ಟರ್ಕಿಯಲ್ಲಿ ವ್ಯಾಪಕವಾದ ಕಾಡ್ಗಿಚ್ಚು: ಒಂದೇ ವಾರದಲ್ಲಿ 60 ಕಡೆಗಳಲ್ಲಿ ಬೆಂಕಿ !

Update: 2021-07-31 06:37 GMT

ಟರ್ಕಿಯ ದಕ್ಷಿಣ ಕರಾವಳಿಯಲ್ಲಿ ಕಾಡ್ಗಿಚ್ಚಿನಿಂದ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ ಮತ್ತು ಡಜನ್ ಗಟ್ಟಲೆ ಗ್ರಾಮಗಳು ಮತ್ತು ಕೆಲವು ಹೋಟೆಲ್‌ಗಳಿಂದ ಜನರನ್ನು ಸ್ಥಳಾಂತರಿಸಿದ ನಂತರ ಅಗ್ನಿಶಾಮಕ ದಳದವರು ಮೂರನೇ ದಿನವೂ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ವಾರ ಟರ್ಕಿಯ ಏಶ್ಯನ್ ಮತ್ತು ಮೆಡಿಟರೇನಿಯನ್ ಕರಾವಳಿಯ 17 ಪ್ರಾಂತ್ಯಗಳಲ್ಲಿ 60 ಕ್ಕೂ ಹೆಚ್ಚು ಕಾಡ್ಗಿಚ್ಚುಗಳು ಭುಗಿಲೆದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಸಚಿವರು ಆರು ಪ್ರಾಂತ್ಯಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಮಾಹಿತಿ ನೀಡಿದ್ದು, ಅವುಗಳನ್ನು ಪ್ರಾರಂಭಿಸಲು ಯಾರಾದರೂ ಜವಾಬ್ದಾರರಾಗಿದ್ದಾರೆಯೇ ಎನ್ನುವುದನ್ನು ಪತ್ತೆಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಪ್ರವಾಸಿಗರಿಂದ ಜನಪ್ರಿಯವಾಗಿರುವ ಪ್ರದೇಶಗಳಲ್ಲಿನ ಕೆಲವು ಹಳ್ಳಿಗಳು ಮತ್ತು ಕೆಲವು ಹೋಟೆಲ್‌ಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಅಂಟೀಲಿಯಾದ ಮೆಡಿಟರೇನಿಯನ್ ರೆಸಾರ್ಟ್ ಪ್ರದೇಶ ಮತ್ತು ಮೊಗ್ಲಾದ ಏಜಿಯನ್ ರೆಸಾರ್ಟ್ ಪ್ರಾಂತ್ಯದಲ್ಲಿ ಇನ್ನೂ ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂದು ಅರಣ್ಯ ಸಚಿವ ಬೆಕಿರ್ ಪಕ್ಡೆಮಿರ್ಲಿ ಹೇಳಿದ್ದಾರೆ.

ಮೂರು ವಿಮಾನಗಳು, ಒಂಬತ್ತು ಡ್ರೋನ್‌ಗಳು, 38 ಹೆಲಿಕಾಪ್ಟರ್‌ಗಳು, 680 ಅಗ್ನಿಶಾಮಕ ವಾಹನಗಳು ಮತ್ತು 4,000 ಅಗ್ನಿಶಾಮಕ ದಳದ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಮತ್ತು ಉಸ್ಮಾನಿಯೆ, ಕೇಸೇರಿ, ಕೊಕೇಲಿ, ಅದಾನಾ, ಮರ್ಸಿನ್ ಮತ್ತು ಕುಟಾಹ್ಯಾ ಪ್ರಾಂತ್ಯಗಳಲ್ಲಿ ಪ್ರತ್ಯೇಕ ಕಾಡ್ಗಿಚ್ಚುಗಳು ಉಲ್ಬಣಗೊಂಡಿವೆ ಎಂದು ಪಕ್ಡೆಮಿರ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News