ಕೊರೋನ 3ನೇ ಅಲೆಗೆ ಸ್ವಯಂ ಜಾಗೃತಿಯೆ ಮದ್ದು!

Update: 2021-08-05 11:56 GMT

ಕಳೆದ ಒಂದೂವರೆ ವರ್ಷದಿಂದ ಜಗತ್ತು ಕೊರೋನ ಮಹಾಮಾರಿಗೆ ನಲುಗಿ ಹೋಗಿದೆ. ಲಕ್ಷಾಂತರ ಮಂದಿ ಜೀವ ಕಳೆದುಕೊಂಡರೆ, ಕೋಟ್ಯಂತರ ಮಂದಿ ಮಹಾಮಾರಿಯ ಕಬಂದ ಬಾಹುಗಳಿಂದ ಬಿಡಿಸಿಕೊಂಡು ಹೊರಬಂದಿದ್ದಾರೆ. ಇವೆಲ್ಲದರ ನಡುವೆ ಅನೇಕ ದೀನ-ದುರ್ಬಲ ಜನರು ಹೊಟ್ಟೆ ಬಟ್ಟೆಗೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊರೋನ ಮಹಾಮಾರಿಯ ನಿಯಂತ್ರಣಕ್ಕೆ ಸರಕಾರಗಳು ಕೈಗೊಂಡ ಲಾಕ್‌ಡೌನ್ ಜನರ ಆರ್ಥಿಕಸ್ಥಿತಿಯನ್ನು ಮತ್ತಷ್ಟು ನಿಕೃಷ್ಟಗೊಳಿಸಿದೆ. ಆಳುವ ಸರಕಾರಗಳು ಜನರ ಬವಣೆಯನ್ನು ನೀಗಿಸುವಲ್ಲಿ ತೋರಿದ ಅಸಡ್ಡೆ ಜನರ ಕಣ್ಣು ತೆರೆಸಬೇಕಿದೆ. ಕೊರೋನವು ರೂಪಾಂತರಿಯಾಗಿ ಜನರನ್ನು ಕಾಡಲೆತ್ನಿಸಿದೆ. ಸರಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗೊಂಡಿರುವ ಲಾಕ್‌ಡೌನ್ ತೆರವು ಕೊರೋನ ಮೂರನೇ ಅಲೆಯ ಉಲ್ಬಣಕ್ಕೆ ನಾಂದಿಯಾಗಬಹುದು ಎಂಬ ಆತಂಕ ಶುರುವಾಗಿದೆ. ಅಲ್ಲದೆ, ಲಭ್ಯವಿರುವ ಅಸಮರ್ಪಕ ಹಾಗೂ ಅಪೂರ್ಣ ಅಂಕಿ-ಅಂಶಗಳ ಆಧಾರದ ಮೇಲೆ ತಜ್ಞರು ನುಡಿಯುತ್ತಿರುವ ಕೊರೋನ ಅಲೆಗಳ ಭವಿಷ್ಯ ಎಷ್ಟು ನೈಜವಾದದ್ದು ಎಂಬುದನ್ನು ಮನಗಾಣಬೇಕಿದೆ.

ಮಹಾಮಾರಿಯ ನಿಯಂತ್ರಣಕ್ಕಾಗಿ ಸರಕಾರವು ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಕುಸಿದು ಜನರ ಜೀವನ ಅಸ್ತವ್ಯಸ್ತವಾಗಿದೆ. ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ, ಕೂಲಿ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ನಿರುದ್ಯೋಗದ ಪ್ರಮಾಣವು ಶೇ.24ರಷ್ಟಕ್ಕೆ ತಲುಪಿತ್ತು. ಇದರಿಂದಾಗಿ ಜನರ ಆದಾಯದ ಕುಸಿತವು ಶೇ.46ರಷ್ಟಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪ್ರಧಾನ ಮಂತ್ರಿ ಬಡತನ ನಿರ್ಮೂಲನೆ ಯೋಜನೆಯಡಿಯಲ್ಲಿ 312 ಬಿಲಿಯನ್ ಹಣವನ್ನು ಸುಮಾರು 331 ಮಿಲಿಯನ್ ಮಹಿಳೆಯರು, ಕಟ್ಟಡ ಕೂಲಿಕಾರ್ಮಿಕರು, ರೈತರು ಹಾಗೂ ಹಿರಿಯ ನಾಗರಿಕರಿಗೆ ಹಂಚಿಕೆ ಮಾಡಿರುುದಾಗಿ ಸರಕಾರಿ ಮೂಲಗಳು ತಿಳಿಸಿವೆ.

