ಸಹಕಾರಿ ಇಲಾಖೆ “ಪ್ರತ್ಯೇಕಿಸಿದ್ದಕ್ಕೆ” ಆತಂಕ ಎಲ್ಲಿರಬೇಕು?

Update: 2021-07-10 07:05 GMT

ಸಂವಿಧಾನದ ಆಶಯಗಳಲ್ಲಿ ಒಂದೋ ಎರಡೋ ಏರುಪೇರುಗಳು ನಡೆಯುತ್ತಿವೆ ಅನ್ನಿಸಿದರೆ, ಅದನ್ನು ಸಂವಿಧಾನ ಒದಗಿಸಿರುವ ಡೆಮೊಕ್ರಾಟಿಕ್ ವ್ಯವಸ್ಥೆಯೊಳಗೇ ಗುರುತಿಸಿ, ಅಭಿಪ್ರಾಯ ವ್ಯಕ್ತಪಡಿಸುವುದು, ಅಗತ್ಯ ಬಿದ್ದರೆ ವಿರೋಧಿಸುವುದು-ಪ್ರತಿಭಟಿಸುವುದು ಸಾಧ್ಯ ಆಗುತ್ತದೆ.

ಆದರೆ, ಒಂದು ಪೂರ್ಣಪ್ರಮಾಣದ ಅಜೆಂಡಾ, ಅದನ್ನು ಅನುಷ್ಠಾನಕ್ಕೆ ತರಲು ಅಗತ್ಯ ಇರುವ ಹನ್ನೊಂದು ಅಕ್ಷೋಹಿಣಿ ಚತುರಂಗಬಲದ ಸೇನೆ ಎಲ್ಲವನ್ನೂ ಇಟ್ಟುಕೊಂಡು, ಸಾರಾಸಗಟು ಬುಲ್ಡೋಜಿಂಗ್‌ಗೆ ಹೊರಟಾಗ ಎಲ್ಲಿ ಯಾವುದನ್ನು ವಿರೋಧಿಸುವುದು? ಯಾವುದನ್ನು ಅಧ್ಯಯನ ಮಾಡುವುದು? ಯಾವುದನ್ನು ಒಪ್ಪುವುದು-ಯಾವುದು ಅಪಾಯಕಾರಿ?...ಯಾವುದೂ ಗೊತ್ತಾಗದಾಗ ಲೂಸ್ ಕ್ಯಾನನ್‌ಗಳು ಸಿಕ್ಕಸಿಕ್ಕೆಡೆಗೆ “ಕಂಡಲ್ಲಿ ಗುಂಡು” ಎಸೆಯಬೇಕಾಗುತ್ತದೆ. ಅಂತಹದೊಂದು ಸ್ಥಿತಿ ಈಗ ಎದುರಾಗಿದೆ.

ಹಾಲೀ ಕೇಂದ್ರ ಸರ್ಕಾರ ಹಾಕಿರುವ ಚುಕ್ಕೆ ಗುಪ್ಪೆಗಳು ಯಾವ ಪ್ರಮಾಣದಲ್ಲಿವೆ ಎಂದರೆ, ಈಗ ಆ ಚುಕ್ಕೆಗಳನ್ನು ಜೋಡಿಸಿ ಆಕಾರ ಕೊಡುವ, ಚಿತ್ರ ಪೂರ್ಣಗೊಳಿಸುವ ಕೆಲಸ ಆರಂಭ ಆಗಿರುವುದು ದೇಶದ ಎಲ್ಲ ಪ್ರತಿಪಕ್ಷಗಳನ್ನೂ ಕಂಗೆಡಿಸಿದೆ. ಇಲ್ಲಿಯ ತನಕ ತಳಮಟ್ಟದಲ್ಲಿ ಏನೂ ಅಧ್ಯಯನ ನಡೆಸದೆ, ಪ್ರತೀ ಬೆಳವಣಿಗೆಗೂ ಒಂದು ಪತ್ರಿಕಾ ಹೇಳಿಕೆ ಎಸೆದು, ಹೆಚ್ಚೆಂದರೆ ಪಾರ್ಲಿಮೆಂಟಿನಲ್ಲಿ ಒಂದು ಸಭಾತ್ಯಾಗ ಮಾಡಿ ಸುಧಾರಿಸುತ್ತಿದ್ದವರು ಈಗ ಕಂಗಾಲಾಗತೊಡಗಿದ್ದಾರೆ.

