ಗರ್ಭಿಣಿ ಬೆಕ್ಕನ್ನು ರಕ್ಷಿಸಿದ ನಾಲ್ಕು ಮಂದಿಗೆ ದುಬೈ ದೊರೆಯಿಂದ ತಲಾ 50,000 ದಿರ್ಹಂ ಉಡುಗೊರೆ

Update: 2021-08-28 12:21 GMT
Image Credit: Twitter/@HHShkMohd

ದುಬೈ: ದುಬೈಯ ದೇರಾ ಎಂಬಲ್ಲಿ ಕಟ್ಟಡವೊಂದರ ಎರಡನೇ ಅಂತಸ್ತಿನ ಬಾಲ್ಕನಿಯಲ್ಲಿ ಅಪಾಯಕಾರಿಯಾಗಿ ನೇತಾಡುತ್ತಿದ್ದ ಗರ್ಭಿಣಿ ಬೆಕ್ಕೊಂದನ್ನು ರಕ್ಷಿಸಿ ಅದರ ಪ್ರಾಣ ಉಳಿಸಿ ಪ್ರಾಣಿ ಪ್ರೇಮವನ್ನು ಮೆರೆದ ನಾಲ್ಕು ಮಂದಿ ದುಬೈ ನಿವಾಸಿಗಳ ಮಾನವೀಯ ಕಾರ್ಯವನ್ನು ಶ್ಲಾಘಿಸಿರುವ ದುಬೈ  ದೊರೆ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಈ ನಾಲ್ಕು ಮಂದಿಗೂ ತಲಾ 50,000 ದಿರ್ಹಂ ನಗದು ಬಹುಮಾನವನ್ನು ನೀಡಿದ್ದಾರೆ.

ಈ ನಾಲ್ಕು ಮಂದಿಯಲ್ಲಿ ನಾಸಿರ್ ಮುಹಮ್ಮದ್ ಅವರು ಭಾರತೀಯ ವಲಸಿಗರಾಗಿದ್ದು ರಸ್ತೆ ಮತ್ತು ಸಾರಿಗೆ ಪ್ರಾಧಿಕಾರದಲ್ಲಿ ಚಾಲಕ ವೃತ್ತಿಯಲ್ಲಿದ್ದಾರೆ. ಪಾಕಿಸ್ತಾನೀಯರಾಗಿರುವ ಆತಿಫ್ ಮೆಹಮೂದ್ ಸೇಲ್ಸ್ ಮ್ಯಾನ್ ಆಗಿದ್ದರೆ, ಮೂರನೆಯವರಾದ ಕೇರಳದ ರಶೀದ್ ಮುಹಮ್ಮದ್ ಅಲ್ಲಿನ ಭಾರತೀಯ ದಿನಸಿ ಸ್ಟೋರ್ ಒಂದರ ಮಾಲೀಕರಾಗಿದ್ದಾರೆ. ನಾಲ್ಕನೆಯವರಾದ ಅಶ್ರಫ್ ಬ್ಲೇನ್ಝಾ ಎಂಬವರು ಮೊರೊಕ್ಕೋ ಮೂಲದವರಾಗಿದ್ದು ದುಬೈಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.

ಈ ನಾಲ್ಕು ಮಂದಿಯ ಶ್ಲಾಘನೀಯ ಕಾರ್ಯದ ಕುರಿತು ದುಬೈ ದೊರೆ ಟ್ವೀಟ್ ಮಾಡಿದ್ದಾರೆ. "ನಮ್ಮ ಸುಂದರ ನಗರದಲ್ಲಿ ಇಂತಹ ಮಾನವೀಯ ಕಾರ್ಯಗಳನ್ನು ನೋಡಿ ಹೆಮ್ಮೆ ಮತ್ತು ಖುಷಿಯಾಗುತ್ತಿದೆ. ಈ ಅನ್‍ಸಂಗ್ ಹೀರೋಗಳನ್ನು ಯಾರಾದರೂ ಗುರುತಿಸಿದ್ದರೆ,  ಅವರಿಗೆ ಧನ್ಯವಾದ ಹೇಳಲು ನಮಗೆ ಸಹಾಯ ಮಾಡಿ" ಎಂದು ಬರೆದು ಅವರು ವೀಡಿಯೋ ಶೇರ್ ಮಾಡಿದ್ದರು.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನಾಲ್ಕು ಮಂದಿಯೂ ಯಾರೆಂದು ತಿಳಿದು ಬಂದಿತ್ತು. ಅಷ್ಟಕ್ಕೂ ಈ ನಾಲ್ಕು ಮಂದಿಯೂ ಈ ಘಟನೆಗಿಂತ ಮುಂಚೆ ಪರಿಚಿತರಾಗಿರಲಿಲ್ಲ. ಆದರೆ ಬೆಕ್ಕನ್ನು ರಕ್ಷಿಸಲು ನಾಲ್ವರೂ ಒಗ್ಗೂಡಿದ್ದರು. ಬೆಕ್ಕು ಬಾಲ್ಕನಿಯಲ್ಲಿ ನೇತಾಡುತ್ತಿರುವುದನ್ನು ನೋಡಿದ ನಾಲ್ಕು ಮಂದಿ ತಡ ಮಾಡದೆ ಕೆಳಗೆ ಬೆಡ್ ಶೀಟ್ ಒಂದನ್ನು ಹರಡಿ ಅದಕ್ಕೆ ಗಾಯವಾಗದಂತೆ ನೋಡಿಕೊಂಡಿದ್ದರು.

ದುಬೈ ನಾಗರಿಕರು ಹಾಗೂ ಸಾಮಾಜಿಕ ಜಾಲತಾಣಿಗರೂ ಈ ನಾಲ್ಕು ಮಂದಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News