ಒಲಿಂಪಿಕ್ಸ್ ಬಾನಂಗಳದಲ್ಲಿ ಮಿನುಗಿದ ಸಪ್ತ ತಾರೆಗಳು:ಭಾರತದ ಪದಕ ವಿಜೇತರತ್ತ ಒಂದು ಸಂಕ್ಷಿಪ್ತ ನೋಟ

Update: 2021-08-08 13:58 GMT

ಹೊಸದಿಲ್ಲಿ: ಪುರುಷರ ಜಾವೆಲಿನ್ ಥ್ರೋನಲ್ಲಿ ಶನಿವಾರ ಚಿನ್ನದ ಪದಕಕ್ಕೆ ಮುತ್ತಿಟ್ಟಿರುವ ನೀರಜ್ ಚೋಪ್ರಾ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳ  ಹೃದಯ ಗೆದ್ದಿದ್ದಾರೆ. ಟೋಕಿಯೊ ಕ್ರೀಡಾಕೂಟದ ಅಂತಿಮ ದಿನದಂದು ಚೋಪ್ರಾ ಅವರ ಅದ್ಭುತ ಪ್ರದರ್ಶನವು ಭಾರತವು 4 ವರ್ಷಕ್ಕೊಮ್ಮೆ ನಡೆಯುವ  ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಗೈಯ್ಯಲು ಸಹಾಯ ಮಾಡಿತು. ಭಾರತವು 1 ಚಿನ್ನ, ಎರಡು ಬೆಳ್ಳಿ ಹಾಗೂ  ನಾಲ್ಕು ಕಂಚಿನ ಪದಕಗಳನ್ನು ಒಳಗೊಂಡಂತೆ ಏಳು ಪದಕಗಳೊಂದಿಗೆ ತನ್ನ ಸ್ಮರಣೀಯ ಪ್ರಯಾಣವನ್ನು ಕೊನೆಗೊಳಿಸಿತು.

1. ಮೀರಾಬಾಯಿ ಚಾನು, ಬೆಳ್ಳಿ, 49 ಕೆಜಿ ವೇಟ್ ಲಿಫ್ಟಿಂಗ್ https://youtu.be/6jnLfRfojIo

ಮೀರಾಬಾಯಿ ಚಾನು ಅವರು ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 202 ಕೆಜಿ (87 ಕೆಜಿ+115 ಕೆಜಿ) ಭಾರ ಎತ್ತುವ ಮೂಲಕ  ಬೆಳ್ಳಿಯೊಂದಿಗೆ ಭಾರತದ ಪದಕದ ಖಾತೆ ತೆರೆದರು. ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ತಪ್ಪಲಿನಲ್ಲಿರುವ ನೊಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಿಂದ ಬಂದಿರುವ 26 ವರ್ಷದ ಚಾನು ಸ್ಪರ್ಧೆಯ ಮೊದಲ ದಿನವೇ ವೇಟ್ ಲಿಫ್ಟಿಂಗ್ ನಲ್ಲಿ ಪದಕಕ್ಕಾಗಿ ಭಾರತದ 21 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು.

2. ಪಿವಿ ಸಿಂಧು, ಕಂಚು, ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ https://youtu.be/xgNh_wjVGrk

ಪಿ.ವಿ. ಸಿಂಧು ಒಲಿಂಪಿಕ್ಸ್ ನಲ್ಲಿ ಎರಡು ವೈಯಕ್ತಿಕ ಪದಕವನ್ನು ಜಯಿಸಿರುವ ಮೊದಲ ಭಾರತೀಯ ಮಹಿಳೆ ಹಾಗೂ ಸುಶೀಲ್ ಕುಮಾರ್ ನಂತರ ಭಾರತದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾದರು. ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಹೈದರಾಬಾದ್ ಶಟ್ಲರ್ 21-13, 21-15 ಅಂತರದಲ್ಲಿ ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು ಸೋಲಿಸಿದರು.

3. ಲವ್ಲಿನಾ ಬೊರ್ಗೊಹೈನ್, ಕಂಚು, ಮಹಿಳಾ ವೆಲ್ಟರ್ ವೇಟ್ · ಬಾಕ್ಸಿಂಗ್ https://youtu.be/-seIxeUmTX8

ಲವ್ಲಿನಾ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ತೈಪೆಯ ನಿಯೆನ್-ಚಿನ್ ಚೆನ್ ಅವರನ್ನು ಸೋಲಿಸಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಜಯಿಸಿದ  ಮೂರನೇ ಭಾರತೀಯ ಬಾಕ್ಸರ್ ಎನಿಸಿಕೊಂಡರು. ವಿಜೇಂದರ್ ಸಿಂಗ್ (2008) ಹಾಗೂ  ಮೇರಿ ಕೋಮ್ (2012) ಈ ಸಾಧನೆ ಮಾಡಿದ್ದರು. ಸೆಮಿಫೈನಲ್‌ನಲ್ಲಿ, ಹಾಲಿ ವಿಶ್ವ ಚಾಂಪಿಯನ್ ಬುಸೆನಾಝ್  ಸುರ್ಮೆನೆಲಿ ವಿರುದ್ಧ 0-5 ಸೋಲು ಅನುಭವಿಸಿದ ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬರ್ಪಥರ್ ಹಳ್ಳಿಯ 23 ವರ್ಷದ ಲವ್ಲಿನಾ ಒಂಬತ್ತು ವರ್ಷಗಳಲ್ಲಿ ಭಾರತೀಯ ಬಾಕ್ಸಿಂಗ್‌ನಲ್ಲಿ ಮೊದಲ ಒಲಿಂಪಿಕ್ಸ್ ಪದಕವನ್ನು ಗೆದ್ದರು.

