ತಾಲಿಬಾನ್‌ನ ಮಾತುಗಳಿಗಿಂತ ಅದರ ಕೃತ್ಯ ಮುಖ್ಯ: ಬ್ರಿಟನ್ ಪ್ರಧಾನಿ

Update: 2021-08-18 18:09 GMT

ಲಂಡನ್, ಆ. 18: ಇತ್ತೀಚಿನ ದಿನಗಳಲ್ಲಿ 2,000ಕ್ಕೂ ಅಧಿಕ ಅಫ್ಘಾನಿಸ್ತಾನೀಯರು ಅವರ ದೇಶದಿಂದ ಪರಾರಿಯಾಗಲು ಬ್ರಿಟನ್ ನೆರವು ನೀಡಿದೆ ಎಂದು ಪ್ರಧಾನಿ ಬೊರಿಸ್ ಜಾನ್ಸನ್ ಬುಧವಾರ ಹೇಳಿದ್ದಾರೆ. ತಾಲಿಬಾನ್ ಏನು ಎನ್ನುವುದನ್ನು ಅದರ ಕೃತ್ಯಗಳಿಂದ ನಿರ್ಧರಿಸಬೇಕೇ ಹೊರತು ಅದರ ಮಾತುಗಳಿಂದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತಿನಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಜಾನ್ಸನ್, ಈ ಬಿಕ್ಕಟ್ಟನ್ನು ತನ್ನ ಸರಕಾರ ನಿಭಾಯಿಸಿದ ರೀತಿಯನ್ನೂ ಸಮರ್ಥಿಸಿಕೊಂಡರು. ಎಲ್ಲ ಪರಿಸ್ಥಿತಿಗಳಿಗೆ ಬ್ರಿಟನ್ ಸಿದ್ಧವಾಗಿತ್ತು ಎಂದು ಹೇಳಿದರು.

ತುರ್ತು ಅಧಿವೇಶನಕ್ಕಾಗಿ ರಜೆಯಲ್ಲಿದ್ದ ಸಂಸದರನ್ನು ಕ್ಷಿಪ್ರವಾಗಿ ಸಂಸತ್‌ಗೆ ಮರಳುವಂತೆ ಸೂಚಿಸಲಾಗಿತ್ತು.

ಬ್ರಿಟನ್ ತನ್ನ ಪುನರ್ವಸತಿ ಕಾರ್ಯಕ್ರಮದನ್ವಯ ಈವರೆಗೆ 306 ಬ್ರಿಟಿಶ್ ರಾಷ್ಟ್ರೀಯರು ಮತ್ತು 2,052 ಅಫ್ಘಾನ್ ರಾಷ್ಟ್ರೀಯರನ್ನು ಸುರಕ್ಷಿತವಾಗಿ ಅಫ್ಘಾನಿಸ್ತಾನದಿಂದ ಹೊರ ತಂದಿದೆ ಎಂದು ಅವರು ತಿಳೀಸಿದರು. ಇನ್ನೂ 2,000 ಅಫ್ಘಾನಿಸ್ತಾನಿ ಅರ್ಜಿಗಳ ಪರಿಶೀಲನೆಯನ್ನು ಪೂರ್ಣಗೊಳಿಸಲಾಗಿದೆ ಹಾಗೂ ಇನ್ನೂ ಅಧಿಕ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬ್ರಿಟನ್ ಪ್ರಧಾನಿ ನುಡಿದರು.

ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನವನ್ನು ತೊರೆದು ಬರುವವರಿಗಾಗಿ ಪುನರ್ವಸತಿ ಕಾರ್ಯಕ್ರಮವೊಂದನ್ನು ಬ್ರಿಟನ್ ಮಂಗಳವಾರ ರಾತ್ರಿ ಘೋಷಿಸಿದೆ. ಮೊದಲ ವರ್ಷದಲ್ಲಿ 5,000 ಮಂದಿಯನ್ನು ಸ್ವೀಕರಿಸಲಾಗುವುದು ಹಾಗೂ ದೀರ್ಘಾವಧಿಯಲ್ಲಿ ಅದನ್ನು 20,000ಕ್ಕೆ ಏರಿಸಲಾಗುವುದು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News