ಜನಸಂಖ್ಯೆ ಅಭಿವೃದ್ಧಿಗೆ ಪೂರಕವಾಗಿರಲಿ

Update: 2021-07-10 19:30 GMT

ಜನಸಂಖ್ಯೆಯು ಯಾವುದೇ ರಾಷ್ಟ್ರದ ನೈಜ ಸಂಪತ್ತಾಗಿರುತ್ತದೆ. ಒಂದು ರಾಷ್ಟ್ರದ ಅಭಿವೃದ್ಧಿಯು ಆ ರಾಷ್ಟ್ರದಲ್ಲಿರುವ ಜನಸಂಖ್ಯೆಯನ್ನು ಅವಲಂಬಿಸಿದೆಯಲ್ಲದೆ, ಇದು ಸರಕು ಮತ್ತು ಸೇವೆಗಳನ್ನು ಉತ್ಪಾದಿಸಲು ಅತಿ ಮುಖ್ಯವಾದ ಅಂಶವಾಗಿದೆ. ಯಾವುದೇ ಉತ್ಪಾದನೆಯನ್ನು ಕೈಗೊಳ್ಳಲು ನಾಲ್ಕು ಪ್ರಮುಖ ಉತ್ಪಾದನಾಂಗಗಳು ಅಂದರೆ ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆಗಳು ಮುಖ್ಯವಾದವುಗಳು. ಈ ಹಿನ್ನೆಲೆಯಲ್ಲಿ ಶ್ರಮಕ್ಕೆ ಜನಸಂಖ್ಯೆಯು ಮೂಲ ಆಧಾರವಾಗಿರುತ್ತದೆ. ರಾಷ್ಟ್ರದ ಸಂಪನ್ಮೂಲಗಳ ಸಮರ್ಪಕ ಬಳಕೆ, ದೇಶದ ರಕ್ಷಣೆ ಸರಕುಗಳಿಗೆ ಬೇಡಿಕೆಯ ಸೃಷ್ಟಿ, ಶ್ರಮದ ಪೂರೈಕೆಗೆ ಜನಸಂಖ್ಯೆಗೆ ಪ್ರಮುಖವಾದ ಆಧಾರವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಜುಲೈ 11ನೇ ತಾರೀಕಿನಂದು ವಿಶ್ವದಾದ್ಯಂತ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. 1989ರ ಯುನೈಟೆಡ್ ನೇಷನ್ ಡೆವಲಪ್‌ಮೆಂಟ್ ಕಾರ್ಯಕ್ರಮದ ಗೌವರ್ನಿಂಗ್ ಕೌನ್ಸಿಲ್‌ನಲ್ಲಿ ಮೊದಲ ಬಾರಿಗೆ ‘ವಿಶ್ವ ಜನಸಂಖ್ಯಾ ದಿನ’ವನ್ನು ಘೋಷಿಸಲಾಯಿತು. ಈ ದಿನವನ್ನು ಆಚರಿಸಲು ಸಲಹೆಯನ್ನು ನೀಡಿದವರು ವಿಶ್ವಬ್ಯಾಂಕಿನಲ್ಲಿ ಕಿರಿಯ ಜನಸಂಖ್ಯಾ ಶಾಸ್ತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ. ಕೆ. ಸಿ. ಝಕಾರಿಯಾರವರು. ಅಂದಿಗೆ ವಿಶ್ವದ ಜನಸಂಖ್ಯೆಯು ಐದು ಬಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದು, ಭವಿಷ್ಯದಲ್ಲಿ ತೀವ್ರ ಜನಸಂಖ್ಯಾ ಬೆಳವಣಿಗೆಯಿಂದ ಆಗುವ ದುಷ್ಪರಿಣಾಮಗಳನ್ನು ಮನಗಂಡಿದ್ದು ಅವರು ಈ ಸಲಹೆಯನ್ನು ನೀಡಿದ್ದರು. ವಿಶ್ವ ಜನಸಂಖ್ಯಾ ದಿನದ ಪ್ರಮುಖ ಆಶಯವೆಂದರೆ ಜನಸಂಖ್ಯೆಗೆ ಸಂಬಂಧಿಸಿದ ವಿಷಯಗಳ ಬಗೆಗೆ ಅರಿವನ್ನು ಮೂಡಿಸುವುದಾಗಿದೆ. ಅಲ್ಲದೆ, ಜನಸಂಖ್ಯೆಗೆ ಸಂಬಂಧಿಸಿದ ಪ್ರಮುಖ ಅಂಶಗಳಾದ ಕುಟುಂಬ ಯೋಜನೆಯ ಪ್ರಾಮುಖ್ಯತೆ, ಲಿಂಗ ಸಮಾನತೆ, ಬಡತನ, ತಾಯಿಯ ಆರೋಗ್ಯ, ಮಾನವ ಹಕ್ಕುಗಳ ಕುರಿತಾಗಿ ಜನರಿಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ. ಪ್ರಪಂಚದಲ್ಲಿ ಒಂದು ಬಿಲಿಯನ್ ಜನಸಂಖ್ಯೆಯನ್ನು ಹೊಂದಲು ಹಲವು ವರ್ಷಗಳು ಬೇಕಾಗಿದೆ. 1930 ರಲ್ಲಿ ವಿಶ್ವದ ಜನಸಂಖ್ಯೆ ಕೇವಲ 2 ಬಿಲಿಯನ್ ಇದ್ದು, 1974ರಲ್ಲಿ 4 ಬಿಲಿಯನ್, 1999 ರಲ್ಲಿ 6ಬಿಲಿಯನ್ ಹಾಗೂ 2020 ರಲ್ಲಿ 7.8 ಬಿಲಿಯನ್ ಜನಸಂಖ್ಯೆಯನ್ನು ವಿಶ್ವವು ಹೊಂದಿದೆ. ಹೀಗೆಯೇ ವಿಶ್ವದ ಜನಸಂಖ್ಯೆಯು ಹೆಚ್ಚಳವಾಗುತ್ತಾ ಹೋದರೆ 2030ಕ್ಕೆ 8.5 ಬಿಲಿಯನ್, 2050 ರಕ್ಕೆ 9.7 ಬಿಲಿಯನ್ ಹಾಗೂ 2100 ಕ್ಕೆ 11.2 ಬಿಲಿಯನ್ ಜನಸಂಖ್ಯೆಯು ಹೆಚ್ಚಳವಾಗುತ್ತದೆಂದು ಅಂದಾಜಿಸಲಾಗಿದೆ.

