​ಅಕ್ರಮ ಆರೋಪ ಕುರಿತು ಪರಿಶೀಲನೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

Update: 2021-07-12 18:10 GMT

ಬೆಂಗಳೂರು, ಜು.12: ಧೂಳು ತಗ್ಗಿಸುವ ಸಲುವಾಗಿ ಸ್ಪ್ರೇ ಮಾಡುವ ಆರು ವಾಹನಗಳ ಖರೀದಿಯ ಅವಶ್ಯಕತೆ ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಕೇಳಿಬಂದಿರುವ ಅಕ್ರಮಗಳ ಸಂಬಂಧ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಸೋಮವಾರ ನಗರದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಾಹನಗಳಿದ್ದರೂ, ಪುನಃ ಗಾಳಿಯಲ್ಲಿರುವ ಬಿಡಿ ಧೂಳಿನ ಕಣ (ಸಸ್ಪೆಂಡೆಡ್ ಪಾರ್ಟಿಕ್ಯುಲೇಟ್ ಮ್ಯಾಟರ್) ಕಡಿಮೆ ಮಾಡಲು ಹೊಸ ವಾಹನ ಖರೀದಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಆದರೆ, ಈ ಬಗ್ಗೆ ಪಾಲಿಕೆ ಇಂಜಿನಿಯರ್‍ಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅದೇ ರೀತಿ, ಕೋವಿಡ್ ಸೋಂಕಿನ ಪರಿಣಾಮ ಶಾಲಾ-ಕಾಲೇಜು ಬಂದ್ ಮಾಡಲಾಗಿದ್ದರೂ, ಕಳೆದ ಎರಡು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳ ಸಾಮಾಗ್ರಿಗಳನ್ನು ಖರೀದಿಸಿ ಅಕ್ರಮ ಬಿಲ್ ಮಾಡಿಕೊಂಡು ಅಕ್ರಮವೆಸಗಿರುವ ಆರೋಪವೂ ಕೇಳಿಬಂದಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ನು, ನಗರದೊಳಗೆ ಬ್ಯಾನರ್ ಗಳನ್ನು ಅಳವಡಿಕೆ ಮಾಡದಂತೆ ನ್ಯಾಯಾಲಯವೇ ಆದೇಶ ಹೊರಡಿಸಿದ್ದರೂ, ಬಹುತೇಕ ಕಡೆಗಳಲ್ಲಿ ಬ್ಯಾನರ್ ಕಂಡು ಬರುತ್ತಿರುವುದು ಹೆಚ್ಚಾಗುತ್ತಿದೆ.ಹಾಗಾಗಿ, ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೌರವ್ ಗುಪ್ತ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News