ನಿಜಕ್ಕೆಂದರೆ,“ಶ್ಯಾಡೋ ಕ್ಯಾಬಿನೆಟ್” ಸ್ವರೂಪದಲ್ಲಿ ಪ್ರತಿಯೊಂದು ಇಲಾಖೆಯಲ್ಲೂ ಏನು ನಡೆದಿದೆ ಎಂಬುದನ್ನು ಅಧ್ಯಯನ ನಡೆಸಿ, ಅದು ದೇಶದ ಹಿತಾಸಕ್ತಿ-ಸಂವಿಧಾನ ರಕ್ಷಣೆಗೆ ಎಷ್ಟು ಪೂರಕ ಎಂದು ತೀರ್ಮಾನಿಸಿ, ಅದಕ್ಕನುಗುಣವಾಗಿ ಕಾರ್ಯತಂತ್ರ ರೂಪಿಸುವ ಶ್ರಮ ದೇಶದ ಪ್ರತಿಪಕ್ಷಗಳಿಂದ ನಡೆಯಬೇಕಿತ್ತು. ಶ್ರಮ ಇಲ್ಲದೇ ಲಾಭ ಗಳಿಸುವ ಸಾಧ್ಯತೆಗಳಿಗೆ ಮಾತ್ರ ತಲೆಕೆಡಿಸಿಕೊಂಡದ್ದರಿಂದ ಪ್ರತಿಪಕ್ಷಗಳು ಈ ಸ್ಥಿತಿಗೆ ತಲುಪಿವೆ. ಗುರಿ ಇಲ್ಲ, ಗುರಿ ತಲುಪುವ ಹಾದಿಯೂ ಇಲ್ಲ, ಹುಡುಕುವ ಶ್ರಮವೂ ಬೇಕಿಲ್ಲ. ಅಂತಹ ಪ್ರತಿಪಕ್ಷಗಳು ನಮ್ಮವು.

ಮೊನ್ನೆ ಕೇಂದ್ರ ಸರ್ಕಾರ ಸಹಕಾರಿ ಇಲಾಖೆಯನ್ನು ಪ್ರತ್ಯೇಕಿಸಿ, ಖಾತೆಯನ್ನು ಗೃಹಸಚಿವರಿಗೆ ಕೊಟ್ಟ ಬೆನ್ನಲ್ಲೇ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದೆ. ಪ್ರಕಾಶ್ ಕಾರಟ್ ಅವರಂತಹ ಹಿರಿಯ ಅನುಭವೀ ರಾಜಕಾರಣಿಯೇ ಇದು ಕೇಂದ್ರ ಸರ್ಕಾರ ರಾಜ್ಯಗಳ ಪಟ್ಟಿಯಲ್ಲಿ ಬರುವ “ಸಹಕಾರ”ವನ್ನು ತಾನು ಕಸಿದುಕೊಳ್ಳಲು ಹೊರಟದ್ದೆಂದು ಹೇಳಿಕೆ ನೀಡಿದರು! ತಮಾಷೆ ಎಂದರೆ, ಈ ಪಟ್ಟಿಯಿಂದ ಕಸಿದುಕೊಳ್ಳುವ ಕೆಲಸ 2002ರಲ್ಲೇ ಮುಗಿದಿದೆ! ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ವ್ಯವಹರಿಸುವ ಮಲ್ಟಿಸ್ಟೇಟ್ ಸಹಕಾರಿ ಸಂಸ್ಥೆಗಳ ನಿಯಂತ್ರಣಕ್ಕಾಗಿ Multi State Co-operative Society Act 2002 (39 of 2002) ಬಂದಾಗಲೇ ಆ ಕೆಲಸ ಆಗಿದೆ. ಅದು ಲಿಬರಲೈಸ್ ಆದ ವ್ಯವಸ್ಥೆಯೊಂದರಲ್ಲಿ ಅನಿವಾರ್ಯ ಕೂಡ ಇತ್ತು.

