"ದೇಶಕ್ಕೆ ಕೆಟ್ಟ ಹೆಸರು": ಸುಳ್ಳು, ಕೋಮುವಾದಿ ಸುದ್ದಿಗಳ ಕುರಿತು ಸುಪ್ರೀಂ ಕೋರ್ಟ್‌ ಹೇಳಿಕೆ

Update: 2021-09-02 07:24 GMT

ಹೊಸದಿಲ್ಲಿ: ಸಾಮಾಜಿಕ ತಾಣಗಳಲ್ಲಿ ಹಾಗೂ ವೆಬ್‌ ಪೋರ್ಟಲ್‌ ಗಳಲ್ಲಿ ನಕಲಿ ಹಾಗೂ ಕೋಮುವಾದಿ ಸುದ್ದಿಗಳನ್ನು ಪ್ರಕಟಿಸುತ್ತಿರುವ ಕುರಿತು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ನ್ಯೂಸ್‌ ಚಾನೆಲ್‌ ಗಳಲ್ಲಿ ಕೋಮುವಾದದ ಅಂಶಗಳಿರುವ ಸುದ್ದಿಗಳನ್ನು ತೋರಿಸುತ್ತಿರುವುದು ದೇಶಕ್ಕೆ ಕೆಟ್ಟ ಹೆಸರು ತರಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮರ್ಕಝ್‌ ನಿಝಾಮುದ್ದೀನ್‌ ನಲ್ಲಿ ನಡೆದಿದ್ದ ಧಾರ್ಮಿಕ ಸಭೆಗೆ ಸಂಬಂಧಿಸಿದಂತೆ ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಲು ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ಜಮೀಯತ್‌ ಉಲಮಾ ಇ ಹಿಂದ್‌ ಸಲ್ಲಿಸಿರುವ ಅರ್ಜಿಯನ್ನು ಆಲಿಸುತ್ತಿರುವ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠವು ಈ ಹೇಳಿಕೆ ನೀಡಿದೆ.

"ಖಾಸಗಿ ಟಿವಿ ಚಾನೆಲ್‌ ಗಳಲ್ಲಿ ತೋರಿಸಲಾದ ಎಲ್ಲ ಸುದ್ದಿಗಳೂ ಕೋಮುವಾದದಿಂದ ಕೂಡಿವೆ. ಇದೆಲ್ಲದರ ಪರಿಣಾಮವಾಗಿ ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ. ನೀವು ಯಾವತ್ತಾದರೂ ಇಂತಹಾ ಖಾಸಗಿ ಚಾನೆಗಳನ್ನು ತಡೆಯಲು ಪ್ರಯತ್ನಿಸಿದ್ದೀರಾ? ಎಂದು ಕೋರ್ಟ್‌ ಕೇಳಿತು.

ಸಾಮಾಜಿಕ ಮಾಧ್ಯಮವು "ಪ್ರಬಲ ಧ್ವನಿಗಳನ್ನು" ಮಾತ್ರ ಕೇಳುತ್ತದೆ ಮತ್ತು ನ್ಯಾಯಾಧೀಶರು, ಸಂಸ್ಥೆಗಳ ವಿರುದ್ಧ ಯಾವುದೇ ಜವಾಬ್ದಾರಿಯಿಲ್ಲದೆ ಹಲವಾರು ವಿಷಯಗಳನ್ನು ಬರೆಯಲಾಗಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎ ಎಸ್ ಬೋಪಣ್ಣ ಅವರನ್ನು ಒಳಗೊಂಡ ಪೀಠ ಹೇಳಿದೆ.

"ವೆಬ್ ಪೋರ್ಟಲ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ನಕಲಿ ಸುದ್ದಿ ಮತ್ತು ಅಪಪ್ರಚಾರದ ಮೇಲೆ ಯಾವುದೇ ನಿಯಂತ್ರಣವಿಲ್ಲ. ನೀವು ಯೂಟ್ಯೂಬ್‌ಗೆ ಹೋದರೆ, ನಕಲಿ ಸುದ್ದಿಗಳು ಹೇಗೆ ಮುಕ್ತವಾಗಿ ಪ್ರಸಾರವಾಗುತ್ತವೆ ಎಂಬುದನ್ನು ಕಂಡುಕೊಳ್ಳಬಹುದು ಮತ್ತು ಯಾರು ಬೇಕಾದರೂ ಯೂಟ್ಯೂಬ್‌ನಲ್ಲಿ ಚಾನೆಲ್ ಆರಂಭಿಸಬಹುದು" ಎಂದು ಅದು ಹೇಳಿದೆ.

ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಪೋರ್ಟಲ್‌ಗಳನ್ನು ಒಳಗೊಂಡಂತೆ ಆನ್‌ಲೈನ್ ವಿಷಯವನ್ನು ನಿಯಂತ್ರಿಸುವ ಉದ್ದೇಶದಿಂದ ಹೊಸದಾಗಿ ಜಾರಿಗೆ ತಂದಿರುವ ಐಟಿ ನಿಯಮಗಳ ಕುರಿತು ವಿವಿಧ ಹೈಕೋರ್ಟ್‌ಗಳಿಂದ ಅರ್ಜಿಗಳನ್ನು ತನಗೆ ವರ್ಗಾಯಿಸಬೇಕೆಂಬ ಕೇಂದ್ರದ ಮನವಿಯನ್ನು ಆರು ವಾರಗಳ ನಂತರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News