ಕೊರೋನ ಸಾಂಕ್ರಾಮಿಕಕ್ಕೆ ದೇಶಾದ್ಯಂತ ಒಟ್ಟು 4ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 36,000ಕ್ಕಿಂತಲೂ ಹೆಚ್ಚು ಜನ ಸಾವಿಗೀಡಾಗಿದ್ದರೆ, ನೆರೆ ರಾಜ್ಯವಾದ ಮಹಾರಾಷ್ಟ್ರದಲ್ಲಿ ಇದರ ಪ್ರಮಾಣ ಶೇ. 1.5ದಷ್ಟಿದೆ. ಹಾಗೆಯೇ, ತಮಿಳುನಾಡಿನಲ್ಲಿ 34,000ಕ್ಕಿಂತಲೂ ಹೆಚ್ಚು ಮಂದಿ, ಕೇರಳದಲ್ಲಿ ಸುಮಾರು 17 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ದೇಶದ 11 ರಾಜ್ಯಗಳಲ್ಲಿ ಸುಮಾರು 60ಕ್ಕೂ ಅಧಿಕ ಡೆಲ್ಟಾ ಪ್ಲಸ್ ರೋಗವು ಕಾಣಿಸಿಕೊಂಡಿದೆ. ಕಪ್ಪು, ಹಳದಿ ಶಿಲೀಂದ್ರ ಹೀಗೆ ಹಲವು ರೂಪದಲ್ಲಿ ಮಹಾಮಾರಿಯು ಜನರನ್ನು ನಲುಗಿಸುತ್ತಿದೆ. ಅಮೆರಿಕ ಮತ್ತು ಬ್ರಿಟನ್ ದೇಶದಲ್ಲಿ ಡೆಲ್ಟಾ ವೈರಾಣುವಿನ ಹರಡುವಿಕೆ ಅಧಿಕವಾಗಿದ್ದು, ಅಲ್ಲಿನ ಜನರಿಗೆ ಮಾಸ್ಕ್ ಧರಿಸದೆ ಅನಗತ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಲಸಿಕೆಯನ್ನು ಪಡೆಯದ ಜನರಿಗೆ ಪರಿವರ್ತಿತ ಸೋಂಕು ಬೇಗನೆ ಹರಡುತ್ತಿದ್ದು ಅಲ್ಲಿನ ಜನತೆಗೆ ಲಸಿಕೆಯನ್ನು ಪಡೆದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಆದರೆ, ಭಾರತದಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಹಲವು ಗೊಂದಲಗಳು ಜನರಲ್ಲಿ ಮನೆಮಾಡಿದ್ದು ಇಂದಿಗೂ ಜನ ಲಸಿಕೆಯನ್ನು ಪಡೆದುಕೊಳ್ಳಲು ನಿರಾಸಕ್ತಿ ತಳೆದಿದ್ದಾರೆ. ಹೀಗೆ ದೇಶದಲ್ಲಿ ಲಸಿಕೆ ಅಭಿಯಾನವು ಮಂದಗತಿಯಲ್ಲಿ ಸಾಗಿರುವ ಕಾಲದಲ್ಲಿ ಜನನಿಬಿಡ ವಲಯಗಳ ಲಾಕ್‌ಡೌನ್ ತೆರವಿನ ನಿರ್ಧಾರವು ಕಾುಲೆಯ ಉಲ್ಬಣಕ್ಕೆ ಕಾರಣವಾಗಬಹುದು.