ಹಾಗಾದರೆ ಈಗ ಯಾಕೆ ಸಹಕಾರಿ ಇಲಾಖೆಯನ್ನು ಪ್ರತ್ಯೇಕಗೊಳಿಸಲಾಯಿತು?
ನಾನು ತಡಕಾಡಿದಾಗ ನನಗೆ ಸಿಕ್ಕಿದ್ದು, ಈ ಕೆಳಗಿನ ಕಾರಣಗಳು. ಅವುಗಳಲ್ಲಿ ಹಲವನ್ನು ಗಮನಿಸಿದಾಗ ಈ ಬದಲಾವಣೆ ಅಗತ್ಯ ಇತ್ತು ಅನ್ನಿಸುತ್ತದೆ. ಆದರೆ, ಕೃಷಿ ಆದಾಯ ದುಪ್ಪಟ್ಟು ಯೋಜನೆಯ ಭಾಗವಾಗಿ ಈ ಬದಲಾವಣೆ ಎಲ್ಲಿ ನಿಲ್ಲಲಿದೆ, ಅದಕ್ಕೆ ಸಂಬಂಧಿಸಿದಂತೆ ಇನ್ನೇನು ಹೊಸ ಕಾನೂನು ಬದಲಾವಣೆಗಳು ಬರಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಮೊದಲಿಗೆ ಈ ಬದಲಾವಣೆ ಯಾಕೆ ಅಗತ್ಯ ಇದೆ ಎಂಬುದನ್ನು ನೋಡೋಣ.
1. ದೇಶದಲ್ಲಿ ಸಹಕಾರಿ ಸಂಸ್ಥೆಗಳು ಬ್ಯಾಂಕಿಂಗ್ ವ್ಯವಹಾರದಲ್ಲಿ ಎಷ್ಟು ಕಾರ್ಪೆಟ್ ಅಡಿಯ ವ್ಯವಹಾರಗಳನ್ನು ನಡೆಸುತ್ತಿವೆ ಎಂಬುದು, ಅದರಲ್ಲಿರುವವರಿಗೆ ಎಲ್ಲರಿಗೂ ಗೊತ್ತು. ದೇಶದ ಬಹುತೇಕ ಕಪ್ಪುಹಣ ಆ ಸರ್ವೀಸ್ ರಸ್ತೆಯಲ್ಲೇ ಈವತ್ತಿಗೂ ಓಡಾಡುವುದು. ಅಲ್ಲಿ ರಿಸರ್ವ್ ಬ್ಯಾಂಕಿನ ಮೇಲುಸ್ತುವಾರಿ ಬಹಳ ಸೀಮಿತ. ನೋಟು ರದ್ಧತಿ ಕಾಲದಲ್ಲಿ ಸ್ವತಃ ಈಗ ಸಹಕಾರಿ ಇಲಾಖೆಯ ಉಸ್ತುವಾರಿ ಹೊತ್ತಿರುವ ಅಮಿತ್ ಶಾ ಅವರು ಅಧ್ಯಕ್ಷರಾಗಿದ್ದ ಮತ್ತು ಅವರ ಪಕ್ಷಕ್ಕೆ ಸೇರಿದ್ದ ಗುಜರಾತಿನ 11 ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ 3118.51ಕೋಟಿ ರೂ. ಶಂಕಾಸ್ಪದವಾಗಿ ಡೆಪಾಸಿಟ್ ಆಯಿತು ಎಂದು ಮಾಹಿತಿ ಹಕ್ಕು ದಾಖಲೆ ಆಧರಿಸಿ ಕಾಂಗ್ರೆಸ್ ಆಪಾದನೆ ಮಾಡಿತ್ತು. (https://www.indiatoday.in/…/rs-3-118-crore-deposited-in-11-…) ಅದರ ಕತೆ ಏನಾಯ್ತೋ? ಅದರ ತನಿಖೆ ಆಯ್ತೋ? ಗೊತ್ತಿಲ್ಲ. ಇಂತಹ ಪ್ರಕರಣಗಳು ದೇಶದಾದ್ಯಂತ ಎಷ್ಟಿವೆಯೋ ಗೊತ್ತಿಲ್ಲ. ಆದರೆ, ಅಂದು ಆಪಾದನೆ ಹೊತ್ತಿದ್ದವರೇ ಇಂದು ಸಹಕಾರಿ ಖಾತೆಯನ್ನೇ ಹೊತ್ತಿರುವುದಂತೂ ಸತ್ಯ.

2. ಇತ್ತೀಚೆಗಿನ ಒಂದು CAGಆಡಿಟ್ ವರದಿಯ ಪ್ರಕಾರ, ದೇಶದಲ್ಲಿರುವ ಸಹಕಾರ ಸಂಸ್ಥೆಗಳಲ್ಲಿ ಬಹುತೇಕ ಸಂಸ್ಥೆಗಳು ಆದಾಯ ತೆರಿಗೆ ಬಲೆಯಿಂದ ನುಸುಳಿಕೊಂಡು ಕುಳಿತಿವೆ. ಕರ್ನಾಟಕದಲ್ಲೇ 89.03%ಸಹಕಾರಿ ಸಂಸ್ಥೆಗಳು ಆದಾಯ ತೆರಿಗೆ ಬಲೆಯಿಂದ ನುಸುಳಿಕೊಂಡಿವೆ (ವರದಿ ಇಲ್ಲಿದೆ: https://cag.gov.in/…/Union_DT_PA__16_2020-0605adc8f5f0416.0…)

3. ರಾಜ್ಯವಾರು, ಸಹಕಾರಿ ಸಂಘಗಳ ವಿಧವಾರು ನಿಯಮಗಳಲ್ಲಿ ತಾರತಮ್ಯ ಇರುವುದರಿಂದ ಏಕರೂಪದ ನಿಯಮಗಳಡಿ ಸಹಕಾರ ಸಂಘಗಳನ್ನು ತರುವುದು ಮತ್ತು ಬ್ಯಾಂಕುಗಳಂತೆಯೇ ಅವನ್ನು ಉತ್ತರದಾಯಿ, ಪಾರದರ್ಶಕಗೊಳಿಸುವುದು ಅನಿವಾರ್ಯ.

