ಪಿಓಕೆ ಶಾಸನ ಸಭೆಗೆ ಮತದಾನ: 45 ಸ್ಥಾನಗಳಿಗೆ ಚುನಾವಣೆ

Update: 2021-07-25 17:34 GMT

 ಪಿಓಕೆ ಶಾಸನಸಭೆಯ 45 ಸ್ಥಾನಗಳಿಗೆ ಮತದಾನ ನಡೆದಿದ್ದು, 30.20 ಲಕ್ಷ ಮಂದಿ ಮತಚಲಾಯಿಸುವ ಹಕ್ಕು ಹೊಂದಿದ್ದಾರೆ. ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿ ಚುನಾವಣೆ ನಡೆಸುವ ಪಾಕ್ನ ನಿರ್ಧಾರವನ್ನು ಭಾರತವು ಈ ಹಿಂದೆ ಖಂಡಿಸಿತ್ತು ಹಾಗೂ ಪಾಕ್ ಮಿಲಿಟರಿ ಮೂಲಕ ಅತಿಕ್ರಮಿಸಿಕೊಂಡಿರುವ ಈ ಪ್ರಾಂತದ ಸ್ಥಾನಮಾನವನ್ನು ಬದಲಾಯಿಸುವ ಯಾವುದೇ ಕ್ರಮವು ಕಾನೂನು ಪ್ರಕಾರ ಅಸಿಂಧುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

  
53 ಸದಸ್ಯರ ಪಿಓಕೆ ಶಾಸನಸಭೆಯಲ್ಲಿ ಕೇವಲ 45 ಮಂದಿಯನ್ನು ಮಾತ್ರ ನೇರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಉಳಿದ ಐದು ಸ್ಥಾನಗಳನ್ನು ಮಹಿಳೆಯರನ್ನು ಹಾಗೂ ಮೂರು ಸ್ಥಾನಗಳಿಗೆ ತಂತ್ರಜ್ಞರನ್ನು ನಾಮನಿ ರ್ದೇಶನಗೊಳಿಸಲಾಗುತ್ತದೆ.
  
ಪಿಓಕೆ ಶಾಸನಸಭೆ ಚುನಾವಣೆಯಲ್ಲಿ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ (ಪಿಟಿಐ), ಪಾಕಿಸ್ತಾನ ಮುಸ್ಲಿಂ ಲೀಗ್-ನವಾಝ್ (ಪಿಎಂಎಲ್ಎನ್) ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನಡುವೆ ಜಿದ್ದಾಜಿದ್ದಿಯ ತ್ರಿಕೋನ ಸ್ಪರ್ಧೆಯಿದೆ.

ಪಿಟಿಐ ಎಲ್ಲಾ 45 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಿಎಂಎಲ್ಎನ್ ಹಾಗೂ ಪಿಪಿಪಿ ತಲಾ 44 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಹಿಂಸಾತ್ಮಕ ಚಟುವಚಟಿಕೆಗಳಿಗಾಗಿ ಈ ವರ್ಷದ ಎಪ್ರಿಲ್ನಲ್ಲಿ ಪಾಕ್ ಸರಕಾರ ನಿಷೇಧಿಸಿದ್ದ ತೆಹ್ರೀಕೆ ಲಬ್ಬೈಕ್ ಪಾಕಿಸ್ತಾನ್ (ಟಿಎಲ್ಪಿ) 40 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಿಷೇಧದ ಹೊರತಾಗಿಯೂ ಪಾಕ್ ಚುನಾವಣಾ ಆಯೋಗವು ಟಿಎಲ್ಪಿಯ ನೋಂದಣಿಯನ್ನು ರದ್ದುಪಡಿಸದಿರುವುದರಿಂದ ಅದು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಪಡೆದಿದೆ.
  
ಪಾಕ್ ಆಕ್ರಮಿತ ಕಾಶ್ಮೀರದ ಜಿಲ್ಲೆಗಳಲ್ಲಿರುವ 33 ಕ್ಷೇತ್ರಗಳಲ್ಲಿ ಒಟ್ಟು 587 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪಾಕ್ನಲ್ಲಿ ನೆಲೆಸಿರುವ ನಿರಾಶ್ರಿತರಿಗಾಗಿನ 12 ಕ್ಷೇತ್ರಗಳಲ್ಲಿ 121 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
  
 ಎಲ್ಲಾ 45 ಕ್ಷೇತ್ರಗಳಲ್ಲಿ ಒಟ್ಟು 317 ಪಕ್ಷೇತರ ಅಭ್ಯರ್ಥಿಗಳೂ ಕೂಡಾ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ 2016ರ ಪಿಓಕೆ ಶಾಸನಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಝ್ ಶರೀಫ್ ನೇತೃತ್ವದ ಪಿಎಂಎಲ್(ಎನ್) ಜಯಗಳಿಸಿತ್ತು.
  
ಪಾಕಿಸ್ತಾನದ ಚುನಾವಣಾ ಸಮೀಕ್ಷಾ ಸಂಸ್ಥೆ ಗ್ಯಾಲ್ಅಪ್ ಪ್ರಕಾರ ಶೇ.44ರಷ್ಟು ಜನರು ಇಮ್ರಾನ್ ಖಾನ್ ನೇತೃತ್ವದ ತೆಹ್ರೆಕೆ ಇನ್ಸಾಫ್ ಪಕ್ಷವನ್ನು ಬೆಂಬಲಿಸಿದ್ದು, ಕೇವಲ ಶೇ.12ರಷ್ಟು ಮಂದಿ ಮಾತ್ರ ಪಿಎಂಎಲ್ಎನ್ ಪಕ್ಷದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News