ಆ.11 ಮತ್ತು 12ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

Update: 2021-08-08 17:38 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.8: ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ ವಿಸ್ತರಿಸಲಾದ ನೇರಳ ಬಣ್ಣದ ಮಾರ್ಗದ ಸುರಕ್ಷತಾ ತಪಾಸಣೆ ಕಾರಣದಿಂದ ಆ.11 ಮತ್ತು 12ರಂದು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಓಡಾಟ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‍ಸಿಎಲ್) ತಿಳಿಸಿದೆ. ಅತ್ತಿಗುಪ್ಪೆ, ದೀಪಾಂಜಲಿ ನಗರ ಮತ್ತು ಮೈಸೂರು ರಸ್ತೆ ನಿಲ್ದಾಣಗಳಿಗೆ ಈ ಎರಡೂ ದಿನ ಮೆಟ್ರೋ ಓಡಾಟ ಇರುವುದಿಲ್ಲ.

ಈ ಎರಡು ದಿನ ಬೆಳಗ್ಗೆ 7 ರಿಂದ 8ರವರೆಗೆ ಬೈಯಪ್ಪನಹಳ್ಳಿಯಿಂದ ವಿಜಯನಗರದವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರ ಇರಲಿದೆ. ಆ.13ರಿಂದ ಇಲ್ಲಿನ ಸಂಚಾರ ಎಂದಿನಂತೆ ಮತ್ತೆ ಆರಂಭವಾಗಲಿದೆ. ಹಸಿರು ಮಾರ್ಗದ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಅದು ಹೇಳಿದೆ.

ಮೆಟ್ರೋ ರೈಲು ಸುರಕ್ಷತಾ ಆಯುಕ್ತರು(ಸಿಎಂಆರ್‍ಎಸ್) ಆ.11 ಮತ್ತು 12ರಂದು ಮೈಸೂರು ರಸ್ತೆ ನಿಲ್ದಾಣ ಹಾಗೂ ಕೆಂಗೇರಿ ನಿಲ್ದಾಣಗಳ ನಡುವಿನ ರೀಚ್ 2ರ ವಿಸ್ತರಣೆಯ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.

ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆಗಸ್ಟ್ ಅಂತ್ಯದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಸುಮಾರು 7.53 ಕಿಮೀ ದೂರವನ್ನು ಈ ಮಾರ್ಗ ಒಳಗೊಂಡಿದ್ದು, ನೇರಳೆ ಬಣ್ಣ ರೈಲು ಸಂಚಾರ ಈವರೆಗೂ ಮೈಸೂರು ರಸ್ತೆಗೆ ಅಂತ್ಯಗೊಳ್ಳುತ್ತಿತ್ತು. ಈ ವಿಸ್ತೃತ ಮಾರ್ಗ ಸಂಚಾರಕ್ಕೆ ಮುಕ್ತಗೊಂಡ ಬಳಿಕ ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ನಿಲ್ದಾಣ ಹಾಗೂ ಕೆಂಗೇರಿ- ಒಟ್ಟು ಆರು ನಿಲ್ದಾಣಗಳಿಗೆ ಸಂಪರ್ಕ ಒದಗಿಸಲಿದೆ. ಇದು ಪ್ರತಿ ದಿನ ಸುಮಾರು 75,000 ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News