ಕೌಟುಂಬಿಕ ಹಿಂಸೆ ಪ್ರಕರಣ: ನ್ಯಾಯಾಲಯದಲ್ಲಿ ಹಾಜರಾಗಲು ಗಾಯಕ ಹನಿ ಸಿಂಗ್‌ಗೆ ನಿರ್ದೇಶ

Update: 2021-08-28 17:12 GMT

ಹೊಸದಿಲ್ಲಿ,ಆ.28:ಕೌಟುಂಬಿಕ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.3ರಂದು ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಗಾಯಕ ಯೋ ಯೋ ಹನಿಸಿಂಗ್ ಅಲಿಯಾಸ್ ಹಿರ್ದೇಶ ಸಿಂಗ್ ಅವರಿಗೆ ಇಲ್ಲಿಯ ಮಹಾನಗರ ನ್ಯಾಯಾಲಯವು ಶನಿವಾರ ನಿರ್ದೇಶವನ್ನು ನೀಡಿದೆ. ಸಿಂಗ್ ಅವರ ಪತ್ನಿ ಶಾಲಿನಿ ತಲ್ವಾರ್ ಈ ಪ್ರಕರಣವನ್ನು ದಾಖಲಿಸಿದ್ದಾರೆ.

ಅನಾರೋಗ್ಯದ ಕಾರಣವನ್ನು ನೀಡಿ ಸಿಂಗ್ ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಸಿಂಗ್ ಗೈರುಹಾಜರಿಯನ್ನು ಟೀಕಿಸಿದ ನ್ಯಾ.ತಾನಿಯಾ ಸಿಂಗ್ ಅವರು,ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿರುವುದು ತನಗೆ ಅಚ್ಚರಿಯನ್ನುಂಟು ಮಾಡಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು.

ನೀವು ಈವರೆಗೂ ನಿಮ್ಮ ಕಕ್ಷಿದಾರನ ಆದಾಯ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಮತ್ತು ವಾದಕ್ಕೆ ಸಿದ್ಧತೆಗಳನ್ನೂ ಮಾಡಿಕೊಂಡಿಲ್ಲ ಎಂದು ಸಿಂಗ್ ಪರ ವಕೀಲರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ನ್ಯಾ.ತಾನಿಯಾ ಸಿಂಗ್,ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಿಂಗ್‌ಗೆ ಎಚ್ಚರಿಕೆ ನೀಡಿದರಲ್ಲದೆ,ಇಂತಹ ವರ್ತನೆಯನ್ನು ಪುನರಾವರ್ತಿಸದಂತೆ ಸೂಚಿಸಿದರು.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿರುವ ತಲ್ವಾರ್,ಸಿಂಗ್ ಮತ್ತು ಅವರ ಕುಟುಂಬದಿಂದ 10 ಕೋ.ರೂ.ಗಳ ಮಧ್ಯಂತರ ಪರಿಹಾರವನ್ನು ಕೋರಿದ್ದಾರೆ. ತನ್ನ ಐದು ಲಕ್ಷ ರೂ.ಗಳ ಮಾಸಿಕ ಮನೆಬಾಡಿಗೆಯನ್ನು ಸಿಂಗ್ ಪಾವತಿಸಬೇಕು ಎಂಬ ಬೇಡಿಕೆಯನ್ನೂ ಅವರು ಮಂಡಿಸಿದ್ದಾರೆ. ತನ್ನ ವೈವಾಹಿಕ ಮನೆ ಮತ್ತು ಸ್ತ್ರೀಧನವನ್ನು ಸಿಂಗ್ ಮತ್ತು ಅವರ ಕುಟುಂಬವು ಮಾರಾಟ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ಹಿಂದು ವೈಯಕ್ತಿಕ ಕಾನೂನಿನಂತೆ ಸ್ತ್ರೀಧನವು ಮಹಿಳೆಯು ತನ್ನ ವಿವಾಹಕ್ಕೆ ಮೊದಲು,ವಿವಾಹದ ಬಳಿಕ,ಮಗು ಜನನವಾದಾಗ ಮತ್ತು ವಿಧವೆಯಾದಾಗ ಸ್ವೀಕರಿಸಿದ ಚರ ಮತ್ತು ಸ್ಥಿರಾಸ್ತಿಗಳನ್ನು ಒಳಗೊಂಡಿರುತ್ತದೆ. ತನ್ನ ಸ್ತ್ರೀಧನದ ಮೇಲೆ ಮಹಿಳೆ ಸಂಪೂರ್ಣ ಹಕ್ಕು ಹೊಂದಿದ್ದಾಳೆ.

ಸಿಂಗ್ ಮತ್ತು ಅವರ ಕುಟುಂಬವು ತನಗೆ ದೈಹಿಕ ಅಪಾಯದ ಬೆದರಿಕೆಯನ್ನೊಡ್ಡಿರುವುದರಿಂದ ತಾನು ನಿರಂತರವಾಗಿ ಭಯದಲ್ಲಿ ಬದುಕುತ್ತಿದ್ದೇನೆ ಎಂದು ಆರೋಪಿಸಿರುವ ತಲ್ವಾರ್,ಸಿಂಗ್ ತನ್ನ ಬೇಡಿಕೆಗಳನ್ನು ಒಪ್ಪದವರ ವಿರುದ್ಧ ಬೆದರಿಕೆ ಮತ್ತು ಹಿಂಸೆಯ ಇತಿಹಾಸವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News