ಆಧಾರ ರಹಿತ ಹೇಳಿಕೆ ಆರೋಪ: ಸಂಸದ ನಳಿನ್, ರವಿಕುಮಾರ್ ಪ್ರತಿಕೃತಿ ದಹಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು : ಬಿಜೆಪಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅನವಶ್ಯಕ ವಾಗಿ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಪ್ರಸ್ತಾಪಿಸಿ ತಮ್ಮ ಬಿಜೆಪಿ ಪಕ್ಷದ ಭ್ರಷ್ಟಾಚಾರ ಸರ್ಕಾರದ ದುರಾಡಳಿತವನ್ನು ಮರೆಮಾಚಲು ಆಧಾರ ರಹಿತ ಟೀಕೆಗಳನ್ನು ಮಾಡುತ್ತಿದ್ದಾರೆ, ಬಿಜೆಪಿಯಲ್ಲಿ ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಅನಾಚಾರಿಗಳು ಹೆಚ್ಚುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದಿಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಆನಂದರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ 'ಕೈ' ಕಾರ್ಯಕರ್ತರು, ಬಿಜೆಪಿ ಮೊದಲು ಅತ್ಯಾಚಾರಿ, ಭ್ರಷ್ಟಾಚಾರಿಗಳನ್ನು ತಡೆಯುವ ಪ್ರಯತ್ನವನ್ನು ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಬೇಕು. ಅದನ್ನು ಹೊರತುಪಡಿಸಿ ಕಾಂಗ್ರೆಸ್ ವಿರುದ್ಧ ಟೀಕೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
'ಗೂಂಡಾಗಳು ಯಾರು' ಎಂಬುದು ನಳಿನ್ ಕುಮಾರ್ ಕಟೀಲ್ ಗೆ ಮಾಹಿತಿಯಿದೆ 'ಗೂಂಡಾಗಳ' ಬಗ್ಗೆ ಭ್ರಷ್ಟಾಚಾರಿಗಳ ಬಗ್ಗೆ ಮಾಹಿತಿ ಬೇಕಾದರೆ ಬಿಜೆಪಿಯ ನಾಯಕರಾದ ಎಚ್. ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪನವರನ್ನು ಕೇಳಿದರೆ ಬಿಜೆಪಿಯ ಭ್ರಷ್ಟರ ಬಗ್ಗೆ ಪಟ್ಟಿಯನ್ನು ನೀಡುತ್ತಾರೆ. ಅದನ್ನು ಪಡೆದು ಕ್ರಮ ಕೈಗೊಳ್ಳುವ ಕೆಲಸವನ್ನು ನಳಿನ್ ಕುಮಾರ್ ಕಟೀಲ್ ಮಾಡಬೇಕು. ಇನ್ನು ಬಿಜೆಪಿಯ ವಕ್ತಾರ ರವಿಕುಮಾರ್ ನಿರುದ್ಯೋಗಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪಕ್ಷದ ಭ್ರಷ್ಟಾಚಾರವನ್ನು ಹಾಗೂ ಅನಾಚಾರವನ್ನು ಮರೆಮಾಚಲು ಒಂದಂಶದ ಕಾರ್ಯಕ್ರಮವನ್ನು ರೂಪಿಸಿ, ಆಧಾರ ರಹಿತವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಮೊದಲು ತಮ್ಮ ಪಕ್ಷದಲ್ಲಿರುವ ಭ್ರಷ್ಟರು ಹಾಗೂ ಅನಾಚಾರಗಳ ವಿರುದ್ಧ ಗಮನಹರಿಸಿ ಅದನ್ನು ತಡೆಯುವ ಕೆಲಸವನ್ನು ಮೊದಲು ಮಾಡಬೇಕು ಎಂದು ಹೇಳಿದರು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್, ಜಿ.ಜನಾರ್ದನ್, ಎ. ಆನಂದ್, ಈ. ಶೇಖರ್, ಪ್ರಕಾಶ್, ಚಂದ್ರ ಶೇಖರ್, ಪುಟ್ಟರಾಜು, ಶಶಿ ಭೂಷಣ್, ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.