4. ಕೃಷಿ ಆದಾಯ ದುಪ್ಪಟ್ಟು ಮಾಡುವಲ್ಲಿ ಕೃಷಿ ಭೂಮಿಯನ್ನು ಪೂಲ್ ಮಾಡಿ ದೊಡ್ಡ ಗಾತ್ರದ ಭೂಮಿಯಲ್ಲಿ ಕೃಷಿ ಮಾಡುವುದು ಅನಿವಾರ್ಯ ಎಂದಾದರೆ, ಅಂತಹದೊಂದು ವ್ಯವಸ್ಥೆಯಲ್ಲಿ “ಕಾರ್ಪೋರೇಟ್ ಶಕ್ತಿಗಳನ್ನು ದೂರ ಇರಿಸುವುದಕ್ಕೆ ಮತ್ತು ರೈತರ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೆ” ಇರುವ ಏಕೈಕ ಹಾದಿ “ಸಹಕಾರಿ ರಂಗದಲ್ಲಿ ಗುತ್ತಿಗೆ/ಕಾರ್ಪೋರೇಟ್ ಕೃಷಿ” ಇದರ ಯಶಸ್ವೀ ಮಾದರಿಯನ್ನು ಈಗಾಗಲೇ ಕೇರಳದಲ್ಲಿ ಕುಟುಂಬಶ್ರೀ ಯೋಜನೆ ಕಟ್ಟಿಕೊಟ್ಟಿದೆ. ಈ ಹಾದಿಯಲ್ಲಿ ಸಹಕಾರಿ ಸಂಸ್ಥೆಗಳಿಗೆ FPO ( ರೈತ ಉತ್ಪಾದನಾ ಸಂಸ್ಥೆ)ಗಳಾಗಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಾರ್ಯಾಚರಿಸಲು ಬದಲಾವಣೆಗಳು ಅಗತ್ಯ ಇದ್ದರೆ ಅದು ಸ್ವಾಗತಾರ್ಹ. ಅಲ್ಲಿ ಕಾರ್ಪೋರೇಟ್ ಹಿತಾಸಕ್ತಿಗಳು ನುಸುಳದಂತೆ, ಹಾಗೆ ನುಸುಳಲು ಅಗತ್ಯ ಇರುವ ಕಾನೂನು ಬದಲಾವಣೆಗಳು ಆಗದಂತೆ ನೋಡಿಕೊಂಡರೆ ಸಾಕಾಗುತ್ತದೆ.

ಇಂತಹ ಸಂಗತಿಗಳನ್ನು ಆಳವಾಗಿ ಅಧ್ಯಯನ ನಡೆಸದೇ, ಸಂತೆಗೆ ಬಂದಿಳಿದಾಗ ಒಂದು ಮೊಳ ನೇಯ್ದಂತೆ, ಒಂದು ಬೀಸು ಹೇಳಿಕೆ ನೀಡಿ ಕೈತೊಳೆದುಕೊಳ್ಳುವ ಪ್ರತಿಪಕ್ಷಗಳು ಕೂಡ ಹಾನಿಮಾಡುತ್ತಿರುವುದು ಸಂವಿಧಾನದ ಆಶಯಗಳಿಗೇ ಎಂಬುದನ್ನು ಮರೆಯದಿರೋಣ. ಕೇಂದ್ರದಲ್ಲಿ ಸಹಕಾರ ಇಲಾಖೆ ಕೄಷಿ ಇಲಾಖೆಯಿಂದ ಪ್ರತ್ಯೇಕಗೊಂಡಿರುವ ಬಗ್ಗೆ ಅಧ್ಯಯನ-ಚರ್ಚೆ ಆಗಲಿ; ಅದಿಲ್ಲದೇ ಸಾರಾಸಗಟು “ಲೂಸ್ ಕ್ಯಾನನ್ ಫೈರಿಂಗ್” ಮಾಡುವುದು ಆತ್ಮಘಾತಕ.
#Agriculture #Cooperation #FPO #ದುಪ್ಪಟ್ಟು

Full View

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News