ಆಗಸ್ಟ್ ತಿಂಗಳಿನಿಂದ ಜಗತ್ತಿನಾದ್ಯಂತ ಮೂರನೇ ಅಲೆಯ ಆರಂಭ ಎಂಬ ಆತಂಕ ಜನರನ್ನು ಆವರಿಸಿದೆ. ಜಗತ್ತಿನ ವೈದ್ಯಕೀಯ ಸಂಶೋಧನಾ ಸಂಸ್ಥೆಯ ತಜ್ಞರು ಕೊರೋನ ಅಲೆಯ ಬಗ್ಗೆ ತಮ್ಮದೇ ಆದ ನಿಲುವುಗಳನ್ನು ಹೊಂದಿದ್ದಾರೆ. ಜಾನ್ ಹಾಪ್ಕಿನ್ಸ್ ಸಂಸ್ಥೆಯ ತಜ್ಞರಾದ ಡೇವಿಡ್ ಪೀಟರ್ ಪ್ರಕಾರ ‘‘ಉಸಿರಾಟದ ಕಾಯಿಲೆಗಳ ಭವಿಷ್ಯವನ್ನು ನಿರ್ಧರಿಸಲು ಯಾವುದೇ ಮಾನದಂಡವಾಗಲಿ, ಮಾದರಿಗಳಾಗಲಿ ಇಲ್ಲ’’ ಎಂದಿದ್ದಾರೆ. ಯಾವುದೇ ಐತಿಹಾಸಿಕ ದಾಖಲೆಗಳಿಲ್ಲದೆ ಕಾಯಿಲೆ ತೀವ್ರತೆಯನ್ನು ಊಹಿಸಲು ಸಾಧ್ಯವಿಲ್ಲವೆಂಬುದು ಅನೇಕ ತಜ್ಞರ ವಾದವಾಗಿದೆ. ಇಂಪೀರಿಯಲ್ ಕಾಲೇಜ್ ಆಫ್ ಲಂಡನ್‌ನ ಮತ್ತೊಬ್ಬ ತಜ್ಞರಾದ ಪ್ರೊ. ನೀಲ್ ಫರ್ಗುಸನ್ ರ ಪ್ರಕಾರ ‘‘ಕಡ್ಡಾಯ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳುವುದಾದರೆ ಕೊರೋನದ ಉಲ್ಬಣವು ಅನಿವಾರ್ಯವಾಗುತ್ತದೆ’’ ಎಂದಿದ್ದಾರೆ.

ಚುಚ್ಚುಮದ್ದು ಲಭ್ಯವಿಲ್ಲದ ಸಮಯದಲ್ಲಿ ಉಂಟಾದ ಪ್ರಾಣಹಾನಿಗಿಂತಲೂ ಚುಚ್ಚುಮದ್ದು ಲಭ್ಯವಿರುವ ಸಮಯದಲ್ಲಿ ಸಾವಿನ ಪ್ರಮಾಣ ಅಧಿಕವಾಗಿರುವುದನ್ನು ಕಾಣಬಹುದಾಗಿದೆ. ದೇಶವು 2 ಬಾರಿ ಸೋಂಕಿನ ತೀವ್ರತೆಯನ್ನು ಎದುರಿಸಿದ್ದರೆ, ದಿಲ್ಲಿ ರಾಜ್ಯವು ಈಗಾಗಲೇ 4 ಬಾರಿ ಸೋಂಕಿನ ತೀವ್ರತೆ ಎದುರಿಸಿದೆ. ಕೊರೋನ ವೈರಾಣುವಿನ ಹರಡುವಿಕೆಯು ಬೇಸಿಗೆಯಲ್ಲಿ ಕಡಿಮೆಯಿರುತ್ತದೆ ಎಂದು ಊಹಿಸಲಾಗಿತ್ತು. ಆದರೆ, ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲೇ ಸೋಂಕಿನ ಪ್ರಮಾಣವು ಅಧಿಕವಾಗಿದ್ದನ್ನು ಕಾಣಬಹುದು. ಕೊರೋನಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಜನರಲ್ಲಿ ಮೌಢ್ಯವು ತಲೆದೋರಿದ್ದು, ಅನೇಕ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುವ ಮೂಲಕ ಜನಸಂದಣಿಗೆ ಕಾರಣವಾಗಿದೆ. ಇದರಿಂದ ಸೋಂಕಿನ ಪ್ರಮಾಣವು ಅಧಿಕವಾಗಿ ಜನರು ತೊಂದರೆಯನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಮೂರನೇ ಅಲೆಯು ಮಕ್ಕಳನ್ನೇ ಗುರಿಯಾಗಿಸಲಿದೆ ಎಂಬ ವಿಚಾರಗಳು ಜನರನ್ನು ಆತಂಕಕ್ಕೀಡುಮಾಡಿದೆ. ಸರಕಾರವು ಮಕ್ಕಳ ಜೀವರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

