ಸಚಿನ್+ರಾಹುಲ್ ದ್ರಾವಿಡ್ ರ ಮಿಶ್ರ ಹೆಸರಿನಿಂದ ಗಮನ ಸೆಳೆಯುತ್ತಿರುವ ನ್ಯೂಝಿಲ್ಯಾಂಡ್ ಯುವ ಕ್ರಿಕೆಟಿಗ

Update: 2021-09-02 14:29 GMT
photo: twitter

 ಹೊಸದಿಲ್ಲಿ, ಸೆ. 2: ಢಾಕಾದಲ್ಲಿ ಬುಧವಾರ ನಡೆದ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯವೊಂದರಲ್ಲಿ ಆತಿಥೇಯ ಬಾಂಗ್ಲಾದೇಶವು ಪ್ರವಾಸಿ ನ್ಯೂಝಿಲ್ಯಾಂಡ್ ತಂಡವನ್ನು ಬೃಹತ್ ಅಂತರದಿಂದ ಸೋಲಿಸಿತು. ಆದರೆ ಈ ಪಂದ್ಯದೊಂದಿಗೆ ನ್ಯೂಝಿಲ್ಯಾಂಡ್ ತಂಡದ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 21 ವರ್ಷದ ರಚಿನ್ ರವೀಂದ್ರ ತಮ್ಮ ಹೆಸರಿನ ಮೂಲಕವೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾಗೂ  ಕ್ರೀಡಾ ಬರಹಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ರವೀಂದ್ರ ನ್ಯೂಝಿಲ್ಯಾಂಡ್ ಇನಿಂಗ್ಸನ್ನು ಆರಂಭಿಸಿದರು. ಆದರೆ ಮೊದಲ ಓವರ್‌ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಬೌಲರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಅವರ ತಂಡವು 60 ರನ್‌ಗೆ ಆಲೌಟಾಯಿತು. ಬಾಂಗ್ಲಾದೇಶವು 15 ಓವರ್‌ಗಳಲ್ಲಿ ಗುರಿಯನ್ನು ಬೆಂಬತ್ತಿತ್ತು.

ಆದರೆ ಬ್ಯಾಟಿಂಗ್ ಆಲ್‌ರೌಂಡ್ ಎಂಬುದಾಗಿ ಪರಿಗಣಿಸಲ್ಪಟ್ಟಿರುವ ರಚಿನ್ ರವೀಂದ್ರ ಶಾಕಿಬ್‌ ಅಲ್ ಹಸನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ನ್ಯೂಝಿಲ್ಯಾಂಡ್ ರಾಜಧಾನಿ ವೆಲಿಂಗ್ಟನ್ ನಿವಾಸಿಯಾಗಿರುವ ರಚಿನ್ ರವೀಂದ್ರ ಭಾರತೀಯ ದಂಪತಿಯ ಪುತ್ರ. ಭಾರತೀಯ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್‌ ತೆಂಡುಲ್ಕರ್ ಅವರ ಹೆಸರುಗಳನ್ನು ಒಟ್ಟು ಸೇರಿಸಿ ಅವರಿಗೆ ರಚಿನ್ ಎಂಬ ಹೆಸರನ್ನು ಇಡಲಾಗಿದೆ ಎನ್ನಲಾಗಿದೆ.

  ಅವರು ವೆಲಿಂಗ್ಟನ್‌ನಲ್ಲಿ ಖಂಡಾಲ ಎಂಬ ಉಪನಗರದಲ್ಲಿ ವಾಸಿಸುತ್ತಿದ್ದಾರೆ. ಖಂಡಾಲ ಉಪ ನಗರದಲ್ಲಿ ಗವಾಸ್ಕರ್ ಪ್ಲೇಸ್‌ ಹಾಗೂ  ಕಪಿಲ್ ಗ್ರೂವ್‌ ಎಂಬ ಸ್ಥಳಗಳೂ ಇವೆ ಎಂಬುದಾಗಿ ಇಎಸ್‌ಪಿಎನ್‌ ಕ್ರಿಕ್‌ ಇನ್ಫೊ 2009ರಲ್ಲಿ ವರದಿ ಮಾಡಿತ್ತು.

 ಖಂಡಾಲದಲ್ಲಿರುವ ಎಲ್ಲ ಹೆಸರುಗಳು ಭಾರತದಿಂದ ಪಡೆದುಕೊಳ್ಳಲಾಗಿದೆ. ಅವುಗಳೆಂದರೆ: ಅಂಡಮಾನ್, ಸಿಮ್ಲಾ ಕ್ರೆಸೆಂಟ್, ಸತಾರ, ರಾಮ್‌ ಫಲ್, ಡೆಲ್ಲಿ, ಮದ್ರಾಸ್, ಪೂನ, ಅಮೃತಸರ, ಬನಾರಸ್, ಗಯ, ವಸಂತ, ಅಮಾಪುರ್, ಬರೋಡ, ಆಗ್ರಾ, ಲಕ್ನೋ ಟೆರೇಸ್, ಮೈಸೂರು, ಬಾಂಬೆ. ಈ ಎಲ್ಲ ಸ್ಥಳಗಳು ಒತ್ತೊತ್ತಾಗಿ ಇವೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News