ಪತ್ರಿಕಾ ಮಂಡಳಿ ರಚನೆ ಕುರಿತು ಮದ್ರಾಸ್ ಹೈಕೋರ್ಟ್ ಆದೇಶವು ಅನುದ್ದೇಶಿತ ಪರಿಣಾಮಗಳನ್ನು ಬೀರಬಹುದು: ಮಾಧ್ಯಮ ಸಂಸ್ಥೆಗಳು

Update: 2021-09-02 12:44 GMT

ಹೊಸದಿಲ್ಲಿ,ಸೆ.2: ಬ್ಲಾಕ್ಮೇಲ್ ನಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವ ನಕಲಿ ಪತ್ರಕರ್ತರನ್ನು ಹತ್ತಿಕ್ಕಲು ಮದ್ರಾಸ್ ಉಚ್ಚ ನ್ಯಾಯಾಲಯವು ಹೊರಡಿಸಿರುವ ಮಹತ್ವದ ಆದೇಶವು ಅನುದ್ದೇಶಿತ ಪರಿಣಾಮಗಳನ್ನು ಬೀರಬಹುದು,ಪತ್ರಿಕಾ ಸ್ವಾತಂತ್ರಕ್ಕೆ ಅಡ್ಡಿಯನ್ನು ಮತ್ತು ಪ್ರಾಮಾಣಿಕ ಪತ್ರಕರ್ತರ ಹಕ್ಕುಗಳಿಗೆ ಹಾನಿಯನ್ನುಂಟು ಮಾಡಬಹುದು ಎಂದು ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳಲ್ಲಿ ತಮಿಳುನಾಡು ಪತ್ರಿಕಾ ಮಂಡಳಿಯನ್ನು ರಚಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ತನ್ನ ಆ.19ರ ಆದೇಶದಲ್ಲಿ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಸರ್ವೋಚ್ಚ ಅಥವಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಮಂಡಳಿಯು ಅನುಭವಿ ಹಾಲಿ ಮತ್ತು ನಿವೃತ್ತ ಪತ್ರಕರ್ತರು,ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಸದಸ್ಯರನ್ನಾಗಿ ಹೊಂದಿರಲಿದೆ.

ರಾಜ್ಯದಲ್ಲಿಯ ಪ್ರೆಸ್ ಕ್ಲಬ್ ಗಳು ಮತ್ತು ಪತ್ರಕರ್ತರ ಸಂಘಗಳು ಅಥವಾ ಒಕ್ಕೂಟಗಳನ್ನು ಗುರುತಿಸುವ ಸಂಪೂರ್ಣ ಅಧಿಕಾರ ಸೇರಿದಂತೆ ವ್ಯಾಪಕ ಅಧಿಕಾರಗಳನ್ನು ಉಚ್ಚ ನ್ಯಾಯಾಲಯವು ಈ ಮಂಡಳಿಗೆ ನೀಡಿದೆ. ಈ ಕ್ಲಬ್ ಗಳು, ಸಂಘಗಳು ಅಥವಾ ಒಕ್ಕೂಟಗಳಿಗೆ ಚುನಾವಣೆಗಳನ್ನು ಮಂಡಳಿಯೇ ನಡೆಸಲಿದೆ ಎಂದು ಅದು ತನ್ನ ಆದೇಶದಲ್ಲಿ ಹೇಳಿದೆ.

ಪತ್ರಿಕಾ ಮಂಡಳಿಯು ನಿಗದಿಗೊಳಿಸಿರುವ ಅವಧಿಯಲ್ಲಿ ಪ್ರತಿ ಸಂಘದ ಚುನಾವಣೆಯನ್ನು ನಡೆಸಬೇಕು,ವಿಫಲಗೊಂಡರೆ ಅಂತಹ ಸಂಘದ ಆಡಳಿತವನ್ನು ಮಂಡಳಿಯು ವಹಿಸಿಕೊಳ್ಳುತ್ತದೆ. ಇನ್ನು ಮುಂದೆ ಸರಕಾರವು ನೇರವಾಗಿ ಪತ್ರಕರ್ತರಿಗೆ ಮನೆಗಳನ್ನು ಹಂಚಿಕೆ ಮಾಡುವಂತಿಲ್ಲ ಅಥವಾ ಬಸ್ ಪಾಸ್ ಗಳನ್ನು ನೀಡುವಂತಿಲ್ಲ. ಈ ಅರ್ಜಿಗಳು ಮಂಡಳಿಯ ಮೂಲಕವೇ ಸಲ್ಲಿಕೆಯಾಗಬೇಕು ಮತ್ತು ಸೂಕ್ತ ಪರಿಶೀಲನೆಯ ಬಳಿಕ ಮಂಡಳಿಯು ಇಂತಹ ಸೌಲಭ್ಯಗಳನ್ನು ಮಂಜೂರಿ ಮಾಡುತ್ತದೆ.

