​ಕೇರಳದಲ್ಲಿ ಒಂದೇ ದಿನ 22 ಸಾವಿರ ಕೋವಿಡ್ ಪ್ರಕರಣ

Update: 2021-07-28 03:37 GMT

ತಿರುವನಂತಪುರ, ಜು.28: ಕೇರಳದಲ್ಲಿ ಮಂಗಳವಾರ ಒಂದೇ ದಿನ 20 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಮಂಗಳವಾರ ಹೊಸ ಸೋಂಕಿತರ ಸಂಖ್ಯೆ 22,199 ಆಗಿದ್ದು, ಇದು ದಿನದಲ್ಲಿ ಇಡೀ ದೇಶದಲ್ಲಿ ವರದಿಯಾದ ಪ್ರಕರಣಗಳ ಒಟ್ಟು ಸಂಖ್ಯೆಯ ಶೇಕಡ 50ಕ್ಕಿಂತಲೂ ಅಧಿಕ.

ರಾಜ್ಯದಲ್ಲಿ ಪ್ರಕರಣಗಳ ಏರಿಕೆಯಿಂದಾಗಿ ದೇಶದಲ್ಲೂ ಒಟ್ಟು ಪ್ರಕರಣಗಳ ಸಂಖ್ಯೆ 42,948ಕ್ಕೇರಿದೆ. ಇದು ಜುಲೈ 8ರಂದು ದಾಖಲಾದ 43,494 ಪ್ರಕರಣಗಳ ಬಳಿಕ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಕಳೆದ ಹಲವು ವಾರಗಳಿಂದ ಹೊಸ ಸೋಂಕು ಪ್ರಮಾಣ ಏರಿಕೆ ಕೇರಳ, ಕೆಲ ಈಶಾನ್ಯ ರಾಜ್ಯಗಳು ಮತ್ತು ಭಾಗಶಃ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದೆ.

ಮಂಗಳವಾರಕ್ಕೆ ಮುನ್ನ ದೇಶದ ಯಾವುದೇ ರಾಜ್ಯಗಳಲ್ಲಿ 20 ಸಾವಿರಕ್ಕಿಂತ ಅಧಿಕ ಪ್ರಕರಣ ದಾಖಲಾದ ನಿದರ್ಶನ ಇರುವುದು ಜೂನ್ 6ರಂದು. ತಮಿಳುನಾಡಿನಲ್ಲಿ ಜೂನ್ 6ರಂದು 20,421 ಹೊಸ ಪ್ರಕರಣಗಳು ವರದಿಯಾಗಿದ್ದವು. ಕೇರಳದಲ್ಲಿ ಮಂಗಳವಾರ ದಾಖಲಾಗಿರುವ ಪ್ರಕಣಗಳು ಮೇ 29ರ ಬಳಿಕ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ಇದರಿಂದ ಕೇರಳದಲ್ಲಿ ಮತ್ತೊಂದು ಅಲೆ ಎದ್ದಿರುವುದು ಸ್ಪಷ್ಟವಾಗುತ್ತದೆ. ಕಳೆದ ನಾಲ್ಕು ವಾರಗಳಿಂದೀಚೆಗೆ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

ರಾಜ್ಯದಲ್ಲಿ ಏಳು ದಿನಗಳ ದೈನಿಕ ಸರಾಸರಿ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಇಳಿದಿಲ್ಲವಾದರೂ, ಜೂನ್ 20-27ರ ಅವಧಿಯಲ್ಲಿ 11,3000 ಪ್ರಕರಣಗಳಿದ್ದ ಕೇರಳದಲ್ಲಿ ಇದೀಗ ಏಳು ದಿನಗಳ ಸರಾಸರಿ 16,700ಕ್ಕೇರಿದೆ. ರಾಜ್ಯದಲ್ಲಿ ಧನಾತ್ಮಕತೆ ದರ ಶೇಕಡ 12ರಷ್ಟಿದೆ. ಇದರೊಂದಿಗೆ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 33 ಲಕ್ಷಕ್ಕೇರಿದ್ದು, ಮಹಾರಾಷ್ಟ್ರ (67.2 ಲಕ್ಷ) ಹೊರತುಪಡಿಸಿದರೆ ಕೇರಳ ಅತ್ಯಧಿಕ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News