ಕಳೆದ ವರ್ಷ ಅಂದರೆ 2020ರಲ್ಲಿ 7.8 ಬಿಲಿಯನ್ ಜನಸಂಖ್ಯೆಯನ್ನು ವಿಶ್ವವು ಹೊಂದಿದ್ದು, ತೀವ್ರ ಜನಸಂಖ್ಯೆಯನ್ನು ಹೊಂದುತ್ತಿರುವ ರಾಷ್ಟ್ರಗಳಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ದು ನಂತರದ ಸ್ಥಾನಗಳಲ್ಲಿ ಭಾರತ, ಅಮೆರಿಕ, ಪಾಕಿಸ್ತಾನ, ಬ್ರೆಝಿಲ್ ರಾಷ್ಟ್ರಗಳಿವೆ. ಇವುಗಳ ಜಾಗತಿಕ ಜನಸಂಖ್ಯಾ ಪಾಲು ಕ್ರಮವಾಗಿ ಶೇ. 18, ಶೇ. 17.5, ಶೇ 4.23, ಶೇ. 2.83 ಮತ್ತು ಶೇ. 2.71. ಈ ರಾಷ್ಟ್ರಗಳು ವಿಶ್ವದ ಜನಸಂಖ್ಯೆಯ ಶೇ. 45.26ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿವೆ. ಇಂದು ಚೀನಾ ದೇಶವು 1.4 ಬಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದರೆ, ಭಾರತವು 1.3 ಬಿಲಿಯನ್ ಜನಸಂಖ್ಯೆಯೊಂದಿಗೆ ವಿಶ್ವದ ಜನಸಂಖ್ಯೆಯಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳಾಗಿವೆ. ಹೀಗೆ ಜಾಗತಿಕ ಜನಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣಗಳಾಗಿ ಫಲವಂತಿಕೆ ಹೆಚ್ಚಳ, ವಲಸೆ, ದೀರ್ಘಾಯಸ್ಸು ಮುಂತಾದ ಪ್ರಮುಖ ಕಾರಣಗಳನ್ನು ಸೂಚಿಸಬಹುದಾಗಿದೆ.

ಜಾಗತಿಕವಾಗಿ ಪ್ರಸ್ತುತ ಪ್ರತಿ ಒಂದು ಸೆಕೆಂಡಿಗೆ 4.3 ಜನನ ಪ್ರಮಾಣ ಮತ್ತು 1.8 ಮರಣದ ದರದೊಂದಿಗೆ ನಿವ್ವಳ ಪ್ರತಿ ಸೆಕೆಂಡಿಗೆ 2.5 ಜನಸಂಖ್ಯೆಯು ಅಧಿಕವಾಗಿ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗಿದೆ. ಇಂದು ಬಹುತೇಕ ಮುಂದುವರಿಯುತ್ತಿರುವ ರಾಷ್ಟ್ರಗಳಿಗೆ ಜನಸಂಖ್ಯೆಯು ಅಭಿವೃದ್ಧಿಗೆ ಪೂರಕವಾಗುವ ಬದಲು ಸಮಸ್ಯೆಯಾಗಿ ಪರಿಣಮಿಸಿದೆ. ಹೀಗೆ ಜನಸಂಖ್ಯೆಯು ತೀವ್ರ ಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಇದು ಹಲವು ಜಾಗತಿಕ ಸಮಸ್ಯೆಗಳಿಗೆ ನಾಂದಿ ಹಾಡಿದೆ.

