ಪರಿಸರ ರಕ್ಷಿಸುವ ರಣಹದ್ದುಗಳು

Update: 2021-09-03 19:30 GMT

ರಾಮಾಯಣದಲ್ಲಿ ರಾವಣನನ್ನು ಎದುರಿಸಿದ ಜಟಾಯುವಿನ ಪರಾಕ್ರಮದ ಕಥೆ ಎಲ್ಲರಿಗೂ ಗೊತ್ತಿದೆ. ಹಾಗೆಯೇ ಶ್ರೀರಾಮನಿಗೆ ಲಂಕೆಯ ಹಾದಿ ತೋರಿಸಿದ ಜಟಾಯುವಿನ ಸಹೋದರ ಸಂಪಾತಿಯ ಕಥೆಯನ್ನು ನಾವು ಕೇಳಿದ್ದೇವೆ. ನಮ್ಮ ಮಹಾಕಾವ್ಯಗಳಲ್ಲಿ ಬರುವ ಈ ಪರೋಪಕಾರಿ ಪಕ್ಷಿಗಳ ಬಗ್ಗೆ ಓದಿ ಆಶ್ಚರ್ಯ ಪಡುವ ನಾವು ವಾಸ್ತವದಲ್ಲಿ ಅವುಗಳಿಗೆ ಅದೇ ಮಟ್ಟದ ಮಹತ್ವವನ್ನು ನೀಡಿಲ್ಲ. ನಮ್ಮ ಪರಿಸರ ವ್ಯವಸ್ಥೆಯಲ್ಲಿ ರಣಹದ್ದುಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಆದರೂ 1990ರ ದಶಕದಿಂದ 2005ರ ನಡುವಿನ ಅವಧಿಯಲ್ಲಿ ಭಾರತ ತನ್ನ ರಣಹದ್ದುಗಳ ಒಟ್ಟು ಸಂಖ್ಯೆಯಲ್ಲಿ ಶೇ. 95ರಷ್ಟು ರಣಹದ್ದುಗಳನ್ನು ಕಳೆದುಕೊಂಡಿದೆ. ವಿನಾಶದ ಅಂಚಿನಲ್ಲಿರುವ ಅವುಗಳು ಸಂಪೂರ್ಣ ನಾಶವಾಗಿ ಹೋಗದಂತೆ ನಮ್ಮ ದೇಶ ತುರ್ತಾಗಿ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ರಣಹದ್ದುಗಳು ಕಾಯಿಲೆಗಳ ಒಂದು ಮೂಲ ಎಂದು ತಪ್ಪಾಗಿ ತಿಳಿಯಲಾಗಿದೆ. ಅವುಗಳು ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುತ್ತವೆ. ಆದರೆ ಒಮ್ಮಾಮ್ಮೆ ಅವುಗಳು ತೀರಾ ರೋಗಗ್ರಸ್ತವಾದ, ಗಾಯ ಹೊಂದಿದ ಅಥವಾ ದುರ್ಬಲವಾದ ಅಂದರೆ ಸದ್ಯದಲ್ಲೇ ಸಾಯಲಿರುವ ಪ್ರಾಣಿಗಳನ್ನು ಕಂಡು ಹಿಡಿದು ತಿನ್ನುವ ಸಾಮರ್ಥ್ಯ ಹೊಂದಿವೆ. ಕೆಲವರು ರಣಹದ್ದುಗಳನ್ನು ಕುರೂಪಿ, ಕೊಳಕು ಹಕ್ಕಿಗಳೆಂದು ಪರಿಗಣಿಸುತ್ತಾರೆ. ಕೆಲವರು ಅವುಗಳು ಅಪಶಕುನ ಎಂದು ಭಾವಿಸುತ್ತಾರೆ. ಆದರೆ ನಿಜವಾಗಿ ಅವುಗಳು ಏನು ಮಾಡುತ್ತವೆ ಮತ್ತು ಯಾಕಾಗಿ ಅವುಗಳು ಪರಿಸರ ರಕ್ಷಣೆಗೆ ಮುಖ್ಯ ಎಂದು ನಾವು ಮೊದಲು ತಿಳಿದುಕೊಳ್ಳಬೇಕು.

