ನಟಿಯರಾದ ರಾಗಿಣಿ, ಸಂಜನಾ ಡ್ರಗ್ಸ್ ಸೇವಿಸಿದ್ದು ದೃಢ: ಎಫ್.ಎಸ್.ಎಲ್. ವರದಿ
Update: 2021-08-24 11:18 IST
ಬೆಂಗಳೂರು, ಆ.24: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಕಾಲ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡಿದ್ದ ಚಿತ್ರನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಡ್ರಗ್ಸ್ ಸೇವಿಸಿರುವುದು ತಲೆ ಕೂದಲಿನ ಎಫ್.ಎಸ್.ಎಲ್. ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ವೇಳೆ ನಟಿಯರಾದ ರಾಗಿಣಿ ದಿಗ್ವೇದಿ ಹಾಗೂ ಸಂಜನಾ ಗಲ್ರಾನಿ ಮತ್ತು ಇನ್ನೋರ್ವ ಆರೋಪಿ ವಿರೇನ್ ಖನ್ನಾ ಕೂದಲಿನ ಮಾದರಿಯನ್ನು 2020ರ ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯ (ಸಿ.ಎಫ್.ಎಸ್.ಎಲ್.)ಕ್ಕೆ ಕಳುಹಿಸಲಾಗಿತ್ತು. ಅದರ ವರದಿ 10 ತಿಂಗಳ ಬಳಿಕ ಇದೀಗ ಬಂದಿದ್ದು, ನಟಿಯರು ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ. ಇದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲವು ದಿನ ಜೈಲುವಾಸ ಅನುಭವಿಸಿದ್ದ ನಟಿಯರು ಹಾಗೂ ಇತರರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.