ವಲಸೆ ಕಾರ್ಮಿಕರ ಸಾವಿನ ಪ್ರಕರಣ: ಆ್ಯಮ್ನೆಸ್ಟಿ ವರದಿ ತಿರಸ್ಕರಿಸಿದ ಖತರ್

Update: 2021-08-26 15:35 GMT

ದೋಹಾ, ಆ.26: ಖತರ್ನಲ್ಲಿ ನಿಗೂಢವಾಗಿಯೇ ಉಳಿದಿರುವ ಕಾರ್ಮಿಕರ ಸಾವಿನ ಪ್ರಕರಣಗಳ ಬಗ್ಗೆ ಇನ್ನಷ್ಟು ವಿಸ್ತತ ತನಿಖೆಯ ಅಗತ್ಯವಿದೆ ಎಂಬ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ನ ವರದಿಯನ್ನು  ತಿರಸ್ಕರಿಸುವುದಾಗಿ ಖತರ್ ಹೇಳಿದೆ.

ಅಸುರಕ್ಷಿತ ಕೆಲಸದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾರ್ಮಿಕರ ಅಕಾಲಿಕ ಸಾವು ಸಂಭವಿಸಿರುವ ಬಗ್ಗೆ ಪುರಾವೆಗಳಿದ್ದರೂ ಹಲವಾರು ವಲಸೆ ಕಾರ್ಮಿಕರ ಸಾವಿನ ಬಗ್ಗೆ ಖತರ್ನ ಅಧಿಕಾರಿಗಳು ತನಿಖೆ ನಡೆಸುತ್ತಿಲ್ಲ ಎಂದು ಗುರುವಾರ ಪ್ರಕಟವಾದ ಆ್ಯಮ್ನೆಸ್ಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಖತರ್ನ ಹವಾಮಾನ ವೈಪರೀತ್ಯ ಹಾಗೂ ಕಠಿಣ ದುಡಿಮೆಯ ಕಾರಣದಿಂದ ಕಾರ್ಮಿಕರ ಜೀವಕ್ಕೆ ಅಪಾಯವಿರುತ್ತದೆ. ಆದರೆ ಸೂಕ್ತ ವಿಚಾರಣೆ, ತನಿಖೆ ನಡೆಸದೆ ಖತರ್ ನಿಯಮಿತವಾಗಿ ವಲಸೆ ಕಾರ್ಮಿಕರ ಮರಣ ಪ್ರಮಾಣ ಪತ್ರ ನೀಡುತ್ತಿದೆ ಮತ್ತು ಇಲ್ಲಿ ಸಾವಿನ ಕಾರಣವನ್ನು ಸ್ವಾಭಾವಿಕ ಮರಣ ಅಥವಾ ಹೃದಯಾಘಾತದಿಂದ ಸಾವು ಎಂದು ನಮೂದಿಸಲಾಗುತ್ತಿದೆ. ಈ ರೀತಿಯ ಪ್ರಮಾಣಪತ್ರ ನೀಡಿದರೆ ಆಗ ಸಂತ್ರಸ್ತ ಕಾರ್ಮಿಕರ ಕುಟುಂಬದವರು ಪರಿಹಾರ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ವರದಿ ಹೇಳಿದೆ. ‌

ಖತರ್ನಲ್ಲಿ 2017ರಿಂದ 2021ರ ಅವಧಿಯಲ್ಲಿ ನೀಡಲಾದ 18 ವಲಸೆ ಕಾರ್ಮಿಕರ ಮರಣ ಪ್ರಮಾಣ ಪತ್ರವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ 15 ಪ್ರಮಾಣಪತ್ರದಲ್ಲಿ ತೀವ್ರ ಹೃದಯಾಘಾತ, ಹೃದಯಾಘಾತ, ಸ್ವಾಭಾವಿಕ ಕಾರಣಗಳಿಂದ ಶ್ವಾಸಕೋಶದ ವೈಫಲ್ಯ’ ಇತ್ಯಾದಿ ಕಾರಣಗಳನ್ನು ಉಲ್ಲೇಖಿಸಿಸಲಾಗಿದೆ.

2010ರಿಂದ 2019ರ ಅವಧಿಯಲ್ಲಿ ಖತರ್ ಪ್ರಜೆಗಳಲ್ಲದ ಸುಮಾರು 15,021 ಮಂದಿ ಸಾವನ್ನಪ್ಪಿರುವುದಾಗಿ ಸರಕಾರದ ಅಂಕಿಅಂಶ ತಿಳಿಸಿದೆ. ಸಾವಿಗೆ ನೀಡಿರುವ ಕಾರಣ ವಿಶ್ವಾಸಾರ್ಹವಲ್ಲ ಮತ್ತು ಸೂಕ್ತ ತನಿಖೆ ನಡೆಸದೆ ಈ ದಾಖಲೆ ತಯಾರಿಸಲಾಗಿದೆ ಎಂದು ಆ್ಯಮ್ನೆಸ್ಟಿ ಹೇಳಿದೆ.

  ಈ ವರದಿಯನ್ನು ಖತರ್ನ ಮಾಹಿತಿ ಕಚೇರಿಯ ವಕ್ತಾರರು ತಳ್ಳಿಹಾಕಿದ್ದಾರೆ. ದೇಶದಲ್ಲಿರುವ ‘ಗಾಯಗೊಂಡವರ ಹಾಗೂ ಮರಣ ಹೊಂದಿದವರ ಅಂಕಿಅಂಶ ದಾಖಲೆ ’ ಅಣತರಾಷ್ಟ್ರೀಯ ನಿಯಮದ ಪ್ರಕಾರವೇ ಇದೆ ಮತ್ತು ಈ ವಲಯದಲ್ಲಿ ಹೊಸ ಮಾನದಂಡವಾಗಿದೆ. ಕಾರ್ಮಿಕರನ್ನು ಉಷ್ಣ ಗಾಳಿಯಿಂದ ರಕ್ಷಿಸುವ ನಿಟ್ಟಿನಲ್ಲಿ 2021ರ ಜೂನ್ನಲ್ಲಿ ಶಾಸನವನ್ನು ಜಾರಿಗೊಳಿಸಲಾಗಿದೆ. ಪ್ರತೀ ವರ್ಷ ಕಾರ್ಮಿಕರ ಆರೋಗ್ಯ ತಪಾಸಣೆ, ತಾಪಮಾನ ಏರಿಕೆಯಾದಾಗ ತಕ್ಷಣ ಕೆಲಸ ಸ್ಥಗಿತಗೊಳಿಸುವ ಆಯ್ಕೆಯನ್ನು ಒದಗಿಸಲಾಗಿದೆ ಎಂದವರು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News