ಒಂದು ವರದಿಯ ಪ್ರಕಾರ ವಿಶ್ವದ ಜನಸಂಖ್ಯೆಯು ಪ್ರತಿ ಒಂದು ನಿಮಿಷಕ್ಕೆ 11.5 ಮಿಲಿಯನ್ ಪೌಂಡ್‌ನಷ್ಟು ಆಹಾರವನ್ನು ಸೇವಿಸುತ್ತಿದ್ದು, ಭವಿಷ್ಯದಲ್ಲಿ ಆಹಾರದ ಸಮಸ್ಯೆ ಎದುರಾಗಬಹುದೆಂದು ತಿಳಿಸಿದ್ದಾರೆ. ಇಂದು ವಿಶ್ವದಲ್ಲಿ 1.2 ಬಿಲಿಯನ್‌ನಷ್ಟು ಜನರು ಪ್ರತಿನಿತ್ಯ 1 ಡಾಲರ್‌ಗಿಂತ ಕಡಿಮೆ ಹಾಗೂ 1.8 ಬಿಲಿಯನ್‌ನಷ್ಟು ಜನರು 2 ಡಾಲರ್‌ನಷ್ಟು ಮಾತ್ರ ಖರ್ಚು ಮಾಡುವಂತಾಗುವ ಮೂಲಕ ತೀವ್ರ ಬಡತನಕ್ಕೆ ವಿಶ್ವವು ತಮ್ಮ ಒಡಲನ್ನು ತೆರೆದುಕೊಂಡಿದೆ. ಇದಲ್ಲದೆ ಪ್ರಪಂಚದಲ್ಲಿ ಜನಸಂಖ್ಯಾ ಸಾಂಧ್ರತೆಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದು ಪ್ರತಿ ಚದರ ಕಿ.ಮೀ.ನಲ್ಲಿ 47 ಜನರು ವಾಸಿಸುವಂತಾಗಿದೆ. ಪ್ರತಿ ವರ್ಷವೂ ಸರಾಸರಿ ಶೇ. 1.18ರಷ್ಟು ಜನಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿದ್ದು, ಸುಮಾರು ಸರಾಸರಿ 83 ಮಿಲಿಯನ್ ಜನರು ಪ್ರತಿವರ್ಷ ವಿಶ್ವದ ಜನಸಂಖ್ಯೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಹೀಗೆ ಪ್ರತಿ ವರ್ಷವೂ ಜನಸಂಖ್ಯೆಯ ಪ್ರಮಾಣ ಹೆಚ್ಚಾಗುವ ಜೊತೆಗೆ ಜನಸಂಖ್ಯೆ ಸ್ಫೋಟವಾಗುತ್ತಿರುವುದು ಆತಂಕಕಾರಿಯಾಗಿದೆ. ಜನಸಂಖ್ಯೆ ತೀವ್ರ ಹೆಚ್ಚಳದ ಪರಿಣಾಮವಾಗಿ ಜಾಗತಿಕವಾಗಿ ಹಲವು ಸಮಸ್ಯೆಗಳು ಎದುರಾಗಿದ್ದು ಪ್ರಮುಖವಾಗಿ ಜಾಗತಿಕ ಬಡತನದ ಹೆಚ್ಚಳ, ನಿರುದ್ಯೋಗ, ಆಹಾರದ ಕೊರತೆ, ಅಶಾಂತಿ, ಸಾಮಾಜಿಕ ಅಭದ್ರತೆ, ಭಯೋತ್ಪಾದನೆ, ಜಾಗತಿಕ ತಾಪಮಾನದ ಹೆಚ್ಚಳ ಹೀಗೆ ಹಲವು ಸಮಸ್ಯೆಗಳು ತಲೆದೋರಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಅದರ ಮೂಲ ಆಶಯವನ್ನು ತಿಳಿಸುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ.

Writer - ಡಾ. ಟಿ. ಪಿ. ಶಶಿಕುಮಾರ್

contributor

Editor - ಡಾ. ಟಿ. ಪಿ. ಶಶಿಕುಮಾರ್

contributor

Similar News