ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ರೈತರ ಕ್ಷಮೆ ಕೇಳಿ: ಕೇಂದ್ರಕ್ಕೆ ಅಶೋಕ್ ಗೆಹ್ಲೋಟ್ ಆಗ್ರಹ‌

Update: 2021-08-31 15:23 GMT

 ಹೊಸದಿಲ್ಲಿ,ಆ.31: ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಮತ್ತು ಹರ್ಯಾಣದ ಕರ್ನಾಲ್ನಲ್ಲಿ ರೈತರ ವಿರುದ್ಧ ಹಿಂಸಾಚಾರಕ್ಕಾಗಿ ಅವರ ಕ್ಷಮೆ ಕೋರುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಮಂಗಳವಾರ ಕೇಂದ್ರವನ್ನು ಆಗ್ರಹಿಸಿದ್ದಾರೆ.

 ‌
ಕರ್ನಾಲ್ ನಲ್ಲಿ ರೈತರ ಮೇಲೆ ದಾಳಿ ನಡೆಸಿದ ರೀತಿಯು ಖಂಡನೀಯವಾಗಿದೆ. ಇಂತಹ ಕ್ರೂರ ಕ್ರಮಗಳ ಮೂಲಕ ದೇಶಾದ್ಯಂತ ರೈತರನ್ನು ಪ್ರಚೋದಿಸುವ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಟ್ವೀಟಿಸಿರುವ ಅವರು,ಹರ್ಯಾಣ ಮುಖ್ಯಮಂತ್ರಿ ಎಂ.ಕೆ.ಖಟ್ಟರ್ ಮತ್ತು ಉಪ ಮುಖ್ಯಮಂತ್ರಿ ದುಷ್ಯಂತ ಚೌತಾಲಾ ಅವರು ಅರ್ಥಹೀನ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಹರ್ಯಾಣ ಸರಕಾರದ ಅಧಿಕಾರಿಗಳು ರೈತರ ವಿರುದ್ಧ ಹಿಂಸಾತ್ಮಕ ಕ್ರಮಗಳಿಗೆ ನಿರ್ದೇಶಗಳನ್ನು ನೀಡುತ್ತಿದ್ದಾರೆ ಮತ್ತು ಇಡೀ ದೇಶವು  ರೈತರ ಮೇಲೆ ಪೊಲೀಸರ ಲಾಠಿ ಪ್ರಹಾರವನ್ನು ಖಂಡಿಸುತ್ತಿದೆ. ಆದರೆ ರಾಜ್ಯ ಸರಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿರುವ ಗೆಹ್ಲೋಟ್,ಮೋದಿ ಸರಕಾರವು ರೈತರ ಸಹನೆಯನ್ನು ಪರೀಕ್ಷಿಸಬಾರದು. ಅದು ತಕ್ಷಣವೇ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಮತ್ತು ರೈತರ ಕ್ಷಮೆಯನ್ನು ಕೋರಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News