"ಮಹಿಳೆ ಒಬ್ಬಳನ್ನೇ ಕಳುಹಿಸಲಾಗುವುದಿಲ್ಲ" ಎಂದ ಅಧಿಕಾರಿಗಳು: ಪೋಲೆಂಡ್ ತೆರಳುವ ಅವಕಾಶ ವಂಚಿತರಾದ ಅಥ್ಲೀಟ್ ಸಮೀಹಾ

Update: 2021-08-09 09:19 GMT
Photo: Thenewsminute.com

ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕಡೈಯಾಲುಮೂಡು ಎಂಬ ಪುಟ್ಟ ಪಟ್ಟಣದ ನಿವಾಸಿಯಾಗಿರುವ ಹಾಗೂ ಪ್ರತಿಭಾನ್ವಿತ ಅಥ್ಲೀಟ್ ಆಗಿರುವ 18 ವರ್ಷದ ಸಮೀಹಾ ಬಾರ್ವಿನ್  ಅವರ ಹೆಸರನ್ನು ಆಗಸ್ಟ್ 23ರಿಂದ 28ರ ತನಕ ಪೋಲೆಂಡ್‍ನಲ್ಲಿ ನಡೆಯಲಿರುವ 4ನೇ ವಿಶ್ವ ಕಿವುಡರ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲಿರುವ ಭಾರತದ ತಂಡದಿಂದ ಕೈಬಿಡಲಾಗಿದೆ ಎಂದು thenewsminute.com ವರದಿ ಮಾಡಿದೆ.

ತಂಡದಲ್ಲಿನ ಐದು ಮಂದಿ ಪುರುಷ ಅಥ್ಲೀಟ್‍ಗಳ ಜತೆಗೆ ಏಕೈಕ ಮಹಿಳಾ ಅಥ್ಲೀಟ್ ಅನ್ನು ಕಳುಹಿಸಲು ಸಾಧ್ಯವಿಲ್ಲ ಎಂಬ ಕಾರಣವನ್ನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳು ನೀಡಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಡೆದ  ರಾಷ್ಟ್ರಮಟ್ಟದ ಅರ್ಹತಾ  ಪರೀಕ್ಷೆಯಲ್ಲಿ ಯಶಸ್ವಿಯಾದ ಏಕೈಕ ಮಹಿಳಾ ಕ್ರೀಡಾಳು ಆಗಿರುವ ಹೊರತಾಗಿಯೂ ಸಮೀಹಾ ಅವರಿಗೆ  ಭಾಗವಹಿಸುವ ಅವಕಾಶ ದೊರಕಿಲ್ಲ.

ಶೇ90ರಷ್ಟು ಶ್ರವಣ ದೋಷ ಹೊಂದಿರುವ ಸಮೀಹಾ ಅವರು ಲಾಂಗ್ ಜಂಪ್ ಮತ್ತು 100 ಮೀಟರ್ ಟ್ರ್ಯಾಕ್ ಅಥ್ಲೀಟ್ ಆಗಿದ್ದು ಆಕೆ ಜಾರ್ಖಂಡ್‍ನಲ್ಲಿ 2017ರಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್‍ಶಿಪ್, 2018 ರಲ್ಲಿ ಚೆನ್ನೈನಲ್ಲಿ ನಡೆದ ಸ್ಪರ್ಧೆ ಹಾಗೂ 2019ರಲ್ಲಿ ಕ್ಯಾಲಿಕಟ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದರು.

ಪೋಲೆಂಡ್‍ನಲ್ಲಿ ನಡೆಯುವ ಸ್ಪರ್ಧೆಗೆ ನಡೆದ ಅರ್ಹತಾ ಸುತ್ತಿನಲ್ಲಿ ಸಮೀಹಾ ಸಹಿತ ಇಬ್ಬರು ಅಥ್ಲೀಟುಗಳಿದ್ದರು, ಜುಲೈ 22ರಂದು ನಡೆದ ಟ್ರಯಲ್‍ನಲ್ಲಿ ಇನ್ನೊಬ್ಬಾಕೆ ಯಶಸ್ವಿಯಾಗಿರಲಿಲ್ಲ, ಆದರೆ ಯಶಸ್ವಿಯಾದ ಸಮೀಹಾಗೆ ಮಾತ್ರ ತಂಡದಲ್ಲಿ ಏಕೈಕ ಮಹಿಳೆಯಾಗುತ್ತಾರೆಂಬ ಕಾರಣಕ್ಕೆ ಪ್ರವೇಶ ದೊರಕಿಲ್ಲ ಎಂದು ವರದಿ ತಿಳಿಸಿದೆ.

ಆಕೆಯ ಜತೆಗೆ ಒಬ್ಬ ಸಹಾಯಕರನ್ನು ಕಳುಹಿಸಲು ಹಣದ ಕೊರತೆಯಿದೆ ಎಂದೂ ತಿಳಿಸಲಾಗಿದೆ ಎಂದು ಆಕೆಯ ಕುಟುಂಬ ಹೇಳಿದೆ.

ಆಕೆ ತಂಡದ ಭಾಗವಾಗುವಂತಾಗಲು ಆಕೆಯ ಕುಟುಂಬ ಬಹಳ ಪಾಡು ಪಟ್ಟಿದೆ. ಕನ್ಯಾಕುಮಾರಿ ಸಂಸದ ವಿ ವಿಜಯಕುಮಾರ್ ಅವರು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಜುಲೈ 26ರಂದು ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ ಒಂದು ಸಣ್ಣ ಕಾಫಿ ಶಾಪ್ ನಡೆಸುತ್ತಿರುವ ಸಮೀಹಾ ಕುಟುಂಬ ಈಗಾಗಲೇ ಆರ್ಥಿಕ ಸಮಸ್ಯೆಯಲ್ಲಿರುವ ಹೊರತಾಗಿಯೂ ಆಕೆಯ ಪ್ರವಾಸದ ಖರ್ಚನ್ನು ಕುಟುಂಬವೇ ಭರಿಸುತ್ತದೆ ಎಂದು ಹೇಳಿದರೂ ಪ್ರತಿಕ್ರಿಯೆ ದೊರಕಿಲ್ಲ.

ಭಾರತದ ತಂಡ ಪೋಲೆಂಡ್‍ಗೆ ಆಗಸ್ಟ್ 14ರಂದು ತೆರಳಲಿದೆ ಎಂಬ ಮಾಹಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News