ಖೇಲ್ ರತ್ನ ಪದಕ ಎಂದು ಪರಮ್ ವೀರ್ ಚಕ್ರ ಪದಕದ ಚಿತ್ರ ಪೋಸ್ಟ್ ಮಾಡಿ ಎಡವಟ್ಟು ಮಾಡಿಕೊಂಡ ಬಿಜೆಪಿ ನಾಯಕರು

Update: 2021-08-08 03:44 GMT

ಹೊಸದಿಲ್ಲಿ : ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯಾಗಲಿದೆ ಎಂದು ಶುಕ್ರವಾರ ಘೋಷಿಸಿದ್ದ ಪ್ರಧಾನಿ ದೇಶದ ನಾಗರಿಕರ ಭಾವನೆಗಳನ್ನು ಮನ್ನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದರು.

ಇದರ ಬೆನ್ನಲ್ಲೇ ಪ್ರಧಾನಿಗೆ ಧನ್ಯವಾದ ಹೇಳಿ ಹಲವು ಬಿಜೆಪಿ ನಾಯಕರು ಹಾಗೂ ಸಚಿವರುಗಳು ಒಂದು ಫೋಟೋದೊಂದಿಗೆ ಟ್ವೀಟ್ ಮಾಡಿದ್ದರು. ಆ ಫೋಟೋದಲ್ಲಿ  ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯ ಪದಕವೆಂಬಂತೆ ಒಂದು ಪದಕದ ಚಿತ್ರ, ಜತೆಗೆ ಪ್ರಧಾನಿಯ ಚಿತ್ರವೂ ಇದೆ.

ಆದರೆ ಈ ಪದಕ ಖೇಲ್ ರತ್ನ ಪ್ರಶಸ್ತಿಯದ್ದಾಗಿರದೆ ದೇಶದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮ್ ವೀರ್ ಚಕ್ರದ್ದಾಗಿತ್ತು.

ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಮಾಜಿ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಂಸದರಾದ ಸತ್ಯದೇವ್ ಪಚೌರಿ, ಬಿ ವೈ ರಾಘವೇಂದ್ರ, ಬಿಜೆಪಿ ಶಾಸಕ ಅಭಿಜೀತ್ ಸಿಂಗ್ ಸಂಗ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಕೂಡ ಇದೇ ಫೋಟೋ ಶೇರ್ ಮಾಡಿದ್ದರು. ಖೇಲ್ ರತ್ನ ಪದಕ ಎಂದು ಪರಮ್ ವೀರ್ ಚಕ್ರ ಪದಕವನ್ನು ಇಂಡಿಯಾ ಟಿವಿ ನ್ಯೂಸ್ ಮತ್ತು ದೈನಿಕ್ ಜಾಗರಣ್ ಕೂಡ ಶೇರ್ ಮಾಡಿದ್ದವು.

Photo: Thequint.com

ಚಿತ್ರದಲ್ಲಿ ತೋರಿಸಲಾಗಿದ್ದು ಪರಮ್ ವೀರ್ ಚಕ್ರ ಪದಕ ಎಂದು ಹಲವು ಟ್ವಿಟ್ಟರಿಗರು ಎತ್ತಿ ತೋರಿಸಿದ್ದಾರೆ. ಭಾರತೀಯ ವಾಯುಪಡೆಯ ವೆಬ್‍ಸೈಟ್‍ನಲ್ಲಿ ತೋರಿಸಲಾಗಿರುವ ಪರಮ್ ವೀರ್ ಚಕ್ರ ಪದಕದ ಚಿತ್ರ ಅದೇ ರೀತಿಯಿದ್ದು ಹಾಗೂ ರಕ್ಷಣಾ ಸಚಿವಾಲಯದ ವೆಬ್ ತಾಣದಲ್ಲೂ ಇದೇ ಪದಕ ತೋರಿಸಲಾಗಿತ್ತು.

ಈ ಪದಕಕ್ಕೂ ಖೇಲ್ ರತ್ನ ಪದಕಕ್ಕೂ ಯಾವುದೇ ಸಾಮ್ಯತೆಯಿಲ್ಲ. ಕುಸ್ತಿಪಟು ಯೋಗೇಶ್ವರ್ ದತ್ತ್ ಅವರು ತಮಗೆ ದೊರೆತ ಖೇಲ್ ರತ್ನ ಪ್ರಶಸ್ತಿ ಹಿಡಿದುಕೊಂಡ ಚಿತ್ರ ನೋಡಿದಾಗ ಇದು ತಿಳಿಯುತ್ತದೆ ಎಂದು thequint.com ವರದಿಯಲ್ಲಿ ತಿಳಿಸಿದೆ. ಈ ನಡುವೆ ಬಿಜೆಪಿ ನಾಯಕರು ಮತ್ತು ಸಚಿವರು ಶೇರ್‌ ಮಾಡಿರುವ ಚಿತ್ರದಲ್ಲಿ ಧ್ಯಾನ್‌ ಚಂದ್‌ ರಿಗಿಂತ ಪ್ರಧಾನಿ ಮೋದಿಯ ಫೋಟೊ ದೊಡ್ಡ ಗಾತ್ರದಲ್ಲಿರುವುದರ ಕುರಿತಾದಂತೆಯೂ ವ್ಯಾಪಕ ವ್ಯಂಗ್ಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News