ಲೈಂಗಿಕ ಕಿರುಕುಳ ಆರೋಪಿಯ ಸಹಚರ ಎಂಬ ತಪ್ಪುಕಲ್ಪನೆ: ಥಳಿಸಿ ಅಮಾಯಕ ಯುವಕನ ಹತ್ಯೆ

Update: 2021-08-04 04:18 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ.4: ಉದ್ಯೋಗ ಹುಡುಕಲು ಆಗಮಿಸಿದ್ದ ಯುವಕನೊಬ್ಬ ರಸ್ತೆ ಪಕ್ಕ ಇಬ್ಬರ ಜತೆ ನಿಂತಿದ್ದಾಗ, ಲೈಂಗಿಕ ಕಿರುಕುಳದ ಆರೋಪಿಯ ಸಹಚರ ಎಂದು ತಪ್ಪಾಗಿ ಭಾವಿಸಿ ಆತನನ್ನು ಕಾರಿನಲ್ಲಿ ಸ್ಪೋರ್ಟ್ಸ್ ಅಕಾಡಮಿಯೊಂದಕ್ಕೆ ಕರೆದೊಯ್ದು ಥಳಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

ಅಕಾಡಮಿಯಲ್ಲಿ ತರಬೇತಿಗೆ ಆಗಮಿಸುತ್ತಿದ್ದ 17 ವರ್ಷದ ಯುವತಿಯೊಬ್ಬಳಿಗೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ಈ ದಾಳಿ ನಡೆಸಿದರು ಎನ್ನಲಾಗಿದೆ. ಬಡಿಗೆ ಮತ್ತು ಕಬ್ಬಿಣದ ರಾಡ್‌ಗಳಿಂದ ಹೊಡೆದ ಪರಿಣಾಮ ಅಮಾಯಕ ಯುವಕ ಅನೂಜ್ (26) ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದ ಎನ್ನಲಾಗಿದೆ. ಅಟಾಪ್ಸಿ ವರದಿ ನಿರೀಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಕಾಡಮಿಯ ಕೋಚ್ ಹಾಗೂ ಇತರ ಇಬ್ಬರ ವಿರುದ್ಧ ಹತ್ಯೆ ಮತ್ತು ದಂಗೆ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಅನೂಜ್‌ಗೆ ಥಳಿಸಿದ್ದ ಎನ್ನಲಾದ ವ್ಯಕ್ತಿಯೊಬ್ಬನನ್ನು ಸಂಜೆ ವೇಳೆ ಬಂಧಿಸಲಾಗಿದೆ. ಯುವತಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕಾಡಮಿಗೆ ಯುವಕರ ಗುಂಪು ಆಗಮಿಸುವ ವೇಳೆ, ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ ಬೈಕ್‌ನಲ್ಲಿ ಪರಾರಿಯಾಗಿದ್ದ. ಹನ್ನೆರಡನೇ ತರಗತಿ ವಿದ್ಯಾರ್ಥಿನಿ ತನ್ನ ತಂದೆಗೆ ಕರೆ ಮಾಡಿ, ಮನೆಯೊಂದರಲ್ಲಿ ಆಶ್ರಯ ಪಡೆದು, ಸುರಕ್ಷಿತವಾಗಿ ವಾಪಸ್ಸಾಗಲು ಬೆಂಗಾವಲು ಕೋರಿದ್ದಳು. ಆಗ ಅಕಾಡಮಿಯ ಮಾಲಕರಿಗೆ ಯುವತಿಯ ತಂದೆ ಕರೆ ಮಾಡಿದ ಹಿನ್ನೆಲೆಯಲ್ಲಿ ಯುವಕರ ಗುಂಪನ್ನು ಮಾಲಕ ಕಳುಹಿಸಿದ್ದ ಎನ್ನಲಾಗಿದೆ.

ಯುವತಿ ತಪ್ಪಾಗಿ ಅನೂಜ್ ಹಾಗೂ ಸಂಜಯ್ ಅವರನ್ನು ತನಗೆ ಕಿರುಕುಳ ನೀಡಿದ ವ್ಯಕ್ತಿಯ ಸಹಚರರು ಎಂದು ಹೇಳಿದ್ದಳು. ತನ್ನ ಭಾವ ಅನೂಜ್ ಕುಮಾರ್ ಗೌತಮ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕಾಗಿ ಹೋಗಿದ್ದ ಎಂದು ಸಂಜಯ್(32) ಹೇಳಿಕೆ ನೀಡಿದ್ದಾರೆ. ಇಬ್ಬರೂ ಉತ್ತರ ಪ್ರದೇಶದ ಜೂನ್‌ಪುರದವರಾಗಿದ್ದು, ಉದ್ಯೋಗಕ್ಕಾಗಿ ಗುರುಗ್ರಾಮಕ್ಕೆ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News