ತಾಲಿಬಾನ್‌ನಿಂದಲೇ ದಾನಿಶ್ ಸಿದ್ದೀಕಿ ಹತ್ಯೆ : ವರದಿ

Update: 2021-07-30 03:57 GMT

ವಾಷಿಂಗ್ಟನ್ : ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕ ದಾನಿಶ್ ಸಿದ್ದೀಕಿ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾಗೂ ಸೇನೆ ನಡುವಿನ ಸಂಘರ್ಷದ ವೇಳೆ ಆಕಸ್ಮಿಕವಾಗಿ ಮೃತಪಟ್ಟಿರುವುದಲ್ಲ. ಬದಲಾಗಿ ಅವರ ಗುರುತನ್ನು ದೃಢಪಡಿಸಿಕೊಂಡ ಬಳಿಕ ತಾಲಿಬಾನ್ ಅವರನ್ನು "ನಿರ್ದಯವಾಗಿ ಹತ್ಯೆ ಮಾಡಿದೆ" ಎಂದು ಅಮೆರಿಕದ ನಿಯತಕಾಲಿಕವೊಂದು ವರದಿ ಮಾಡಿದೆ.

ಅಪ್ಘಾನಿಸ್ತಾನದಲ್ಲಿ ಸಿದ್ದೀಕಿ (38) ಮೃತಪಟ್ಟ ಸಂದರ್ಭ ಕೆಲಸದ ಮೇಲೆ ತೆರಳಿದ್ದರು. ಅಫ್ಘಾನಿಸ್ತಾನ ಪಡೆ ಮತ್ತು ತಾಲಿಬಾನ್ ನಡುವಿನ ಸಂಘರ್ಷದ ವೇಳೆ ಕಂದಹಾರ್ ನಗರ ಜಿಲ್ಲೆಯ ಸ್ಪಿನ್ ಬೋಲ್ಡಕ್ ಎಂಬಲ್ಲಿ ಗುಂಡೇಟಿಗೆ ಬಲಿಯಾಗಿದ್ದರು.

’ವಾಷಿಂಗ್ಟನ್ ಎಕ್ಸಾಮಿನರ್’ ಎಂಬ ನಿಯತಕಾಲಿಕದ ವರದಿಯ ಪ್ರಕಾರ ಸಿದ್ದೀಕಿ, ಅಫ್ಘಾನಿಸ್ತಾನದ ರಾಷ್ಟ್ರೀಯ ಸೇನಾ ತಂಡದ ಜತೆ ಸ್ಪಿನ್ ಬೋಲ್ಡಕ್ ಪ್ರದೇಶಕ್ಕೆ ತೆರಳಿದ್ದರು. ಪಾಕಿಸ್ತಾನದ ಜತೆಗಿನ ಗಡಿಭಾಗದ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಸೇನೆ ಹಾಗೂ ತಾಲಿಬಾನ್ ನಡುವೆ ನಡೆಯುತ್ತಿದ್ದ ಸಂಘರ್ಷದ ಬಗ್ಗೆ ವರದಿ ಮಾಡಲು ತೆರಳಿದ್ದರು.

ಕಸ್ಟಮ್ಸ್ ಪೋಸ್ಟ್ ಬಳಿಗೆ ತೆರಳಿದಾಗ ತಾಲಿಬಾನ್ ದಾಳಿಯ ಕಾರಣದಿಂದ ಸೇನಾ ತಂಡದ ವಿಭಜನೆಯಾಯಿತು. ಕಮಾಂಡರ್ ಮತ್ತು ಕೆಲವರು ಸಿದ್ದೀಕಿಯಿಂದ ಪ್ರತ್ಯೇಕವಾದರು. ಈ ವೇಳೆ ಸಿದ್ದೀಕಿ ಇತರ ಮೂರು ಅಪ್ಘಾನ್ ಪಡೆಗಳ ಜತೆ ಉಳಿದರು. ದಾಳಿಯ ವೇಳೆ ಗುಂಡು ತಾಗಿ ಸಿದ್ದೀಕಿ ಗಾಯಗೊಂಡಿದ್ದರು. ನಂತರ ಅವರು ಹಾಗೂ ಜತೆಗಿದ್ದ ತಂಡ ಸ್ಥಳೀಯ ಮಸೀದಿಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆಯಿತು.

ಪತ್ರಕರ್ತ ಮಸೀದಿಯಲ್ಲಿದ್ದಾರೆ ಎಂಬ ಸುದ್ದಿ ಹರಡಿದಾಗ ತಾಲಿಬಾನ್ ಮಸೀದಿ ಮೇಲೆ ದಾಳಿ ಮಾಡಿತು. ಸಿದ್ದೀಕಿ ಅಲ್ಲಿದ್ದಾರೆ ಎಂಬ ಏಕೈಕ ಕಾರಣದಿಂದ ತಾಲಿಬಾನ್ ಮಸೀದಿ ಮೇಲೆ ದಾಳಿ ನಡೆಸಿತ್ತು ಎಂದು ಸ್ಥಳೀಯ ತನಿಖೆಯಿಂದ ತಿಳಿದುಬಂದಿದೆ ಎಂದು ವರದಿ ವಿವರಿಸಿದೆ.

"ತಾಲಿಬಾನ್ ಸಿದ್ದೀಕಿ ಅವರನ್ನು ಸೆರೆ ಹಿಡಿದಾಗ ಅವರು ಜೀವಂತವಿದ್ದರು. ಸಿದ್ದೀಕಿ ಅವರ ಗುರುತನ್ನು ದೃಢಪಡಿಸಿಕೊಂಡ ಬಳಿಕ ತಾಲಿಬಾನ್ ಅವರನ್ನು ಹಾಗೂ ಜತೆಗಿದ್ದವರನ್ನು ಹತ್ಯೆ ಮಾಡಿತು. ಅವರನ್ನು ರಕ್ಷಿಸಲು ಮುಂದಾದ ಕಮಾಂಡರ್ ಹಾಗೂ ಇತರ ಸೈನಿಕರು ಕೂಡಾ ಬಲಿಯಾದವರು" ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News