ಅಮಿತ್ ಶಾ ದೇಶವನ್ನು ವಿಫಲಗೊಳಿಸಿದ್ದಾರೆ: ರಾಹುಲ್ ಗಾಂಧಿ ಆಕ್ರೋಶ

Update: 2021-07-27 14:23 GMT

ಹೊಸದಿಲ್ಲಿ,ಜು.27: ಅಸ್ಸಾಂ-ಮಿರೆರಾಂ ಗಡಿಯಲ್ಲಿ ಸೋಮವಾರ ನಡೆದ ಭೀಕರ ಹಿಂಸಾಚಾರದ ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ಶಾ ವಿರುದ್ಧ ತೀವ್ರ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜನತೆಯ ಬದುಕಿನಲ್ಲಿ ದ್ವೇಷ ಹಾಗೂ ಅಪನಂಬಿಕೆಯ ಬೀಜವನ್ನು ಬಿತ್ತುವ ಮೂಲಕ ಶಾ ಅವರು ದೇಶವನ್ನು ವೈಫಲ್ಯಕ್ಕೀಡು ಮಾಡಿದ್ದಾರೆ ಹಾಗೂ ಇದರ ಭಯಾನಕ ದುಷ್ಪರಿಣಾಮಗಳನ್ನು ಭಾರತ ಈಗ ಅನುಭವಿಸುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಿಝೋರಾಂ-ಅಸ್ಸಾಂ ಗಡಿಯಲ್ಲಿರುವ ಕಾಚಾರ್ ಜಿಲ್ಲೆಯಲ್ಲಿ ಸೋಮವಾರ ಗಡಿವಿವಾಕ್ಕೆ ಸಂಬಂಧಿಸಿ ನಡೆದ ಭೀಕರ ಘರ್ಷಣೆಯಲ್ಲಿ ಕನಿಷ್ಠ ಐವರು ಅಸ್ಸಾಂ ಪೊಲೀಸರು ಸಾವನ್ನಪ್ಪಿದ್ದರು ಹಾಗೂ ಎಸ್ಪಿ ಸೇರಿದಂತೆ 60ಕ್ಕೂ ಅಧಿಕ ಮಂದಿಗಾಯಗೊಂಡಿದ್ದರು.
  
‘‘ಮೃತರಾದವರ ಕುಟುಂಬಗಳಿಗೆ ನನ್ನ ಹೃದಯಾಳದಿಂದ ಸಂತಾಪಗಳನ್ನು ಸಲ್ಲಿಸುವೆ. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳುವರೆಂದು ಹಾರೈಸುವುದಾಗಿಯೂ ರಾಹುಲ್ ಟ್ವೀಟಿಸಿದ್ದಾರೆ. ಅವರು ತನ್ನ ಟ್ವೀಟ್ ಜೊತೆ ಹಿಂಸಾಚಾರದ ವಿಡಿಯೋವನ್ನು ಕೂಡಾ ಟ್ಯಾಗ್ ಮಾಡಿದ್ದಾರೆ.

ಮಿಝೋರಾಂ ಗಡಿಗೆ ತಾಗಿಕೊಂಡಿರುವ ಕಾಚಾರ್ ಜಿಲ್ಲೆಯ ಗ್ರಾಮವೊಂದರಲ್ಲಿ ಸೋಮವಾರ ಮಿಝೋರಾಂ ಪೊಲೀಸರು ತನ್ನ ಅಧಿಕಾರಿಗಳು ಹಾಗೂ ನಾಗರಿಕರ ಮೇಲೆ ಲೈಟ್ಮೆಶಿನ್ಗನ್ ಸೇರಿದಂತೆ ಸ್ವಯಂಚಾಲಿತ ಬಂಧೂಕುಗಳಿಂದ ಗುಂಡಿನ ದಾಳಿ ನಡೆಸಿರುವುದಾಗಿ ಆಸ್ಸಾಂ ಸರಕಾರ ಸೋಮವಾರ ಆಪಾದಿಸಿತ್ತು.
  
ಆದರೆ ಮಿಝೋರಾಂ ಗೃಹಸಚಿವ ಲಾಲ್ಚಾಮ್ಲಿಯಾನ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಸಿಆರ್ಪಿಎಫ್ ಸಿಬ್ಬಂದಿ ಕಾವಲು ಕಾಯುತ್ತಿದ್ದ ಪಹರೆಠಾಣೆಯೊಂದನ್ನು ಅಸ್ಸಾಂನ 200ಕ್ಕೂ ಅಧಿಕ ಪೊಲೀಸರು ಬಲವಂತವಾಗಿ ದಾಟಿ ಬಂದಿದ್ದು, ನಿರಾಯುಧರಾದ ಜನತೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News