ಭಾರತವು ಕೋವಿಡ್ 'ಎಂಡೆಮಿಕ್' ಹಂತವನ್ನು ತಲುಪಿರಬಹುದು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್

Update: 2021-08-25 13:47 GMT

ಹೊಸದಿಲ್ಲಿ,ಆ.25: ಒಟ್ಟಾರೆ ಕೋವಿಡ್-19 ಸ್ಥಿತಿಯ ಕುರಿತು ಹೇಳುವುದಾದರೆ ಭಾರತವು ಒಂದು ರೀತಿಯಲ್ಲಿ ‘ಎಂಡೆಮಿಕ್(ಸ್ಥಳೀಯತೆ) ’ಹಂತವನ್ನು ತಲುಪಿರುವಂತೆ ಕಂಡು ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್ಒ)ಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಹೇಳಿದ್ದಾರೆ.

 
‘ಕೆಲವು ಸ್ಥಳೀಯ ಏರಿಳಿತಗಳೊಂದಿಗೆ ನಾವು ಹೀಗೆಯೇ ಮುಂದುವರಿಯುವ ಹೆಚ್ಚಿನ ಸಾಧ್ಯತೆಯಿದೆ,ಆದರೆ ಅವು ತೀವ್ರ ಸ್ವರೂಪದ್ದಾಗಿರುವ ಸಾಧ್ಯತೆ ಕಂಡು ಬರುತ್ತಿಲ್ಲ ಮತ್ತು ಖಂಡಿತವಾಗಿಯೂ ಎರಡನೇ ಅಲೆಯಷ್ಟು ವಿನಾಶಕಾರಿಯಾಗಿರುವುದಿಲ್ಲ ’ಎಂದು ಸುದ್ದಿ ಜಾಲತಾಣ The Wire ಗೆ ನೀಡಿದ ಸಂದರ್ಶನದಲ್ಲಿ ಸ್ವಾಮಿನಾಥನ್ ತಿಳಿಸಿದರು. ಜನರು ವೈರಸ್ನೊಂದಿಗೆ ಬದುಕುವುದನ್ನು ಕಲಿಯುವದನ್ನು ಎಂಡೆಮಿಕ್ ಹಂತವೆಂದು ಕರೆಯಲಾಗುತ್ತದೆ ಮತ್ತು ಇದು ಜನರನ್ನೇ ನಾಶ ಮಾಡುವ ಎಪಿಡೆಮಿಕ್ ಅಥವಾ ಸಾಂಕ್ರಾಮಿಕ ಹಂತಕ್ಕಿಂತ ತುಂಬ ಭಿನ್ನವಾಗಿರುತ್ತದೆ.

ಡಬ್ಲುಎಚ್ಒ ಸೆಪ್ಟೆಂಬರ್ ಮಧ್ಯದ ವೇಳೆಗೆ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆಯನ್ನು ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದ ಅವರು,ಭಾರತ ಬಯೊಟೆಕ್ ತನ್ನ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಲು ತುಂಬ ಸಮಯವನ್ನು ತೆಗೆದುಕೊಂಡಿದ್ದು ಡಬ್ಲುಎಚ್ಒ ನಿರ್ಧಾರವನ್ನು ಕೈಗೊಳ್ಳುವಲ್ಲಿ ವಿಳಂಬಕ್ಕೆ ಒಂದು ಕಾರಣವಾಗಿದೆ. ಅದು ಜುಲೈ ಮೂರನೇ ವಾರದಲ್ಲಷ್ಟೇ ತನ್ನ ದಾಖಲೆಗಳನ್ನು ಡಬ್ಲುಎಚ್ಒಗೆ ಸಲ್ಲಿಸಿದೆ ಎಂದರು.

ಕೋವಿಡ್ ಮೂರನೇ ಅಲೆ ಯಾವಾಗ,ಎಲ್ಲಿ ಅಪ್ಪಳಿಸಲಿದೆ ಮತ್ತು ಅದು ಎಷ್ಟು ತೀವ್ರವಾಗಿರಲಿದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ,ಕೇವಲ ತಿಳುವಳಿಕೆಯ ಊಹೆಯನ್ನು ಮಾಡಬಹುದು ಎಂದರು. ಮೂರನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೊಳಗಾಗುವ ಸಾಧ್ಯತೆಯಿದೆಯಾದರೂ ಅವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯಿಲ್ಲ. ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಸಿದ್ಧರಾಗಿರುವುದು ಒಳ್ಳೆಯದಾದರೂ ಆ ಬಗ್ಗೆ ಭೀತಿ ಪಡಬೇಕಿಲ್ಲ ಎಂದು ಸ್ವಾಮಿನಾಥನ್ ಹೇಳಿದರು.

ಕೇರಳದ ಕುರಿತು ಮಾತನಾಡಿದ ಅವರು,ಅಲ್ಲಿ ಖಂಡಿತವಾಗಿಯೂ ವೈರಸ್ ಪ್ರಸರಣವಿದೆ ಮತ್ತು ಅದು ಹೊಸ ಪ್ರಭೇದಗಳು ಹೊರಹೊಮ್ಮುವ ಭೀತಿಯನ್ನು ಹೆಚ್ಚಿಸಿದೆ,ಆದರೆ ಕೇರಳವು ಪ್ರಕರಣಗಳನ್ನು ಹೆಚ್ಚು ಉತ್ತಮವಾಗಿ ನಿರ್ವಹಿಸಿದೆ. ಅದು ತನ್ನ ಲಸಿಕೆ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಕೋವಿಡ್ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಮತ್ತು ಐವರ್ಮೆಕ್ಟಿನ್ ಔಷಧಿಗಳಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಡಬ್ಲುಎಚ್ಒ ನಿಲುವನ್ನು ಪುನರುಚ್ಚರಿಸಿದರು. ಆದರೆ ಮೂರನೇ ಅಲೆಯನ್ನು ಎದುರಿಸಲು ಈ ಔಷಧಿಗಳನ್ನು ದಾಸ್ತಾನಿರಿಸುವ ಭಾರತ ಸರಕಾರದ ಯೋಜನೆಗೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
 
ಬೂಸ್ಟರ್ ಡೋಸ್ ಗಳ ಕುರಿತಂತೆ ಸ್ವಾಮಿನಾಥನ್,ಈ ಡೋಸ್ ಗಳ ಅಗತ್ಯವನ್ನು ಸೂಚಿಸುವ ಯಾವುದೇ ದತ್ತಾಂಶಗಳು ಈವರೆಗೆ ನಮಗೆ ಸಿಕ್ಕಿಲ್ಲ ಎಂದು ಹೇಳಿದರು. ಕೋವಿಡ್ ಸದ್ಯದ ಎಪಿಡಮಿಕ್ ಹಂತದಿಂದ ಎಂಡೆಮಿಕ್ ಹಂತಕ್ಕೆ ತಿರುಗುವ ಎಲ್ಲ ಸಾಧ್ಯತೆಗಳೂ ಇವೆ ಮತ್ತು ಲಸಿಕೆಗಳು ಹಾಗೂ ಸೂಕ್ತ ಕೋವಿಡ್ ಶಿಷ್ಟಾಚಾರಗಳ ಪಾಲನೆಯೊಂದಿಗೆ ಒಂದೆರಡು ವರ್ಷದಲ್ಲಿ ಅದು ಇನ್ಫ್ಲುಯೆಂಝಾಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News