ರಣಹದ್ದುಗಳು ಸುಮಾರು 10ರಿಂದ 30ವರ್ಷಗಳ ಆಯುಷ್ಯ ಹೊಂದಿರುವ ಹಕ್ಕಿಗಳು. ಅವುಗಳು ನಿಧಾನವಾಗಿ ಸಂತೋನೋತ್ಪತ್ತಿ ಮಾಡುವವುಗಳಾದ್ದರಿಂದ ಪ್ರತಿಯೊಂದು ಹಕ್ಕಿ ಆದಷ್ಟು ದೀರ್ಘ ಕಾಲ ಬದುಕಿ ಉಳಿಯುವುದು ಬಹಳ ಮುಖ್ಯ. ಅವುಗಳ ಅದ್ಭುತವಾದ ದೃಷ್ಟಿ ಹಾಗೂ ಪ್ರಬಲವಾದ ವಾಸನಾ ಶಕ್ತಿಯಿಂದಾಗಿ ಅವುಗಳು ಸತ್ತ ಪ್ರಾಣಿಗಳ ಇರವನ್ನು ಬಹಳ ದೂರದಿಂದಲೇ ಪತ್ತೆಹಚ್ಚಬಲ್ಲವು. ಸಾಮಾನ್ಯವಾಗಿ ಇತರ ಮಾಂಸಾಹಾರಿ ಪ್ರಾಣಿಗಳು ಸತ್ತ ಪ್ರಾಣಿಯ ಕಳೇಬರವನ್ನು ಬಗೆದು ತೆರೆಯುವವರೆಗೆ ಅವು ದೂರದಿಂದಲೇ ಕಾಯುತ್ತವೆ. ಬಳಿಕ ತಮ್ಮ ಶಕ್ತಿಯುತವಾದ ಕೊಕ್ಕು ಹಾಗೂ ಉದ್ದನೆಯ ಕುತ್ತಿಗೆಯ ಸಹಾಯದಿಂದ ಕಳೇಬರದ ಒಳಭಾಗವನ್ನು ಕುಕ್ಕಿ ಹೊರಗೆಳೆದು ತಿನ್ನುತ್ತವೆ. ಭಾರತದಲ್ಲಿ 9 ಜಾತಿಯ ತಳಿಗಳ ರಣಹದ್ದುಗಳಿವೆ ಇವುಗಳಲ್ಲಿ ಹಲವು ವಿನಾಶದ ಅಂಚು ತಲುಪಿವೆ. ರಣಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯಕಾರಣ ಡಿಕ್ಲೊಫೆನಕ್ ಎಂಬ ಔಷಧಿಯ ಬಳಕೆ. ಜಾನುವಾರುಗಳಿಗೆ ನೋವು ನಿವಾರಕಗಳಾಗಿ ಕೊಡುವ ಈ ಔಷಧಿ ರಣಹದ್ದುಗಳಿಗೆ ಅಲ್ಪಪ್ರಮಾಣದಲ್ಲಿ ಕೂಡ ವಿಷಕಾರಕ. ಸತ್ತ ಜಾನುವಾರುಗಳ ಮಾಂಸ ತಿನ್ನುವಾಗ ಈ ವಿಷ ಅವುಗಳ ದೇಹದಲ್ಲಿ ಸೇರಿದಾಗ ಕಿಡ್ನಿ ವೈಫಲ್ಯ ಉಂಟಾಗಿ ಅವುಗಳು ಸಾಯುತ್ತವೆ. ಅಲ್ಲದೆ ಹದ್ದುಗಳ ದೇಹದ ಕೆಲವು ಭಾಗಗಳಿಗೆ ರೋಗ ನಿವಾರಕ ಗುಣಗಳಿವೆ ಎಂಬ ನಂಬಿಕೆಯಿಂದಾಗಿ ಜನರು ಇವುಗಳನ್ನು ಬೇಟೆಯಾಡಿ ಕೊಲ್ಲುವುದು ಕೂಡ ಇವುಗಳ ಸಂತತಿ ಅಳಿವಿನ ಅಂಚಿಗೆ ಬರಲು ಇನ್ನೊಂದು ಕಾರಣ. ಹಾಗೆಯೇ ಹದ್ದುಗಳು ವಾಸಿಸುವ ಸ್ಥಳಗಳ ಸಮೀಪ ಗಣಿಗಾರಿಕೆ, ಕಲ್ಲು ಕಡಿಯುವಿಕೆಗಾಗಿ ಡೈನಮೈಟ್ ಸ್ಫೋಟದ ಪರಿಣಾಮವಾಗಿಯೂ ಇವುಗಳು ನಾಶವಾಗುತ್ತಿವೆ. ರಣಹದ್ದುಗಳ ಸಂಖ್ಯೆ ಕ್ಷೀಣಿಸುತ್ತಿರುವಾಗ ಕಾಡುನಾಯಿಗಳ ಸಂಖ್ಯೆ ಏರುತ್ತಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿರುವ ಕುತೂಹಲಕಾರಿ ಅಂಶ. ಕಾಡುನಾಯಿಗಳು ತರುವ ಆರೋಗ್ಯಸಂಬಂಧಿ ಗಂಡಾಂತರಗಳೇನೆಂಬುದು ತಿಳಿದೇ ಇದೆ.

