ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣ; ಠಾಣೆ ಮುಂದೆ ಪ್ರತಿಭಟನೆ, ಲಾಠಿಚಾರ್ಜ್

Update: 2021-08-02 14:31 GMT

ಬೆಂಗಳೂರು, ಆ.2: ಪೊಲೀಸ್ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವನ್ನಪ್ಪಿದ ಘಟನೆ ಖಂಡಿಸಿ ಜೆ.ಸಿ.ನಗರ ಪೊಲೀಸ್ ಠಾಣೆ ಎದುರು ಕೆಲ ಆಫ್ರಿಕಾ ಪ್ರಜೆಗಳು ಸೋಮವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಪೊಲೀಸರ ಹಾಗೂ ಆಫ್ರಿಕನ್ ಪ್ರಜೆಗಳ ನಡುವೆ ವಾಗ್ವಾದ ನಡೆದಿದ್ದು, ಕೆಲ ಆಫ್ರಿಕನ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಲಾಠಿಚಾರ್ಜ್ ನಡೆಸಿ, ಮುಂಜಾಗ್ರತ ಕ್ರಮವಾಗಿ ಪೊಲೀಸರು ಜೆ.ಸಿ.ನಗರ ಪೊಲೀಸ್ ಠಾಣೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಡ್ರಗ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೆ.ಸಿ.ನಗರ ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಜಾನ್(27) ಸಾವನ್ನಪ್ಪಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ವಿದೇಶಿ ಪ್ರಜೆ ಸಾವನ್ನಪ್ಪಿದ್ದಾನೆ.

ಆಫ್ರಿಕಾ ಪ್ರಜೆ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 5 ಗ್ರಾಂ ಎಂಡಿಎಂ ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಎದೆನೋವು ಮತ್ತು ಶೀತ ಇದೆ ಎಂದು ಆಫ್ರಿಕಾ ಪ್ರಜೆ ಪೊಲೀಸರಿಗೆ ತಿಳಿಸಿದ್ದ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಪೊಲೀಸರು ಚಿಕಿತ್ಸೆ ಕೊಡಿಸಿದ್ದರು. 

ಆದರೆ ಚಿಕಿತ್ಸೆ ಫಲಕಾರಿಯಾಗದೇ ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಆತನನ್ನು ಆಫ್ರಿಕಾ ಮೂಲದ ಗುರುತು ಈವರೆಗೂ ಪತ್ತೆಯಾಗಿಲ್ಲ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಸದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆಫ್ರಿಕನ್ ಪ್ರಜೆಗಳು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮೃತ ಆಫ್ರಿಕನ್ ಪ್ರಜೆಯನ್ನು ಬಂಧಿಸಿದ್ದ ಪೊಲೀಸರು ಸ್ಥಳಕ್ಕೆ ಬರುವಂತೆ ಪ್ರತಿಭಟನೆ ನಡೆಸಿದ್ದಾರೆ.

ಸಿಐಡಿಯಿಂದ ತನಿಖೆ: ಆಫ್ರಿಕನ್ ಪ್ರಜೆ ಸಾವು ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ವಿದೇಶಿ ಪ್ರಜೆಗಳ ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ಉತ್ತರ ವಿಭಾಗ ಡಿಸಿಪಿ ಧರ್ಮೇದ್ರಕುಮಾರ್, ಮೀನಾ, ಪ್ರತಿಭಟನಾಕಾರರ ಮನವೋಲಿಸಲು ಯತ್ನಿಸಿದರು.

ಪ್ರಧಾನಿ ಮೋದಿ ಗಮನಿಸಬೇಕು: ಪ್ರಧಾನಿ ನರೇಂದ್ರ ಮೋದಿ ಅವರು ಜೆ.ಸಿ.ನಗರ ಪೊಲೀಸರ ದೌರ್ಜನ್ಯವನ್ನು ಗಮನಿಸಬೇಕು. ಅಲ್ಲದೆ, ನಾವು ಹ್ಯೂಮನ್ ರೈಟ್ಸ್ ಯುನೈಟೆಡ್ ನೇಷನ್ಸ್, ನಮ್ಮ ಎಂಬೆಸ್ಸಿಯಲ್ಲೂ ದೂರು ನೀಡುತ್ತೇವೆ ಎಂದು ವಿದೇಶಿ ಪ್ರಜೆಗಳು ಪ್ರತಿಭಟನೆ ವೇಳೆ ಹೇಳಿಕೆಗಳನ್ನು ನೀಡಿದ್ದಾರೆ. 

ನಗರ ಪೊಲೀಸ್ ಆಯುಕ್ತರ ಹೇಳಿಕೆ: ಆ.1ರ ರಾತ್ರಿ 10:30ಕ್ಕೆ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಿಎಸ್‌ಐ ರಘುಪತಿ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ರಾತ್ರಿ 12:30ಕ್ಕೆ ವಶಕ್ಕೆ ಪಡೆಯಲಾಗಿದೆ ಬಂಧನ ಮಾಡುವ ಸಂದರ್ಭದಲ್ಲಿ ಪರಾರಿಯಾಗಲು ಪ್ರಯತ್ನ ಮಾಡಿದ್ದ. 
ಆದರೆ ಪಿಎಸ್‌ಐ ಸಿಬ್ಬಂದಿಯೊಂದಿಗೆ ಆತನ ಬಂಧನ ಮಾಡಿದ್ದಾರೆ. ಬಳಿಕ ತಡರಾತ್ರಿ 2.15 ಕ್ಕೆ ವಶಪಡಿಸಿಕೊಂಡ ಡ್ರಗ್ಸ್ ಸಮೇತ ಆತನ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಆರೋಪಿಗೆ ಎದೆ ನೋವು ಪ್ರಾರಂಭವಾಯಿತು. ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ 6.45 ರ ಹೊತ್ತಿಗೆ ಆತನಿಗೆ ಹೃದಯಾಘಾತ ಆಗಿ ಸಾವನ್ನಪ್ಪಿದ್ದಾನೆ. ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News