ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಗೆ ಸ್ಮೃತಿ ಇರಾನಿ, ಭೂಪೇಂದರ್ ಯಾದವ್, ಸರ್ಬಾನಂದ ಸೋನೋವಾಲ್ ನೇಮಕ

Update: 2021-07-13 05:42 GMT
ಸ್ಮೃತಿ ಇರಾನಿ, ಭೂಪೇಂದರ್ ಯಾದವ್, ಸರ್ಬಾನಂದ ಸೋನೋವಾಲ್

ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಪ್ರಧಾನಿ ನೇತೃತ್ವದ ಅತ್ಯಂತ ಪ್ರಮುಖ ಕ್ಯಾಬಿನೆಟ್ ಸಮಿತಿಯಾದ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಗೆ ಕೇಂದ್ರ ಸಚಿವರುಗಳಾದ ಸರ್ಬಾನಂದ ಸೋನೋವಾಲ್, ಭೂಪೇಂದರ್ ಯಾದವ್ ಮತ್ತು ಸ್ಮೃತಿ ಇರಾನಿ ನೇಮಕಗೊಂಡಿದ್ದಾರೆ.

ಇತರ ಕ್ಯಾಬಿನೆಟ್ ಸಮಿತಿಗಳಿಗೂ ನೇಮಕಾತಿಗಳು ನಡೆದಿವೆ. ಕೇಂದ್ರ ಸಚಿವರುಗಳಾದ ವೀರೇಂದರ್ ಕುಮಾರ್, ಕಿರಣ್ ರಿಜಿಜು, ಅನುರಾಗ್ ಸಿಂಗ್ ಠಾಕುರ್ ಅವರನ್ನು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಗೆ ಸೇರಿಸಲಾಗಿದ್ದು ಈ ಸಮಿತಿಯ ನೇತೃತ್ವವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಿದ್ದಾರೆ.

ಆದರೆ ಭದ್ರತಾ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.  ಈ ಸಮಿತಿಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇದ್ದಾರೆ.

ನೇಮಕಾತಿ ಸಮಿತಿಯಲ್ಲಿ  ಪ್ರಧಾನಿ ಮತ್ತು ಗೃಹ ಸಚಿವರಿದ್ದಾರೆ.

ಹೂಡಿಕೆ ಮತ್ತು ಅಭಿವೃದ್ಧಿ ಕುರಿತ ಕ್ಯಾಬಿನೆಟ್ ಸಮಿತಿಯಲ್ಲಿ ಪ್ರಧಾನಿ ಅಧ್ಯಕ್ಷರಾಗಿದ್ದರೆ ಕೇಂದ್ರ ಸಚಿವರುಗಳಾದ ನಾರಾಯಣ ರಾಣೆ, ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಅಶ್ವಿನಿ ವೈಷ್ಣವ್ ಇದ್ದಾರೆ.

ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಕ್ಯಾಬಿನೆಟ್ ಸಮಿತಿಯಲ್ಲಿ ಕೇಂದ್ರ ಸಚಿವರುಗಳಾದ ಅಶ್ವಿನಿ ವೈಷ್ಣವ್, ಭೂಪೇಂದರ್ ಯಾದವ್, ರಾಮಚಂದ್ರ ಪ್ರಸಾದ್ ಸಿಂಗ್  ಹಾಗೂ ಜಿ ಕಿಶನ್ ರೆಡ್ಡಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News