ದೇಶದ ಆರೋಗ್ಯ ಅವ್ಯವಸ್ಥೆಯನ್ನು ತೆರೆದಿಟ್ಟ ಕೊರೋನ ಅಲೆಗಳು

Update: 2021-07-30 09:59 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಕೊರೋನ ಸೋಂಕಿತರು ಗುಣಮುಖ’ ಎನ್ನುವ ತಲೆಬರಹ ಓದಲು ಅತ್ಯಂತ ಅಪ್ಯಾಯಮಾನ. ಖಾಸಗಿ ಆಸ್ಪತ್ರೆಗಳಲ್ಲಿ ‘ಕೊರೋನ ಸೋಂಕಿತರಾಗಿ ದಾಖಲಿಸಲ್ಪಟ್ಟು ‘ಬಿಡುಗಡೆಗೊಂಡ ಲಕ್ಷಾಂತರ ಜನರಿದ್ದಾರೆ. ಹೀಗೆ ಬಿಡುಗಡೆಗೊಂಡು ‘ಕೊನೆಗೂ ಬದುಕಿಕೊಂಡೆವು’ ಎಂದು ನಿಟ್ಟುಸಿರು ಬಿಟ್ಟವರು ಹಲವರು. ಆದರೆ ಕೊರೋನದಿಂದ ಪಾರಾದರೂ, ಅವರು ಮಾಡಿದ ಸಾಲ ಸೋಲಗಳಿಂದ ಇನ್ನೂ ಮುಕ್ತರಾಗಲು ಸಾಧ್ಯವಾಗದೆ ಒದ್ದಾಡುತ್ತಿರುವವರ ಸಂಖ್ಯೆ ಈ ದೇಶದಲ್ಲಿ ಬಹುದೊಡ್ಡದಿದೆ. ಭಾರೀ ಮೊತ್ತದ ಹಣವನ್ನು ಪಾವತಿಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳು ಒಂದು ‘ನೆಗೆಟಿವ್’ ಪ್ರಮಾಣ ಪತ್ರದ ಬೆಲೆ ಇಷ್ಟು ದುಬಾರಿಯೇ ಎಂದ ತಮಗೆ ತಾವೇ ಪ್ರಶ್ನಿಸಿದ್ದಿದೆ. ನಿಜಕ್ಕೂ ನಾವು ಮಾರಣಾಂತಿಕ ರೋಗವೊಂದನ್ನು ಗೆದ್ದು ಬಂದಿರುವುದು ನಿಜವೇ ಅಥವಾ ಆಸ್ಪತ್ರೆಗಳು ನಮ್ಮನ್ನು ವಂಚಿಸಿದವೇ ಎನ್ನುವ ಪ್ರಶ್ನೆಗಳಿಗೆ ಉತ್ತರಗಳು ಸಿಗದೆ ಕೊರಗುತ್ತಿರುವವರ ಸಂಖ್ಯೆ ದೊಡ್ಡದಿದೆ. ಆರ್ಥಿಕ ಅಡಚಣೆಗಳಿಂದ ಹತ್ತು ಹಲವು ಸಣ್ಣ ಪುಟ್ಟ ರೋಗಗಳಿಗೆ ಸೂಕ್ತ ಔಷಧಿ ಮಾಡದೇ ರೋಗಗಳೊಂದಿಗೆ ಹೊಂದಾಣಿಕೆಯಿಂದ ಬದುಕುತ್ತಿದ್ದ ಮಧ್ಯಮವರ್ಗದ ಜನರಿಂದ ಹಲವು ಆಸ್ಪತ್ರೆಗಳು ಕೊರೋನ ಕ್ವಾರಂಟೈನ್ ಹೆಸರಿನಲ್ಲಿ ಅಥವಾ ಕೊರೋನ ಪಾಸಿಟಿವ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ದೋಚಿವೆ. ಇಷ್ಟು ಹಣವನ್ನು ಹೊಂದಿಸಲು ಅವರು ತಮ್ಮ ಮನೆಮಾರುಗಳನ್ನು ಮಾರಾಟಮಾಡಬೇಕಾದ ಸ್ಥಿತಿಗೆ ಬಂದು ನಿಂತಿದ್ದಾರೆ.ಕೊರೋನ ಸೋಂಕಿತರೆಂದು ಗೊತ್ತಿದ್ದೂ ಆಸ್ಪತ್ರೆಗಳಿಗೆ ದಾಖಲಾಗದೆ ಮನೆಯಲ್ಲೇ ಚಿಕಿತ್ಸೆ ಪಡೆದ ದೊಡ್ಡ ಸಂಖ್ಯೆಯ ಜನರು ಗುಣಮುಖರಾಗಿದ್ದಾರೆ.

