ಒಲಿಂಪಿಕ್ಸ್: ಇಸ್ರೇಲಿ ಎದುರಾಳಿಯನ್ನು ಎದುರಿಸಲು ನಿರಾಕರಿಸಿದ ಸುಡಾನ್ ಜುಡೋ ಪಟು

Update: 2021-07-27 06:51 GMT
ಸಾಂದರ್ಭಿಕ ಚಿತ್ರ (PTI)

ಟೋಕಿಯೊ: ಸುಡಾನ್ ನ ಜುಡೊ ಪಟು ಮುಹಮ್ಮದ್ ಅಬ್ದಲ್ ರಸೂಲ್ ಸೋಮವಾರ 73 ಕೆಜಿ ವಿಭಾಗದ 32 ನೇ ಸುತ್ತಿನ ಪಂದ್ಯದಲ್ಲಿ ಇಸ್ರೇಲ್ ನ ಎದುರಾಳಿ ತೋಹರ್ ಬುಟ್ಬುಲ್ ಅವರನ್ನು ಎದುರಿಸಲು ನಿರಾಕರಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಇಸ್ರೇಲ್ ಎದುರಾಳಿಯ ವಿರುದ್ಧ ಸ್ಪರ್ಧಿಸಲು ನಿರಾಕರಿಸಿದ ಎರಡನೇ ಅಥ್ಲೀಟ್ ಆಗಿದ್ದಾರೆ.

ಅಬ್ದಲ್ ರಸೂಲ್ ಸ್ಪರ್ಧಿಸದೆ ಇರುವ ಕಾರಣವನ್ನು ಇಂಟರ್ ನ್ಯಾಷನಲ್ ಜೂಡೋ ಫೌಂಡೇಶನ್ ತಕ್ಷಣ ಘೋಷಿಸಲಿಲ್ಲ. ಸುಡಾನ್ ಒಲಿಂಪಿಕ್ಸ್  ಅಧಿಕಾರಿಗಳು ಕೂಡ ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.

ಅಲ್ಜೀರಿಯಾದ ಫೆಥಿ ನೌರಿನ್ ಅವರನ್ನು ಟೋಕಿಯೊ ಕ್ರೀಡಾಕೂಟದಿಂದ ವಾಪಸ್ ಕಳಿಸಲಾಗಿದೆ. ನೌರಿನ್ ಕೂಡ ಬುಟ್ಬುಲ್ ವಿರುದ್ಧ ಸ್ಪರ್ಧಿಸುವುದರಿಂದ ಹಿಂದೆ ಸರಿದ ನಂತರ ಶನಿವಾರ ಐಜೆಎಫ್ ಅವರನ್ನು ಅಮಾನತುಗೊಳಿಸಿತು.

"ನಾವು ಒಲಿಂಪಿಕ್ಸ್ ತಲುಪಲು ಸಾಕಷ್ಟು ಶ್ರಮಿಸಿದ್ದೇವೆ. ಆದರೆ ಫೆಲೆಸ್ತೀನ್ ವಿಚಾರ ನಮಗೆ ಈ ಎಲ್ಲಕ್ಕಿಂತ ದೊಡ್ಡದಾಗಿದೆ" ಎಂದು ನೌರಿನ್ ಹೇಳಿದರು.

“ನಾವು ಡ್ರಾದಲ್ಲಿ ಅದೃಷ್ಟಶಾಲಿಯಾಗಿರಲಿಲ್ಲ. ನಾವು ಡ್ರಾ ಪ್ರಕ್ರಿಯೆಯಲ್ಲಿ ಇಸ್ರೇಲಿ ಎದುರಾಳಿಯನ್ನು ಪಡೆದುಕೊಂಡಿದ್ದೇವೆ. ಅದಕ್ಕಾಗಿಯೇ ನಾವು ನಿವೃತ್ತರಾಗಬೇಕಾಯಿತು. ನಾವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ’’ ಎಂದು ನೌರಿನ್ ಅವರ  ತರಬೇತುದಾರ ಅಮರ್ ಬೆನಿಖ್ಲೆಫ್ ಅಲ್ಜೀರಿಯಾದ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನೌರಿನ್ ಹಾಗೂ ಅವರ ತರಬೇತುದಾರ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ ಎಂದು ಇಂಟರ್ ನ್ಯಾಶನಲ್ ಜೂಡೋ ಫೆಡರೇಶನ್ ಘೋಷಿಸಿದೆ.

ಅಬ್ದುಲ್ ರಸೂಲ್ ಅವರು  ವಿಶ್ವದ 469 ನೇ ಶ್ರೇಯಾಂಕದ ಜುಡೋ ಪಟು ಆಗಿದ್ದರೆ, ಬುಟ್ಬುಲ್ ಏಳನೇ ಸ್ಥಾನದಲ್ಲಿದ್ದಾರೆ.

2019 ರಲ್ಲಿ ವಿಶ್ವ ಜೂಡೋ ಚಾಂಪಿಯನ್ಶಿಪ್ ನಲ್ಲಿ ಕೂಡ ನೌರಿನ್ ಅವರು ಬುಟ್ಬುಲ್ ಅವರನ್ನು ಸ್ಪರ್ಧೆಯಲ್ಲಿ ಎದುರಿಸುವುದರಿಂದ ಹಿಂದೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News