ಕೋವಿಡ್ ಲಸಿಕೆ ಉತ್ಪಾದನೆ: ಭಾರತಕ್ಕೆ ಅಮೆರಿಕ ನೆರವು ಘೋಷಣೆ

Update: 2021-08-04 04:29 GMT

ವಾಷಿಂಗ್ಟನ್, ಆ.4: ಕೋವಿಡ್-19 ವಿರುದ್ಧದ ಲಸಿಕೆಯನ್ನು ಸ್ವಯಂ ಉತ್ಪಾದಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಹಾಗೂ ಇತರ ದೇಶಗಳಿಗೆ ಅಮೆರಿಕ ನೆರವು ನೀಡಲಿದೆ ಎಂದು ಅಧ್ಯಕ್ಷ ಜೋ ಬೈಡೆನ್ ಪ್ರಕಟಿಸಿದ್ದಾರೆ.

ವಿಶ್ವಾದ್ಯಂತ ಹಲವು ಶತಕೋಟಿ ಡೋಸ್‌ಗಳ ಲಸಿಕೆ ಅಗತ್ಯವಿದ್ದು, 50 ಕೋಟಿ ಡೋಸ್‌ಗಳನ್ನು ನೀಡಲು ಅಮೆರಿಕ ಬದ್ಧವಾಗಿದೆ ಎಂದು ಮಂಗಳವಾರ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

"50 ಕೋಟಿ ಡೋಸ್‌ಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಅಂತೆಯೇ ಭಾರತದಂಥ ದೇಶಗಳು ಸ್ವಯಂ ಆಗಿ ಲಸಿಕೆ ಉತ್ಪಾದನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅವುಗಳ ಸಾಮರ್ಥ್ಯ ವೃದ್ಧಿಗೆ ನಾವು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ನೆರವನ್ನೂ ನೀಡುತ್ತಿದ್ದೇವೆ. ಸದ್ಯಕ್ಕೆ ನಾವು ಅಷ್ಟು ಮಾಡುತ್ತಿದ್ದೇವೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೈಡೆನ್ ಸ್ಪಷ್ಟಪಡಿಸಿದರು.

"ನಾವು ನೀಡುತ್ತಿರುವ ನೆರವು ಉಚಿತ. ನಾವು ಯಾರಿಗೂ ಸ್ವಲ್ಪವೂ ಶುಲ್ಕ ವಿಧಿಸುವುದಿಲ್ಲ. ನಮ್ಮಿಂದ ಸಾಧ್ಯವಾದಷ್ಟೂ ನೆರವಾಗುವ ಪ್ರಯತ್ನ ಮಾಡುತ್ತಿದ್ದೇವೆ" ಎಂದರು.

ಇದು ಕೋವಿಡ್-19 ವಿರುದ್ಧದ ಸಮರ, ಇದರ ವಿರುದ್ಧದದ ಸಮರಕ್ಕೆ ಲಸಿಕಾ ಶಸ್ತ್ರಾಗಾರ ಎರಡನೇ ಮಹಾಯುದ್ಧದಲ್ಲಿ ದೇಶ ಹೊಂದಿದ್ದ ಶಸ್ತ್ರಾಗಾರದಷ್ಟು ಬೃಹತ್ ಆಗಿರಬೇಕಾಗುತ್ತದೆ ಎಂದು ಬಣ್ಣಿಸಿದರು.

ವಿಶ್ವಾದ್ಯಂತ ಕೋವಿಡ್-19 ಲಸಿಕೆಗಳ ಪೂರೈಕೆಗೆ ವಿಶ್ವದ ಯಾವುದೇ ದೇಶ ನೀಡದಷ್ಟು ಕೊಡುಗೆಯನ್ನು ನಾವು ನೀಡಿದ್ದೇವೆ. ನಮ್ಮ ಪಾಲುದಾರ ದೇಶಗಳಾದ ಜಪಾನ್, ಭಾರತ, ಆಸ್ಟ್ರೇಲಿಯಾದಂಥ ದೇಶಗಳಲ್ಲಿ ಲಸಿಕೆ ಉತ್ಪಾದನೆಗೂ ನೆರವಾಗಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News