11 ವಾರಗಳ ಇಳಿಕೆ ಬಳಿಕ ಕೋವಿಡ್ ಪ್ರಕರಣ ಶೇ. 7.5 ಏರಿಕೆ

Update: 2021-08-02 03:47 GMT

ಹೊಸದಿಲ್ಲಿ, ಆ.2: ದೇಶದಲ್ಲಿ 11 ವಾರಗಳ ಬಳಿಕ ಇದೇ ಮೊದಲ ಬಾರಿಗೆ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಮೇ ಮೊದಲ ವಾರದಲ್ಲಿ ಎರಡನೇ ಅಲೆ ಉತ್ತುಂಗವನ್ನು ತಲುಪಿದ ಬಳಿಕ ಜುಲೈ 26- ಆಗಸ್ಟ್ 1ರ ನಡುವಿನ ಅವಧಿಯಲ್ಲಿ ಶೇಕಡ 7.5ರಷ್ಟು ಪ್ರಕರಣಗಳು ಹೆಚ್ಚಿವೆ. ಇದು ದೇಶದಲ್ಲಿ ಮತ್ತೊಂದು ಅಲೆಯ ಆರಂಭಿಕ ಸೂಚನೆ ಎನ್ನಲಾಗುತ್ತಿದೆ. ಆದರೆ ಈ ಬಾರಿಯ ಏರಿಕೆ ಕೇರಳ, ಕರ್ನಾಟಕ ಮತ್ತು ತಮಿಳುನಾಡಿಗೆ ಸೀಮಿತವಾಗಿದೆ.

ಹಿಂದಿನ ವಾರ ಭಾರತದಲ್ಲಿ 2.66 ಲಕ್ಷ ಹೊಸ ಪ್ರಕರಣಗಳು ದಾಖಲಾದರೆ, ಈ ವಾರ 2.86 ಲಕ್ಷ ಪ್ರಕರಣಗಳು ವರದಿಯಾಗಿವೆ. ಕಳೆದ ಹನ್ನೊಂದು ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಹಿಂದಿನ ವಾರ ಇಳಿಕೆ ಪ್ರಮಾಣ 1.4%ಗೆ ಇಳಿದಿತ್ತು.

ಕೇರಳದಲ್ಲಿ ಒಂದು ವಾರದಲ್ಲಿ ಸುಮಾರು 1.4 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ವಾರ ದಾಖಲಾದ ಪ್ರಕರಣಗಳಿಗಿಂತ ಶೇಕಡ 26.5ರಷ್ಟು ಅಧಿಕ. ಇಡೀ ದೇಶದಲ್ಲಿ ಕಳೆದ ಒಂದು ವಾರದಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಶೇಕಡ 49ರಷ್ಟು ಪ್ರಕರಣಗಳು ಕೇರಳದಲ್ಲೇ ಇವೆ. ರವಿವಾರ ಕೇರಳದಲ್ಲಿ 20,728 ಹೊಸ ಪ್ರಕರಣಗಳು ವರದಿಯಾಗಿದ್ದು, ಸತತ ಆರನೇ ದಿನ 20 ಸಾವಿರಕ್ಕಿಂತ ಅಧಿಕ ಪ್ರಕರಣಗಳನ್ನು ದಾಖಲಾಗಿದೆ.

ಆತಂಕಕಾರಿ ವಿಚಾರವೆಂದರೆ ಕೇರಳದ ಪ್ರಭಾವ ಅಕ್ಕಪಕ್ಕದ ರಾಜ್ಯಗಳ ಮೇಲೂ ದಟ್ಟವಾಗಿ ಕಂಡುಬರುತ್ತಿದೆ. ಕರ್ನಾಟಕದಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 17.3ರಷ್ಟು ಪ್ರಕರಣಗಳು ಹೆಚ್ಚಿದೆ. ಹಿಂದಿನ ವಾರ 10,610 ಪ್ರಕರಣಗಳು ದಾಖಲಾಗಿದ್ದ ಕರ್ನಾಟಕದಲ್ಲಿ ಈ ಬಾರಿ 12,442 ಪ್ರಕರಣಗಳು ವರದಿಯಾಗಿವೆ.
ತಮಿಳುನಾಡಿನಲ್ಲಿ ಬುಧವಾರ 1,756ರಷ್ಟಿದ್ದ ಹೊಸ ಪ್ರಕರಣಗಳ ಸಂಖ್ಯೆ ರವಿವಾರ 1,990ಕ್ಕೆ ಹೆಚ್ಚಿದ್ದು, ಪ್ರತಿದಿನ ಏರಿಕೆಯಾಗುತ್ತಲೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News