ಇದೇ ಸಂದರ್ಭದಲ್ಲಿ, ಅವಸರದಿಂದ ಆಸ್ಪತ್ರೆಗಳಿಗೆ ದಾಖಲಾಗಿ ಅಲ್ಲಿನ ಅವ್ಯವಸ್ಥೆಗೆ ಬಲಿಯಾದ ದೊಡ್ಡ ಸಂಖ್ಯೆಯ ಜನರೂ ನಮ್ಮ ನಡುವೆಯಿದ್ದಾರೆ. ಡ್ಯೂಕ್ ಗ್ಲೋಬಲ್ ಹೆಲ್ತ್ ಇನ್‌ಸ್ಟಿಟ್ಯೂಟ್ ಮತ್ತು ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾ (ಪಿಎಚ್‌ಎಫ್‌ಐ) ನಡೆಸಿದ ಪ್ರಾಥಮಿಕ ಅಧ್ಯಯನವು ಭಾರತದಲ್ಲಿಯ ಸ್ವೋದ್ಯೋಗಿಗಳ ಪೈಕಿ ಮೂರನೇ ಎರಡರಷ್ಟು ಜನರು ಮತ್ತು ವೇತನದಾರರ ಪೈಕಿ ಅರ್ಧದಷ್ಟು ಜನರು ಗಂಭೀರ ಅನಾರೋಗ್ಯಕ್ಕೆ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ಅಶಕ್ತರಾಗಿದ್ದಾರೆ ಎಂದು ಅಂದಾಜಿಸಿದೆ. ಮಾರಣಾಂತಿಕ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚಗಳು ಮುಗಿಲಿಗೇರಿದ್ದವು. ಸಾಕಷ್ಟು ಆರೋಗ್ಯ ವಿಮೆಯ ಸೌಲಭ್ಯವನ್ನು ಹೊಂದಿಲ್ಲದ ಭಾರತೀಯರು ದುಬಾರಿ ಆಸ್ಪತ್ರೆ ಶುಲ್ಕಗಳನ್ನು ಪಾವತಿಸಲು ಈಗ ಕ್ರೌಡ್‌ಫಂಡಿಂಗ್‌ನ ಮೊರೆ ಹೋಗುತ್ತಿದ್ದಾರೆ. ಭಾರತದಲ್ಲಿ ಹೆರಿಗೆ ಎನ್ನುವುದೇ ಹೆಣ್ಣಿನ ಪಾಲಿಗೆ ಅಗ್ನಿ ಪರೀಕ್ಷೆ. ಹೆರಿಗೆಗಾಗಿ ಬರುವವರನ್ನು ಆಸ್ಪತ್ರೆಗಳು ಶೋಷಿಸುವುದು ಪದೇ ಪದೇ ವರದಿಯಾಗುತ್ತವೆ. ಸಾಮಾನ್ಯ ಹೆರಿಗೆಯನ್ನು ಸಿಸೇರಿಯನ್ ಹೆರಿಗೆಯಾಗಿ ಪರಿವರ್ತಿಸುವ ಆಸ್ಪತ್ರೆಗಳ ಹಣದ ದಾಹ ತೀವ್ರ ಟೀಕೆಗಳಿಗೆ ಕಾರಣವಾಗುತ್ತಾ ಬಂದಿದೆ. ಕೊರೋನ ಸಂದರ್ಭದಲ್ಲಿ ಗರ್ಭಿಣಿಯರು ಮೊದಲು ಕೊರೋನ ಅಗ್ನಿ ಪರೀಕ್ಷೆಯನ್ನು ದಾಟಿ ಮುಂದೆ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಕೊರೋನ ಪರೀಕ್ಷೆ, ಕ್ವಾರಂಟೈನ್ ಇವೆಲ್ಲವುಗಳನ್ನು ದಾಟಿದ ಬಳಿಕವಷ್ಟೇ ಅವರು ಹೆರಿಗೆ ವಾರ್ಡ್‌ಗೆ ತಲುಪಬೇಕಾಗಿತ್ತು. ಗರ್ಭಿಣಿಯರ ಅಸಹಾಯಕತೆಯನ್ನು ಬಳಸಿಕೊಂಡು ಆಸ್ಪತ್ರೆಗಳು ಸಾಕಷ್ಟು ಲೂಟಿಗೈದ ಉದಾಹರಣೆಗಳನ್ನು ವರದಿಗಳು ಬೆಳಕಿಗೆ ತಂದಿವೆ. ಸರಕಾರಿ ವಿಮೆಗಳು ಬಹಳಷ್ಟು ಸಂತ್ರಸ್ತರಿಗೆ ಸಹಕಾರಿಯಾದವು. ಹಾಗೆಯೇ ಈ ವಿಮೆಯನ್ನು ದುರುಪಯೋಗ ಪಡಿಸಿಕೊಂಡ ಆಸ್ಪತ್ರೆಗಳು ಬಹಳಷ್ಟಿವೆ. ಸೋಂಕಿತನಿಗೆ ವಿಮೆ ಸೌಲಭ್ಯ ಅನ್ವಯವಾಗುತ್ತದೆ ಎಂದಾಕ್ಷಣ ಆಸ್ಪತ್ರೆಗಳು ಯದ್ವಾತದ್ವಾ ಬಿಲ್‌ಗಳನ್ನು ಗೀಚಿ ಹಾಕಿರುವ ಉದಾಹರಣೆಗಳಿವೆ. ಇದರ ವಿರುದ್ಧ ಭಾರೀ ಪ್ರತಿಭಟನೆಗಳೂ ನಡೆದಿವೆ. ಇದೇ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಕ್ರೌಡ್ ಫಂಡಿಂಗ್‌ಗಳು ಸಾಕಷ್ಟು ನೆರವು ನೀಡಿವೆ. ಕ್ರೌಡ್ ಫಂಡಿಂಗ್‌ನಲ್ಲಿ ಸಾಮಾಜಿಕ ಜಾಲ ತಾಣಗಳ ಕೊಡುಗೆ ಬಹುದೊಡ್ಡದು. ಸರಕಾರೇತರ ಸಂಸ್ಥೆಗಳು ಈ ಕ್ರೌಡ್ ಫಂಡಿಂಗ್‌ನ ನೇತೃತ್ವವನ್ನು ವಹಿಸಿದ್ದವು. ಮೂರು ಬೃಹತ್ ಕ್ರೌಡ್‌ಫಂಡಿಂಗ್ ತಾಣಗಳಾಗಿರುವ ಕಿಟೋ,ಮಿಲಾಪ್ ಮತ್ತು ಗಿವ್ ಇಂಡಿಯಾ ಸಾಂಕ್ರಾಮಿಕದ ಸಂದರ್ಭದಲ್ಲಿ 27 ಲಕ್ಷ ದಾನಿಗಳ ನೆರವಿನೊಂದಿಗೆ ಈವರೆಗೆ ಒಟ್ಟು 1,197.50 ಕೋಟಿ ರೂ. ಸಂಗ್ರಹಿಸಿವೆ ಎನ್ನುತ್ತಾರೆ ತಜ್ಞರು.

ಭಾರತದಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ ಜಿಡಿಪಿಯ ಕೇವಲ ಶೇ.1.2ರಷ್ಟು ಹಣವನ್ನು ವ್ಯಯಿಸಲಾಗುತ್ತಿದ್ದು,ಇದು ಜಗತ್ತಿನಲ್ಲಿಯೇ ಅತಿ ಕಡಿಮೆ ಹಂಚಿಕೆಗಳಲ್ಲೊಂದಾಗಿದೆ. ಸುಮಾರು ಮೂರನೇ ಎರಡರಷ್ಟು ಭಾರತೀಯರು ಯಾವುದೇ ಆರೋಗ್ಯ ವಿಮೆಯನ್ನು ಹೊಂದಿಲ್ಲ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮೆ ಯೋಜನೆ ‘ಮೋದಿ ಕೇರ್’ ಮೂಲಕ 50 ಕೋಟಿ ಬಡವರಿಗೆ ಉಚಿತ ಚಿಕಿತ್ಸಾ ಸೌಲಭ್ಯದ ಭರವಸೆ ನೀಡಿದ್ದರು. ಆದರೆ ಕೋವಿಡ್ ಚಿಕಿತ್ಸೆಗಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾಗ ಕೇವಲ ಶೇ.13ರಷ್ಟು ಅರ್ಹರಿಗೆ ಮಾತ್ರ ವಿಮೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗಿತ್ತು. ಈ ಯೋಜನೆಯು ಹೊರರೋಗಿ ವಿಭಾಗದ ವೆಚ್ಚವನ್ನು ಒಳಗೊಂಡಿಲ್ಲ ಮತ್ತು ಇದು ವೈದ್ಯಕೀಯ ವೆಚ್ಚದ ದೊಡ್ಡ ಭಾಗವಾಗಿದೆ.

