ಸೆಪ್ಟಂಬರ್‌ 5 ʼಗೌರಿ ಲಂಕೇಶ್‌ ದಿನʼ ಎಂದು ಆಚರಣೆ: ಕೆನಡಾದ ಬಾನಬಿ ಸಿಟಿ ಘೋಷಣೆ

Update: 2021-08-28 08:28 GMT

ಬೆಂಗಳೂರು: ದುಷ್ಕರ್ಮಿಗಳಿಂದ ಗುಂಡಿನ ದಾಳಿಗೊಳಗಾಗಿ ಕೊಲೆಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ರಿಗೆ ಗೌರವ ಸಲ್ಲಿಸುವ ಸಲುವಾಗಿ ಕೆನಡಾದ ʼಸಿಟಿ ಆಫ್‌ ಬಾನಬಿʼ ಸೆಪ್ಟೆಂಬರ್‌ 5ನ್ನು ʼಗೌರಿ ಲಂಕೇಶ್‌ ದಿನʼ ಎಂದು ಆಚರಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಗೌರಿ ಲಂಕೇಶ್‌ ಸಹೋದರಿ ಕವಿತಾ ಲಂಕೇಶ್‌ ಫೇಸ್‌ ಬುಕ್‌ ನಲ್ಲಿ ಪೋಸ್ಟ್‌  ಮೂಲಕ ಮಾಹಿತಿ ನೀಡಿದ್ದಾರೆ.

"ಹೊಸದಿಲ್ಲಿಯಲ್ಲಿ ಈಗಿರುವ ಹಿಂದುತ್ವವಾದಿ ಬಿಜೆಪಿ ಸರಕಾರದ ವಿರುದ್ಧ ಬರೆಯುತ್ತಿದ್ದ   ಅವರನ್ನು 2017ರ ಸೆಪ್ಟೆಂಬರ್‌ 5ರಂದು ಕೊಲೆಗೈಯಲಾಯಿತು. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಂದಿನಿಂದ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಏರಿಕೆಯಾಗಿದ್ದು, ಇದರ ವಿರುದ್ಧ ಗೌರಿ ಲಂಕೇಶ್‌ ಹೋರಾಟ ಮಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಕೆಲ ಬೆಂಬಲಿಗರು ಅವರ ಸಾವಿಗೆ ಸಂತೋಷ ವ್ಯಕ್ತಪಡಿಸಿದ್ದರು ಎಂದೂ ಕವಿತಾ ಲಂಕೇಶ್‌ ತಮ್ಮ ಪೋಸ್ಟ್‌ ನಲ್ಲಿ ಉಲ್ಲೇಖಿಸಿದ್ದಾರೆ.

ಆಗಸ್ಟ್‌ 27 ಶುಕ್ರವಾರದಂದು ಬಾನಬಿ ಸಿಟಿಯು ಸೆಪ್ಟೆಂಬರ್‌ 5ನ್ನು ಗೌರಿ ಲಂಕೇಶ್‌ ದಿನವಾಗಿ ಆಚರಿಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಮೇಯರ್‌ ಮೈಕ್‌ ಹರ್ಲಿ, "ನ್ಯಾಯ ಮತ್ತು ಸತ್ಯಕ್ಕಾಗಿ ಎದ್ದು ನಿಂತ ದಿಟ್ಟ ಭಾರತೀಯ ಪತ್ರಕರ್ತೆ ಗೌರಿ ಲಂಕೇಶ್"‌ ಎಂದು ಪ್ರಶಂಸಿಸಿದ್ದಲ್ಲದೇ, ಮಾನವ ಹಕ್ಕುಗಳಿಗಾಗಿ ಮತ್ತು ದುರಾಡಳಿತದ ವಿರುದ್ಧ ನಿಂತು ಅವರು ತಮ್ಮ ಜೀವವನ್ನು ಸಮರ್ಪಿಸಿದರು" ಎಂದು ಮೇಯರ್‌ ತಿಳಿಸಿದ್ದಾಗಿ ಪೋಸ್ಟ್‌ ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಈ ಸಂಬಂಧ ಘೋಷಣಾಪತ್ರವನ್ನೂ ತಮ್ಮ ಪೋಸ್ಟ್‌ ನಲ್ಲಿ ಪ್ರಕಟಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News