ಪರಿಸರ ವ್ಯವಸ್ಥೆಯಿಂದ ರಣಹದ್ದುಗಳು ಅದೃಶ್ಯವಾದಲ್ಲಿ ಸತ್ತು ಬೀಳುವ ಪ್ರಾಣಿಗಳ ಶವಗಳನ್ನು ವಿಲೇವಾರಿ ಮಾಡುವ ಸಮಸ್ಯೆ ತಲೆದೋರುತ್ತದೆ. ಇದರಿಂದಾಗಿ ನೀರಿನ ವ್ಯವಸ್ಥೆ ಮಲಿನವಾಗಿ ಕಾಡುಪ್ರಾಣಿಗಳಿಗೆ ಶುದ್ಧ ನೀರು ದೊರಕದಂತಾಗುತ್ತದೆ. ದೀರ್ಘ ಅವಧಿಯವರೆಗೆ ವಿಲೇವಾರಿಯಾಗದೆ ಸತ್ತ ಪ್ರಾಣಿಗಳ ಕಳೇಬರಗಳು ಹಾಗೆಯೇ ಉಳಿದಲ್ಲಿ ಅವುಗಳು ಕೊಳೆತು ನಾನಾ ರೀತಿಯ ರೋಗಗಳನ್ನು ಉಂಟುಮಾಡುವ ವೈರಸ್‌ಗಳು ಹುಟ್ಟಿಕೊಳ್ಳಲು ಕಾರಣವಾಗುತ್ತವೆ. ಇಂತಹ ಮಾಂಸವನ್ನು ತಿಂದ ಪ್ರಾಣಿಗಳು ಈ ವೈರಸ್ ಗಳನ್ನು ಹರಡುವ ವಾಹಕಗಳಾಗುತ್ತವೆ.