ಕೊರೋನ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಜನಸಾಮಾನ್ಯರಿಂದ ಬೇರೆ ಬೇರೆ ರೂಪದಲ್ಲಿ ಸಂದಾಯವಾದ ಕೋಟ್ಯಂತರ ರೂಪಾಯಿಗಳು ಕೆಲವು ಪ್ರಶ್ನೆಗಳನ್ನು ಎತ್ತಿವೆ. ಈ ದೇಶದಲ್ಲಿ ಕೊರೋನ ಆಗಮಿಸುವ ಮುನ್ನವೂ, ಆ ಬಳಿಕವೂ ಇತರ ಮಾರಣಾಂತಿಕ ರೋಗಗಳಿಗೆ ಬಲಿಯಾಗಿ ಸಾಯುತ್ತಿರುವವರ ಸಂಖ್ಯೆ ಭಾರೀ ದೊಡ್ಡದಿದೆ. ಕ್ಯಾನ್ಸರ್, ಕ್ಷಯದಂತಹ ಮಾರಕ ರೋಗಗಳಿಗೆ ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುವ ಮಧ್ಯಮ ಮತ್ತು ಬಡವರ್ಗ ಭಾರತದಲ್ಲಿವೆ. ಕೊರೋನ ಸಂದರ್ಭದಲ್ಲಿ ಸಂಗ್ರಹವಾಗುವ ಕ್ರೌಡ್‌ಫಂಡ್‌ಗಳು ಇವರಿಗಾಗಿಯೂ ಯಾಕೆ ಸಂಗ್ರಹವಾಗುತ್ತಿಲ್ಲ? ಕೊರೋನ ಇಲ್ಲವಾದರೆ ಜನಸಾಮಾನ್ಯರ ಆರೋಗ್ಯ ಸಮಸ್ಯೆ ಸಂಪೂರ್ಣ ಇಲ್ಲವಾಗುತ್ತದೆಯೇ? ಸಮಾಜ ಮತ್ತು ಸರಕಾರ ಕೊರೋನೇತರ ರೋಗಗಳಿಗೂ ತೀವ್ರವಾಗಿ ಸ್ಪಂದಿಸುವ ಅಗತ್ಯವಿದೆ. ಒಂದು ವಾರದ ಕ್ವಾರಂಟೈನ್‌ಗೆ ನಾಲ್ಕೈದು ಲಕ್ಷ ರೂಪಾಯಿಯನ್ನು ವಿಮೆಯ ಮೂಲಕ ಅಥವಾ ಕ್ರೌಡ್ ಫಂಡ್ ಮೂಲಕ ಆಸ್ಪತ್ರೆಗಳು ಪಡೆದುಕೊಂಡಿವೆ. ಕ್ಯಾನ್ಸರ್, ಕ್ಷಯ, ಅಸ್ತಮಾದಂತಹ ರೋಗಗಳಿಂದ ನರಳುವವರಿಗೂ ಇಂತಹ ನೆರವು ಸಿಗಬೇಕಾಗಿದೆ. ಬಡವರ ಪಾಲಿಗೆ ಕ್ಷಯ, ಕ್ಯಾನ್ಸರ್, ಕೊರೋನಕ್ಕಿಂತಲೂ ಮಾರಕವಾದ, ಭೀಕರವಾದ ಕಾಯಿಲೆಗಳಾಗಿವೆ. ಕೊರೋನದ ಮರೆಯಲ್ಲಿ ಈ ರೋಗಗಳ ಭೀಕರತೆಯನ್ನು ಸಮಾಜ ಮತ್ತು ವ್ಯವಸ್ಥೆ ಮರೆಯ ಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News