4 ನೇ ಟೆಸ್ಟ್‌ ಗೆ ಅಶ್ವಿನ್ ಅವರನ್ನು ಸೇರಿಸಿಕೊಳ್ಳದಿರುವುದು 'ಹುಚ್ಚುತನ':ಮಾಜಿ ಕ್ರಿಕೆಟಿಗ ಮೈಕಲ್ ವಾನ್

Update: 2021-09-02 13:33 GMT
photo: instagram.com/rashwin99

ಲಂಡನ್: ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭವಾಗಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ಎರಡು ಬದಲಾವಣೆಗಳನ್ನು ಮಾಡಿದೆ.  ಆದರೆ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಆಡುವ 11ರ ಬಳಗದಿಂದ ಹೊರಗುಳಿದಿದ್ದಾರೆ. ಓವಲ್‌ನಲ್ಲಿ ಮುಹಮ್ಮದ್ ಶಮಿ ಹಾಗೂ  ಇಶಾಂತ್ ಶರ್ಮಾ ಬದಲಿಗೆ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಸೇರಿಸಿದ್ದರಿಂದ ವಿರಾಟ್ ಕೊಹ್ಲಿ ತನ್ನ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಸಂಯೋಜನೆಗೆ ಅಂಟಿಕೊಳ್ಳಲು ನಿರ್ಧರಿಸಿದರು.

ಹೆಡ್ಡಿಂಗ್ಲೆಯಲ್ಲಿ ಭಾರತವು ಮೂರನೇ ಟೆಸ್ಟ್ ಅನ್ನು ಇನ್ನಿಂಗ್ಸ್ ಹಾಗೂ 76 ರನ್ ಗಳಿಂದ ಸೋತ ನಂತರ ಅಶ್ವಿನ್ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಬೇಕೆಂದು ಕ್ರಿಕೆಟ್ ತಜ್ಞರು ಹಾಗೂ  ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಆದರೆ ಈಗ ನಡೆಯುತ್ತಿರುವ ಪ್ರವಾಸದಲ್ಲಿ ಅಶ್ವಿನ್  ಅವರನ್ನು 4ನೇ ಬಾರಿಗೆ ಕಡೆಗಣಿಸಲಾಗಿದೆ. ಈ ಕುರಿತಾಗಿ ಟ್ವೀಟಿಸಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ '413 ವಿಕೆಟ್ ಹಾಗೂ  ಐದು ಟೆಸ್ಟ್ ಶತಕಗಳನ್ನು ಗಳಿಸಿರುವ ಆಟಗಾರನನ್ನು ಹೊರಗಿಡುವುದು 'ಹುಚ್ಚುತನ' ಎಂದು ಕರೆದಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಲಿಸಾ ಸ್ಥಲೇಕರ್ ಹಾಗೂ ಟಾಮ್ ಮೂಡಿ ಕೂಡ ಈ ನಿರ್ಧಾರದಿಂದ ಆಶ್ಚರ್ಯಚಕಿತರಾದರು.

ಅಶ್ವಿನ್ ಪ್ರಸಕ್ತ ಸರಣಿಯಲ್ಲಿ ನಾಲ್ಕನೇ ಬಾರಿಗೆ ಪ್ಲೇಯಿಂಗ್ ಇಲೆವೆನ್ ನಿಂದ ಹೊರಗುಳಿದಿದ್ದರಿಂದ ಪ್ರಖ್ಯಾತ ವೀಕ್ಷಕವಿವರಣೆಗಾರರಾದ ಅಲನ್ ವಿಲ್ಕಿನ್ಸ್ ಹಾಗೂ  ಹರ್ಷ ಭೋಗ್ಲೆ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಶ್ವಿನ್ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮುಂಚಿತವಾಗಿ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಮೊದಲ ಮೂರು ಟೆಸ್ಟ್‌ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡದೆ ಕಡೆಗಣಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News