4. ರವಿ ಕುಮಾರ್ ದಹಿಯಾ, ಬೆಳ್ಳಿ, ಪುರುಷರ 57 ಕೆಜಿ ಫ್ರೀಸ್ಟೈಲ್, ಕುಸ್ತಿ https://youtu.be/hUVChKrj5kk

ರವಿಕುಮಾರ್ ದಹಿಯಾ ಟೋಕಿಯೊ 2020ರಲ್ಲಿ ಆಡಿದ ತನ್ನ ಮೊದಲ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎನಿಸಿಕೊಂಡರು. 23 ವರ್ಷದ ರವಿ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದ ಕುಸ್ತಿ ಯಲ್ಲಿಸ್ಪರ್ಧಿಸಿದ್ದರು. ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಏಳನೇ ಭಾರತೀಯ ಎನಿಸಿಕೊಂಡರು. ರಶ್ಯದ ಎರಡು ಬಾರಿ ವಿಶ್ವ ಚಾಂಪಿಯನ್ ಝಾವೂರ್ ಉಗುವ್  ವಿರುದ್ಧ 4-7  ರಿಂದ ಸೋತ ನಂತರ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

5. ಭಾರತೀಯ ಪುರುಷರ ಹಾಕಿ ತಂಡ, ಕಂಚು 

1980 ರ ಮಾಸ್ಕೋ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ನಂತರ ಒಲಿಂಪಿಕ್ಸ್ ಪದಕದ ಬರದಿಂದ ಬಳಲುತ್ತಿದ್ದ ಭಾರತದ ಪುರುಷರ ಹಾಕಿ ತಂಡವು ರೋಚಕ ಪಂದ್ಯದಲ್ಲಿ ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು. ಇದು ಟೋಕಿಯೊ 2020 ಕ್ರೀಡಾಕೂಟದಲ್ಲಿ ಭಾರತದ ಐದನೇ ಪದಕವಾಗಿದೆ.

6. ಬಜರಂಗ್ ಪುನಿಯಾ, ಕಂಚು, ಪುರುಷರ 65 ಕೆಜಿ ಫ್ರೀಸ್ಟೈಲ್, ಕುಸ್ತಿ 

ಕುಸ್ತಿಪಟು ಬಜರಂಗ್ ಪುನಿಯಾ, ಒಲಿಂಪಿಕ್ಸ್ ನಲ್ಲಿ ತನ್ನ  ಚೊಚ್ಚಲ ಪ್ರದರ್ಶನದಲ್ಲಿ, ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪ್ಲೇಆಫ್‌ನಲ್ಲಿ ಕಝಖ್ ಸ್ತಾನದ ದೌಲತ್ ನಿಯಾಝ್ ಕೋವ್ ಅವರನ್ನು 8-0 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆದ್ದರು. ಇದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಆರನೇ ಪದಕವಾಗಿತ್ತು.ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ತನ್ನ ಅತ್ಯುತ್ತಮ ಸಾಧನೆಯನ್ನು ಸರಿಗಟ್ಟಿತು.

7. ನೀರಜ್ ಚೋಪ್ರಾ, ಚಿನ್ನ, ಜಾವೆಲಿನ್ ಥ್ರೋ https://youtu.be/4XrpQax1ttQ

ಟೋಕಿಯೊ 2020 ರಲ್ಲಿ ಪುರುಷರ ಜಾವೆಲಿನ್ ಥ್ರೋ ಚಿನ್ನದೊಂದಿಗೆ ನೀರಜ್ ಚೋಪ್ರಾ ಭಾರತದ ಎರಡನೇ ವೈಯಕ್ತಿಕ ಒಲಿಂಪಿಕ್ಸ್ ಚಾಂಪಿಯನ್ ಆದರು. ಅವರ ಕಠಿಣ ಪರಿಶ್ರಮದಿಂದ ದೇಶವು 2012 ರ ಲಂಡನ್ ಗೇಮ್ಸ್‌ನಲ್ಲಿ ಆರು ಅತ್ಯುತ್ತಮ ಪದಕಗಳ ಸಾಧನೆಯನ್ನು (ಚಿನ್ನವಿಲ್ಲದೆ) ಹಿಂದಿಕ್ಕಿತು.

ಭಾರತವು ಮೊದಲ ಬಾರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಏಳು ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 18 ಕ್ರೀಡಾ ವಿಭಾಗಗಳಲ್ಲಿ 126 ಕ್ರೀಡಾಪಟುಗಳನ್ನು ಕಣಕ್ಕಿಳಿಸಿದ್ದ ಭಾರತ, ಟೋಕಿಯೊ ಒಲಿಂಪಿಕ್ಸ್‌ಗೆ ತನ್ನ ಅತಿದೊಡ್ಡ ತಂಡವನ್ನು ಕಳುಹಿಸಿಕೊಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News