ಅಲ್ಲದೆ ಮಾಧ್ಯಮ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಸಂಖ್ಯೆ,ಅವರಿಗೆ ನೀಡಲಾಗುತ್ತಿರುವ ವೇತನಗಳು,ಮೂಲದಲ್ಲಿ ತೆರಿಗೆ ಕಡಿತದ ವಿವರಗಳು ಮತ್ತು ಸರಕಾರಕ್ಕೆ ಪಾವತಿಸಿದ ತೆರಿಗೆಗಳ ವಿವರಗಳನ್ನು ಬಹಿರಂಗಗೊಳಿಸುವವರೆಗೆ ರಾಜ್ಯ ಸರಕಾರವು ಅವುಗಳಿಗೆ ಪ್ರೆಸ್ ಸ್ಟಿಕರ್ ಗಳು, ಗುರುತು ಚೀಟಿಗಳು ಮತ್ತು ಇತರ ಸೌಲಭ್ಯಗಳನ್ನು ನೀಡುವುದನ್ನು ನಿರ್ಬಂಧಿಸಲಾಗಿದೆ.

ತನ್ನ ನಿರ್ದೇಶಗಳನ್ನು ಪಾಲಿಸುವಂತೆ ಮತ್ತು ನಾಲ್ಕು ವಾರಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿದೆ.
    
ಕಾನೂನುಬಾಹಿರ ಮತ್ತು ನೀತಿಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪತ್ರಕರ್ತರ ಸಮಸ್ಯೆ ನಿಜವಾದುದು ಎಂದು ಒಪ್ಪಿಕೊಂಡಿರುವ ʼದಿ ಹಿಂದುʼ ದೈನಿಕವು, ನ್ಯಾಯಾಲಯವು ಮಂಡಳಿಯನ್ನು ರಚಿಸಿ ಅದಕ್ಕೆ ವ್ಯಾಪಕ ಅಧಿಕಾರವನ್ನು ನೀಡಿದೆ, ಸಾಮಾನ್ಯವಾಗಿ ಇಂತಹ ಕ್ರಮವನ್ನು ಕಾನೂನಿನ ಮೂಲಕ ಮತ್ತು ವ್ಯಾಪಕ ಸಮಾಲೋಚನೆಗಳ ಬಳಿಕವೇ ಕೈಗೊಳ್ಳಲಾಗುತ್ತದೆ.

ನ್ಯಾಯಾಲಯದ ಆದೇಶವು ಒಳ್ಳೆಯ ಉದ್ದೇಶವನ್ನು ಹೊಂದಿದೆಯಾದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಲೇವಾರಿ ಮಾಡುವಾಗ ನ್ಯಾಯಾಂಗದ ನಿರ್ದೇಶದ ಮೇರೆಗೆ ಕೈಗೊಳ್ಳಬೇಕಾದ ಕ್ರಮವನ್ನು ಸಂಬಂಧವೇ ಇಲ್ಲದ ಪ್ರಕರಣದಲ್ಲಿ ತೆಗೆದುಕೊಂಡಿರುವುದು ಅಚ್ಚರಿಯನ್ನುಂಟು ಮಾಡಿದೆ ಎಂದು ತನ್ನ ಸಂಪಾದಕೀಯ ಲೇಖನದಲ್ಲಿ ಹೇಳಿದೆ.

ಉದ್ದೇಶಿತ ಪತ್ರಿಕಾ ಮಂಡಳಿಯು ಅತಿ ಉತ್ಸಾಹದಿಂದ ಕಾರ್ಯ ನಿರ್ವಹಿಸುವ ಭರದಲ್ಲಿ ಪ್ರಾಮಾಣಿಕ ಪತ್ರಕರ್ತರಿಗೆ ತೊಂದರೆಯನ್ನುಂಟು ಮಾಡಬಹುದು. ರಾಜ್ಯ ಸರಕಾರವು ಮೇಲ್ಮನವಿ ಸೇರಿದಂತೆ ತನಗಿರುವ ಆಯ್ಕೆಗಳನ್ನು ತೂಗಿನೋಡುವುದು ಅಗತ್ಯವಾಗಿದೆ ಎಂದೂ ಅದು ಹೇಳಿದೆ.

ನಕಲಿ ಪತ್ರಕರ್ತರು,ಅಜೆಂಡಾ ಆಧಾರಿತ ಸುದ್ದಿ ಇತ್ಯಾದಿಗಳನ್ನು ನ್ಯಾಯಾಲಯದ ಆದೇಶವು ಸ್ಪಷ್ಟವಾಗಿ ವ್ಯಾಖ್ಯಾನಿಸದಿರುವುದು ಕಳವಳವನ್ನುಂಟು ಮಾಡಿದೆ ಮತ್ತು ಇದು ನಕಲಿ ಪತ್ರಕರ್ತರನ್ನು ಗುರುತಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ ಎಂದು ಹಿರಿಯ ಪತ್ರಕರ್ತ ಎ.ಎಸ್.ಪನ್ನೀರಸೆಲ್ವಂ ಹೇಳಿದ್ದಾರೆ.

ನಕಲಿ ಸುದ್ದಿಗಳು ಮತ್ತು ನಕಲಿ ಪತ್ರಕರ್ತರ ಪಿಡುಗನ್ನು ಹತ್ತಿಕ್ಕಲು ನ್ಯಾಯಾಧೀಶರ ಆತಂಕವು ಅರ್ಥವಾಗುತ್ತದೆ,ಆದರೆ ವೈದ್ಯರು ಸೂಚಿಸುವ ಔಷಧಿಯು ರೋಗಿಯನ್ನೇ ಕೊಲ್ಲಬಾರದು ಎಂದು ಭಾರತೀಯ ಪತ್ರಕರ್ತರ ಸಂಘವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News