ಮೊದಲ ಬಾರಿಗೆ 13 ಭಾಷೆಗಳಲ್ಲಿ ನೀಟ್; ಕುವೈತ್‌ನಲ್ಲೂ ಪರೀಕ್ಷಾ ಕೇಂದ್ರ

Update: 2021-07-14 03:41 GMT
ಸಾಂದರ್ಭಿಕ ಚಿತ್ರ (Photo credit: PTI)

ಹೊಸದಿಲ್ಲಿ, ಜು.14: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಇರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಇದೇ ಮೊದಲ ಬಾರಿಗೆ ಪಂಜಾಬಿ ಮತ್ತು ಮಲೆಯಾಳಂ ಸೇರಿದಂತೆ 13 ಭಾಷೆಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಕಟಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ವಿದ್ಯಾರ್ಥಿ ಸಮುದಾಯಕ್ಕೆ ನೆರವಾಗುವಂತೆ ಕುವೈತ್‌ನಲ್ಲೂ ನೀಟ್ ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

2021ರ ನೀಟ್ ಪರೀಕ್ಷಾ ನೋಂದಣಿ ಮಂಗಳವಾರ ಸಂಜೆ 5ಕ್ಕೆ ಆರಂಭವಾಗಿದೆ. ಹಿಂದಿ, ಪಂಜಾಬಿ, ಅಸ್ಸಾಮಿ, ಬಂಗಾಲಿ, ಒಡಿಯಾ, ಗುಜರಾತಿ, ಮರಾಠಿ, ತೆಲುಗು, ಮಲೆಯಾಳಂ, ಕನ್ನಡ, ತಮಿಳು, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಮೊದಲು ಆಗಸ್ಟ್ 1ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷೆಯನ್ನು ಸೆಪ್ಟಂಬರ್ 12ಕ್ಕೆ ನಡೆಸಲಾಗುತ್ತದೆ ಎಂದು ಅವರು ವಿವರ ನೀಡಿದ್ದಾರೆ.

ಈ ಬಾರಿ ಪರೀಕ್ಷೆ ನಡೆಯುವ ನಗರಗಳ ಸಂಖ್ಯೆಯನ್ನು 155ರಿಂದ 198ಕ್ಕೆ ಹೆಚ್ಚಿಸಲಾಗಿದೆ. ಅಂತೆಯೇ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನೂ 2020ರಲ್ಲಿ ಇದ್ದ ಸಂಖ್ಯೆಯಾದ 3,682ರಿಂದ ಹೆಚ್ಚಿಸಲಾಗಿದೆ. ಕಳೆದ ವರ್ಷ ಸೆಪ್ಟಂಬರ್ 13ರಂದು ಕೋವಿಡ್-19 ಮಾರ್ಗಸೂಚಿಯ ಕಟ್ಟುನಿಟ್ಟಿನ ಅನುಸರಣೆಯೊಂದಿಗೆ ನಡೆದ ಪರೀಕ್ಷೆಯಲ್ಲಿ 13.36 ಲಕ್ಷ ಮಂದಿ ಪಾಲ್ಗೊಂಡಿದ್ದರು. ಈ ಪೈಕಿ 7,71,500 ಮಂದಿ ಅರ್ಹತೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News