಕಾರ್ಡ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

. ಕಾರಾಗೃಹದಲ್ಲಿರುವ ಕೈದಿಗಳು ಮೊಬೈಲ್ ಬಳಸುತ್ತಿದ್ದಾರೆ. ಅಲ್ಲಿಂದಲೇ ಅಪರಾಧ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಹಾಗೂ ಮಾದಕ ವಸ್ತು ಸೇವಿಸುತ್ತಿದ್ದಾರೆಂಬ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

 "ಜೈಲಿನಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕುವ ಭಾಗವಾಗಿ ಇಂದು ಮುಂಜಾನೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಶ್ವಾನ ದಳದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗಾಂಜಾ, ಗಾಂಜಾ ಸೇದುವ ಕೊಳವೆಗಳು, ಮೊಬೈಲ್ ಫೋನ್ , ಸಿಮ್ಸ್ ಗಳು, ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಬೆಂಗಳೂರು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ರೌಡಿಶೀಟರ್ ಗಳ‌ ಮನೆ ಮೇಲೂ ದಾಳಿ: ಬೆಂಗಳೂರಿನ ಹಲವು ರೌಡಿಶೀಟರ್ ಗಳ‌ ಮನೆಗಳ‌‌ ಮೇಲೂ ಇಂದು ಮುಂಜಾನೆ ಪೊಲೀಸರು ದಾಳಿ‌ ನಡೆಸಿದ್ದಾರೆ. ಈ ಸಂದರ್ಭ ಮಾರಕಾಸ್ತ್ರ ಹಾಗೂ ಹಲವು ವಸ್ತುಗಳನ್ನು ಜಪ್ತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News