 ಮೊದಲು ಕಾಯಿಲೆಯ ಸ್ವರೂಪ ಮತ್ತು ತೀವ್ರತೆಯ ಅರಿವಿನ ಕೊರತೆಯಿಂದ ಸಾಕಷ್ಟು ಸಾವು-ನೋವು ಸಂಭವಿಸಿದವು. ಎರಡನೇ ಹಂತದಲ್ಲಿ ಸಂಶೋಧನೆಗಳಿಂದ ಕೊರೋನ ನಿಯಂತ್ರಣಕ್ಕೆ ಪರಿಹಾರಗಳು ದೊರೆತವಾದರೂ ತಾಂತ್ರಿಕತೆಯ ಕೊರತೆ ಮತ್ತು ರಾಜಕೀಯ ಅಸಹಕಾರದಿಂದ ಮತ್ತಷ್ಟು ತೀವ್ರತೆಯನ್ನು ಎದುರಿಸಬೇಕಾಯಿತು. ಇಂದು ಕೊರೋನವು ವಿವಿಧ ರೂಪಗಳಲ್ಲಿ ಬಲಿಷ್ಠವಾಗಿದ್ದು ಅದಕ್ಕೆ ಅಗತ್ಯವಾದ ಮಾಹಿತಿ, ತಾಂತ್ರಿಕ ಸವಲತ್ತುಗಳ ಕೊರತೆಯಿದೆ. ಕೊರೋನದಿಂದ ವಿವಿಧ ರೀತಿಯ ಅಡ್ಡ ಪರಿಣಾಮಗಳು, ಹೊಸ ಸ್ಪರೂಪದ ಕಾಯಿಲೆಗಳು ಉಲ್ಬಣವಾಗಿವೆ. ಹಲವು ಲಸಿಕೆಗಳು, ಔಷಧಗಳಿಂದ ಕೊರೋನ ವೈರಾಣುವು ಬೇರೆಯ ಸ್ವರೂಪ ಪಡೆದಿರಬಹುದೆನ್ನಲಾಗುತ್ತಿದೆ. ಸದಾ ಮಾಸ್ಕ್‌ಗಳ ಬಳಕೆಯಿಂದ ಜನರಲ್ಲಿ ಹೈಪೋಕ್ಸಿಯಾ ಸಮಸ್ಯೆ, ಶ್ವಾಸಕೋಶ ಸಂಬಂಧಿತ ಸೋಂಕುಗಳು ಉಲ್ಬಣಿಸುವ ಸಾಧ್ಯತೆಗಳಿವೆ. ಆದ್ದರಿಂದ ಜನರು ಮಾಸ್ಕ್‌ಗಳನ್ನು ನಿಯಮಿತವಾಗಿ ಬಳಸಬೇಕಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ಅಧಿಕವಾಗಿರುವುದರಿಂದ ಮೊದಲೆರಡು ಹಂತದಲ್ಲಿ ಅಷ್ಟೊಂದು ತೊಂದರೆಯಾಗಿಲ್ಲ. ಆದರೆ, ಪರಿವರ್ತಿತ ವೈರಾಣು ಪ್ರಬಲವಾಗಿದ್ದು; ಮಕ್ಕಳಿಗೂ ತೊಂದರೆಯಾಗಬಹುದು ಎಂಬುದು ತಜ್ಞರ ಆತಂಕ. ಆಗಸ್ಟ್ ಅಂತ್ಯಕ್ಕೆ ಪ್ರತಿ ದಿನಕ್ಕೆ ಒಂದು ಲಕ್ಷ ಹೊಸ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಐ.ಸಿ.ಎಮ್.ಆರ್. ತಜ್ಞರು ಈಗಾಗಲೇ ತಿಳಿಸಿದ್ದಾರೆ. ಇಷ್ಟು ಪ್ರಕರಣಗಳು ವರದಿಯಾದರೆ ಸೋಂಕಿನ ನಿರ್ವಹಣೆಗೆ ಅಗತ್ಯ ಸವಲತ್ತಾದ ನಿಗಾ ಘಟಕಗಳ ಕೊರತೆ, ಜೀವವಾಯು ಸರಬರಾಜು ಮೊದಲಾದ ಸಮಸ್ಯೆಗಳಾಗಲಿವೆ.