ಕೊಳೆತ ಮಾಂಸವನ್ನು ತಿಂದು ಬಹಳಷ್ಟು ಪ್ರಾಣಿಗಳು, ಹಕ್ಕಿಗಳು ಅದನ್ನು ಜೀರ್ಣಿಸಿಕೊಳ್ಳಲಾರವು ಆದರೆ ತಮ್ಮ ಆಮ್ಲೀಯ (ಅಸಿಡಿಕ್) ಹೊಟ್ಟೆಯಿಂದಾಗಿ ರಣಹದ್ದುಗಳು ಇಂತಹ ಮಾಂಸವನ್ನು ತಿಂದು ಜೀರ್ಣಿಸಿಕೊಳ್ಳಬಲ್ಲವು. ಹೀಗೆ ಇವುಗಳು ಪರಿಸರ ವ್ಯವಸ್ಥೆಯ ಆರೋಗ್ಯ ಕಾಪಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ರಣಹದ್ದುಗಳು ಡಿಕ್ಲೊಫೆನಕ್ ಔಷಧಿ ಇರುವ ಸತ್ತ ಜಾನುವಾರುಗಳ ಮಾಂಸ ತಿಂದು ಸಾಯುವ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಭಾರತ 2006ರಲ್ಲಿ ಪಶುಗಳ ಉಪಯೋಗಕ್ಕಾಗಿ ಈ ಔಷಧಿ ಬಳಸುವುದನ್ನು ನಿಷೇಧಿಸಿತು. ರಣಹದ್ದುಗಳನ್ನು ರಕ್ಷಿಸುವುದಕ್ಕಾಗಿ 2020ರ ಅಕ್ಟೋಬರ್‌ನಲ್ಲಿ ಭಾರತ ಸರಕಾರವು 2020-2025ರ ಅವಧಿಯಲ್ಲಿ ರಣಹದ್ದು ಸಂರಕ್ಷಣಾ ಕಾರ್ಯ ಯೋಜನೆಯೊಂದಕ್ಕೆ ಅಂಗೀಕಾರ ನೀಡಿತು. ಈ ಯೋಜನೆಯನ್ವಯ ಐದು ರಾಜ್ಯಗಳಲ್ಲಿ ರಣಹದ್ದು ತಳಿ ಅಭಿವೃದ್ಧಿ ಕೇಂದ್ರಗಳು ಸ್ಥಾಪನೆಯಾಗಲಿವೆ. ಈಗ ನಮ್ಮ ದೇಶದಲ್ಲಿ ರಣಹದ್ದುಗಳಿಗೆ ಆರೈಕೆ ಮಾಡಲು ಸಹಾಯ ಕೇಂದ್ರಗಳಿಲ್ಲ. ಆದ್ದರಿಂದ ಕೆಲವು ದೇಶಗಳಲ್ಲಿರುವಂತೆ ಹದ್ದುಗಳ ಆರೈಕೆಗಾಗಿ ಹದ್ದು ‘ರೆಸ್ಟೋರೆಂಟ್’ಗಳನ್ನು ಸ್ಥಾಪಿಸಲಾಗುವುದು. ಈ ರೆಸ್ಟೋರೆಂಟ್‌ಗಳಲ್ಲಿ ಡಿಕ್ಲೊಫೆನಕ್ ಮುಕ್ತ ಜಾನುವಾರು ಕಳೇಬರಗಳನ್ನು ರಣಹದ್ದುಗಳು ಆಹಾರಕ್ಕಾಗಿ ಒಂದೆಡೆ ಸೇರುವ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಎಸೆಯಲಾಗುವುದು. ಈ ಕ್ರಮಗಳಿಂದಾಗಿ ನಿಧಾನವಾಗಿ ಒಂದು ಇತ್ಯಾತ್ಮಕ ಪರಿಣಾಮ ಕಂಡುಬರುತ್ತಿದೆ. ಆದರೆ ರಣ ಹದ್ದುಗಳ ಸಂರಕ್ಷಣಾ ಕಾರ್ಯದಲ್ಲಿ ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ. ರಣಹದ್ದುಗಳ ಕುರಿತಾದ, ಅವುಗಳ ಸಂರಕ್ಷಣೆಯ ಮಹತ್ವದ ಕುರಿತಾದ ಅರಿವು ಮತ್ತು ಕ್ರಿಯಾ ಯೋಜನೆ ಜೊತೆ ಜೊತೆಯಾಗಿ ಸಾಗಬೇಕು. ವಿಶ್ವಾದ್ಯಂತ ಸೆಪ್ಟಂಬರ್ ಮೊದಲ ಶನಿವಾರದಂದು ಪ್ರತಿವರ್ಷ ‘ಅಂತರ್‌ರಾಷ್ಟ್ರೀಯ ರಣಹದ್ದು ಅರಿವು ದಿನ’ವನ್ನಾಗಿ (ವಲ್ಚರ್ ಅವೇರ್‌ನೆಸ್ ಡೇ) ಆಚರಿಸಲಾಗುತ್ತದೆ. ಹೀಗಾಗಿ ನಮ್ಮ ಪರಿಸರ ವ್ಯವಸ್ಥೆಯಲ್ಲಿ ರಣಹದ್ದುಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗುತ್ತದೆ.

ಕೃಪೆ: The Hindu
(ಲೇಖಕರು ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಷನ್ ಆಫ್ ಇಂಡಿಯಾದಲ್ಲಿ ಪ್ರಾಜೆಕ್ಟ್ ಬಯಾಲಾಜಿಸ್ಟ್ ಆಗಿದ್ದಾರೆ.)

Writer - ಆದರ್ಶ್ ಕುಲಕರ್ಣಿ

contributor

Editor - ಆದರ್ಶ್ ಕುಲಕರ್ಣಿ

contributor

Similar News