ಶಾಪಿಂಗ್ ವೆಬ್ ಸೈಟ್ ನಲ್ಲಿ ಬಹುಮಾನ ಬಂದಿದೆಯೆಂದು ಮಹಿಳೆಗೆ 3 ಲಕ್ಷ ರೂ. ವಂಚಿಸಿದ ಸೈಬರ್ ವಂಚಕರು!

Update: 2021-08-28 07:05 GMT

ಮುಂಬೈ: ಪ್ರಸಿದ್ಧ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಬಹುಮಾನದ ಭರವಸೆ ನೀಡಿದ ಸೈಬರ್ ವಂಚಕರು  27ರ ವಯಸ್ಸಿನ ಮಹಿಳೆಯೊಬ್ಬರಿಗೆ 3 ಲಕ್ಷ ರೂ. ವಂಚಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮುಂಬೈ ಉಪನಗರ ಕಾಂದಿವಲಿಯಲ್ಲಿ ವಾಸವಾಗಿರುವ ಇಂಟೀರಿಯರ್ ಡಿಸೈನರ್ ಆಗಿರುವ ಮಹಿಳೆ ತನಗೆ ವಂಚನೆ ಆಗಿದೆ ಎಂದು ಚಾರ್ಕೋಪ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಕಳೆದ ವಾರ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾನು ವಾಟ್ಸ್ ಆ್ಯಪ್ ನಲ್ಲಿ ಲಿಂಕ್ ವೊಂದನ್ನು ಸ್ವೀಕರಿಸಿದ್ದು, ಅದರಲ್ಲಿ ನಿರ್ದಿಷ್ಟ ಟಾಸ್ಕ್ ಗಳನ್ನು  ಪೂರೈಸಿದ ಬಳಿಕ ಪ್ರಸಿದ್ಧ ಆನ್ ಲೈನ್ ಶಾಪಿಂಗ್ ಪೋರ್ಟಲ್ ಹೆಸರಿನಲ್ಲಿ ಬಹುಮಾನಗಳ ಭರವಸೆ ನೀಡಲಾಗಿತ್ತು ಎಂದು ದೂರುದಾರ ಮಹಿಳೆ ಹೇಳಿದ್ದಾರೆ.

ಲಿಂಕ್ ನ್ನು ಕ್ಲಿಕ್ ಮಾಡಿದ ನಂತರ ಮಹಿಳೆಯ ಬಳಿ ಬಳಕೆದಾರರ ಐಡಿ  ಹಾಗೂ ಪಾಸ್ ವರ್ಡ್ ಸೃಷ್ಟಿಸಲು ತಿಳಿಸಲಾಯಿತು. ಆ ನಂತರ ಮಹಿಳೆ 64 ರೂ. ಸ್ವೀಕರಿಸಿದ್ದರು. ರಿಚಾರ್ಜಿಂಗ್ ಟಾಸ್ಕ್ ಅನ್ನು ನೀಡಲಾಗಿತ್ತು. ಅದರಲ್ಲೂ ಮಹಿಳೆ ಬಹುಮಾನ ಪಡೆದಿದ್ದರು ಎಂದು ಅಧಿಕಾರಿ ತಿಳಿಸಿದರು.

ಹೆಚ್ಚು ಬಹುಮಾನವನ್ನು ಪಡೆಯಲು ಹೆಚ್ಚು ಹಣವನ್ನು ಠೇವಣಿ ಮಾಡಬೇಕೆಂದು ಮಹಿಳೆಗೆ ತಿಳಿಸಲಾಯಿತು.  ಆ ಪ್ರಕಾರ ಮಹಿಳೆಯು ಉಳಿದ ಟಾಸ್ಕ್ ಗಳಲ್ಲಿ 3.11 ಲಕ್ಷ ರೂ. ಹಣ ಠೇವಣಿ ಇಟ್ಟಿದ್ದರು ಆದರೆ, ಅದಕ್ಕೆ ಪ್ರತಿಯಾಗಿ ಏನನ್ನೂ ಸ್ವೀಕರಿಸಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರು ಐಪಿಸಿ ಸೆಕ್ಷನ್ 420(ವಂಚನೆ),ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ  ಎಫ್ ಐಆರ್ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News