​ವಿಜಯ್ ಮಲ್ಯ ಈಗ ದಿವಾಳಿ: ಮುಂದೇನು ಗೊತ್ತೇ?

Update: 2021-07-27 04:13 GMT
Vijay Mallya. (Photo credit: PTI)

ಲಂಡನ್, ಜು.27: ಭಾರತೀಯ ಬ್ಯಾಂಕ್‌ಗಳಿಗೆ ಬಹುಕೋಟಿ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಭಾರತೀಯ ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ಹೈಕೋರ್ಟ್‌ನ ದಿವಾಳಿತನ ಮತ್ತು ಕಂಪೆನಿಗಳ ಕೋರ್ಟ್ ದಿವಾಳಿ ಎಂದು ಘೋಷಿಸಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆಯಾದರೂ, ಉನ್ನತ ಕೋರ್ಟ್‌ನಲ್ಲಿ ಈ ತೀರ್ಪನ್ನು ಪ್ರಶ್ನಿಸಲು ಮಲ್ಯಗೆ ಅವಕಾಶ ಕಲ್ಪಿಸಲಾಗಿದೆ.

"ಭಾರತಕ್ಕೆ ವಿಚಾರಣೆಗೆ ಮಲ್ಯ ಹಿಂದಿರುಗುತ್ತಾರೆ ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ. ಅಂತೆಯೇ ನ್ಯಾಯಸಮ್ಮತ ಅವಧಿಯಲ್ಲಿ ಸಾಲವನ್ನು ಮರುಪಾವತಿ ಮಾಡುತ್ತಾರೆ ಎನ್ನುವುದಕ್ಕೂ ಪುರಾವೆಗಳು ಸಾಕಷ್ಟು ಇಲ್ಲ. ನಾನು ಡಾ.ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸುತ್ತಿದ್ದೇನೆ" ಎಂದು ಮುಖ್ಯ ದಿವಾಳಿತನ ಮತ್ತು ಕಂಪೆನಿಗಳ ನ್ಯಾಯಾಲಯ (ಐಸಿಸಿ)ದ ನ್ಯಾಯಾಧೀಶ ಬ್ರಿಗ್ಸ್ ಸೋಮವಾರ ಸಂಜೆ ತೀರ್ಪು ನೀಡಿದ್ದಾರೆ.

ಯುಬಿ ಸಮೂಹದ ಅಧ್ಯಕ್ಷರಾಗಿರುವ 65 ವರ್ಷದ ಮಲ್ಯ, 2020ರ ಮೇ ತಿಂಗಳಲ್ಲಿ ಭಾರತಕ್ಕೆ ಗಡೀಪಾರು ಆಗದಂತೆ ತಡೆಯುವ ಎಲ್ಲ ಕಾನೂನು ಸಮರಗಳಲ್ಲೂ ಸೋತಿದ್ದರು. ಆದರೆ ಇದುವರೆಗೂ ಭಾರತಕ್ಕೆ ವಾಪಸ್ಸಾಗಿಲ್ಲ. ಇದೀಗ ಮಲ್ಯ ತಮ್ಮ ಎಲ್ಲ ಆಸ್ತಿಗಳನ್ನು ಮತ್ತು ತಮ್ಮ ಬ್ಯಾಂಕ್ ಕಾರ್ಡ್ ಹಾಗೂ ಕ್ರೆಡಿಟ್‌ ಕಾರ್ಡ್‌ಗಳನ್ನು ದಿವಾಳಿತನ ಟ್ರಸ್ಟ್‌ಗೆ ಹಸ್ತಾಂತರಿಸಬೇಕಾಗುತ್ತದೆ. ದಿವಾಳಿತನ ಟ್ರಸ್ಟ್ ಇವರ ಎಲ್ಲ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲಿದ್ದು, ಎಲ್ಲ ಸೂಕ್ತ ಆಸ್ತಿಗಳನ್ನು ಮಾರಾಟ ಮಾಡಿ ಸಾಲ ಮರುಪಾವತಿ ಮಾಡುವ ಉದ್ದೇಶದಿಂದ ಅವರ ನೈಜ ಆಸ್ತಿ ಮತ್ತು ಹೊಣೆಗಾರಿಕೆಯ ಬಗ್ಗೆ ತನಿಖೆ ನಡೆಸಲಿದೆ. ದಿವಾಳಿ ಎಂದು ಘೋಷಿಸಲ್ಪಟ್ಟ ವ್ಯಕ್ತಿಗಳು ಟ್ರಸ್ಟ್ ಜತೆ ಸಹಕರಿಸಬೇಕಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಹೊರತುಪಡಿಸಿದಂತೆ ಅವರ ಎಲ್ಲ ಬ್ಯಾಂಕ್ ಖಾತೆಗಳು ಇದೀಗ ಸ್ಥಗಿತಗೊಳ್ಳಲಿವೆ. ನ್ಯಾಯಾಲಯದ ಅನುಮತಿ ಇಲ್ಲದೇ ಯಾವುದೇ ಕಂಪೆನಿಯ ನಿರ್ದೇಶಕರಾಗಿ ಅವರು ಮುಂದುವರಿಯುವುದನ್ನು ಅಥವಾ ಹೊಸ ಕಂಪೆನಿ ಆರಂಭಿಸುವುದನ್ನು ನಿಷೇಧಿಸಲಾಗಿದೆ. ತಾನು ದಿವಾಳಿ ಎಂದು ಘೋಷಿಸಿಕೊಳ್ಳದೇ 500 ಪೌಂಡ್‌ಗಿಂತ ಅಧಿಕ ಸಾಲ ಪಡೆಯುವಂತಿಲ್ಲ. ವೈಯಕ್ತಿಕ ದಿವಾಳಿಗಳ ದಾಖಲೆಯಲ್ಲಿ ಮಲ್ಯ ಹೆಸರು ಸೇರಲಿದ್ದು, ಇದರಲ್ಲಿ ಈಗಾಗಲೇ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಸಹೋದರ ಪ್ರಮೋದ್ ಮಿತ್ತಲ್ ಇದ್ದಾರೆ.

"ಜಾರಿ ನಿರ್ದೇಶನಾಲಯ ಬ್ಯಾಂಕ್‌ಗಳಲ್ಲಿ ನನ್ನ ಬಾಕಿ ಇರುವ 6,200 ಕೋಟಿ ರೂಪಾಯಿಗೆ ಪ್ರತಿಯಾಗಿ ನನ್ನ 14 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನು ಬ್ಯಾಂಕ್‌ಗಳಿಗೆ ನೀಡಲಾಗಿದ್ದು, ಬ್ಯಾಂಕ್‌ಗಳು 9 ಸಾವಿರ ಕೋಟಿ ರೂಪಾಯಿಗಳನ್ನು ಪಡೆದುಕೊಂಡು 5,000 ಕೋಟಿ ರೂಪಾಯಿ ಉಳಿಸಿಕೊಂಡಿವೆ. ಇದೀಗ ಬ್ಯಾಂಕ್‌ಗಳು ನನಗೆ ಹಣ ಮರಳಿಸಬೇಕಾಗುತ್ತದೆ ಎಂಬ ಕಾರಣದಿಂದ ನನ್ನನ್ನು ದಿವಾಳಿ ಎಂದು ಘೋಷಿಸಲು ಮನವಿ ಮಾಡಿವೆ" ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News