ಕೊರೋನ ಕಾಯಿಲೆಯು ಸಾಂಕ್ರಾಮಿಕವಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ವೈರಾಣುವಾಗಿದೆ. ಸೋಂಕಿನ ಲಕ್ಷಣವಿರುವ ವ್ಯಕ್ತಿ ವೈಯಕ್ತಿಕ ಜವಾಬ್ದಾರಿಯನ್ನು ತೋರುವ ಅಗತ್ಯವಿದೆ. ಸರಕಾರದ ನಿಯಮಗಳಾದ ಲಸಿಕೆ ಪಡೆದುಕೊಳ್ಳುವಿಕೆ, ಸುರಕ್ಷಿತ ಅಂತರ, ಕಡ್ಡಾಯ ಮಾಸ್ಕ್ ಧರಿಸುವಿಕೆ, ನೈರ್ಮಲ್ಯೀಕರಣಗಳನ್ನು ಜನರು ಪಾಲಿಸಬೇಕಿದೆ. ಮದುವೆ, ಹಬ್ಬ, ಸಮಾರಂಭದಂತಹ ಆಚರಣೆಗಳನ್ನು ಸರಳೀಕರಿಸಿಕೊಳ್ಳಬೇಕಿದೆ. ಸರಕಾರವು ಸೋಂಕಿನ ನಿಯಂತ್ರಣಕ್ಕೆ ಅಗತ್ಯವಾದ ಸವಲತ್ತುಗಳನ್ನು ಜನರಿಗೆ ಅಗತ್ಯ ಪ್ರಮಾಣದಲ್ಲಿ ಮತ್ತು ನಿರ್ದಿಷ್ಟ ಸಮಯಕ್ಕೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿದೆ. ಹೀಗೆ, ಕೊರೋನದ ಹಿನ್ನೆಲೆಯನ್ನು ವೈಜ್ಞಾನಿಕ ದೃಷ್ಟಿಕೋನದ ಮೂಲಕ ಗ್ರಹಿಸಿ ಅದರ ವಿರುದ್ಧ ಹೋರಾಡಬೇಕೇ ವಿನಹ ಮೌಢ್ಯ ಮತ್ತು ಅಂಧಕಾರದಿಂದ ಅರ್ಥೈಸಿಕೊಂಡು ಕಾಯಿಲೆಯ ಉಲ್ಬಣಕ್ಕೆ ಎಡೆಮಾಡಿಕೊಡುವುದು ಸರಿಯಲ್ಲ.

ಶ್ರೀನಿವಾಸ ಕೆ.

 ದಾಖಲೀಕರಣಕಾರರು ,ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ(ಐಸೆಕ್)

 ಬೆಂಗಳೂರು

Writer - ಶ್ರೀನಿವಾಸ ಕೆ.

contributor

Editor - ಶ್ರೀನಿವಾಸ ಕೆ.

contributor

Similar News