ಪ್ಯಾರಾಲಿಂಪಿಕ್ಸ್‌ನಲ್ಲಿ19 ಪದಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ

Update: 2021-09-05 06:37 GMT
photo: twitter

ಟೋಕಿಯೊ:  ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 19 ಪದಕಗಳೊಂದಿಗೆ ಭಾರತ ತನ್ನ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದೆ.

ಐದು ಚಿನ್ನ, ಎಂಟು ಬೆಳ್ಳಿ ಹಾಗೂ  ಆರು ಕಂಚಿನ ಪದಕಗಳೊಂದಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ಗರಿಷ್ಠ ಪದಕಗಳನ್ನು ಗೆದ್ದುಕೊಂಡು ಅತ್ಯಮೋಘ ಸಾಧನೆ ಮಾಡಿದೆ.

ಶಟ್ಲರ್ ಕೃಷ್ಣ ನಗರ್ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆಲ್ಲುವುದರೊಂದಿಗೆ  ಭಾರತವು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ತನ್ನ ಸ್ಮರಣೀಯ ಅಭಿಯಾನವನ್ನು ಅಂತ್ಯಗೊಳಿಸಿತು.

ಸ್ಪರ್ಧೆಯ ಕೊನೆಯ ದಿನವಾದ ರವಿವಾರ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಹಾಗೂ ಜೈಪುರದ ಬ್ಯಾಡ್ಮಿಂಟನ್ ಪಟು ಕೃಷ್ಣ ನಗರ್ ಕ್ರಮವಾಗಿ ಬೆಳ್ಳಿ ಹಾಗೂ ಚಿನ್ನದ ಪದಕವನ್ನು ಜಯಿಸಿದರು.

ಭಾರತವು ಒಟ್ಟು 19 ಪದಕಗಳೊಂದಿಗೆ 2016 ರ ರಿಯೋ ಡಿ ಜನೈರೊದಲ್ಲಿ ನಡೆದ ಕ್ರೀಡಾಕೂಟದಲ್ಲಿ ತನ್ನ ಹಿಂದಿನ ಅತ್ಯುತ್ತಮ ಸಾಧನೆಯನ್ನು ಮೀರಿ ನಿಂತಿತು. ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವು ನಾಲ್ಕು ಪದಕಗಳನ್ನು ಗೆದ್ದುಕೊಂಡಿತ್ತು.

 ವಾಸ್ತವವಾಗಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಮುನ್ನ ಭಾರತವು ಒಟ್ಟು 12 ಪದಕಗಳನ್ನು ಗೆದ್ದುಕೊಂಡಿತ್ತು, ಇದೀಗ ಒಟ್ಟು ಪದಕಗಳ ಸಂಖ್ಯೆಯು 31 ಕ್ಕೆ ತಲುಪಿದೆ.

ಟೇಬಲ್ ಟೆನಿಸ್  ಆಟಗಾರ್ತಿ ಭವಿನಾಬೆನ್ ಪಟೇಲ್ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು. ಗುಜರಾತಿನ ಭವಿನಾ ಮಹಿಳಾ ಸಿಂಗಲ್ಸ್ (ಕ್ಲಾಸ್ 4) ನಲ್ಲಿ ಬೆಳ್ಳಿ ಗೆದ್ದರು. ಗೇಮ್ಸ್ ನ ಕೊನೆಯ ದಿನವಾದ ರವಿವಾರ ಕೃಷ್ಣ ನಗರ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ( ಎಸ್ ಎಚ್ 6) ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಭಾರತದ ಅಭಿಯಾನವನ್ನು ಅಂತ್ಯಗೊಳಿಸಿದರು.

ಭಾರತೀಯ ಶೂಟರ್‌ಗಳು ಎರಡು ಚಿನ್ನದ ಪದಕಗಳ ಸಹಿತ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡರು. ಅವನಿ ಲೇಖರ ಹಾಗೂ ಸಿಂಗರಾಜ್ ಅಧಾನ ತಲಾ ಎರಡು ಪದಕಗಳನ್ನು ಗೆದ್ದರು.

ಭಾರತ ಅತ್ಲೆಟಿಕ್ಸ್‌ನಲ್ಲಿಯೂ ಮಿಂಚಿತು. ಎತ್ತರ ಜಿಗಿತದಲ್ಲಿ ನಾಲ್ಕು, ಜಾವೆಲಿನ್ ಎಸೆತದಲ್ಲಿ ಮೂರು ಹಾಗೂ ಡಿಸ್ಕಸ್ ಥ್ರೋನಲ್ಲಿ ಒಂದು ಪದಕ ಗೆದ್ದುಕೊಂಡಿತು.

ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಭಾರತಕ್ಕಾಗಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಏಕೈಕ ಅಥ್ಲೆಟಿಕ್ಸ್ ಚಿನ್ನದ ಪದಕವನ್ನು ಪಡೆದರು.

ಈ ವರ್ಷ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಆಡಿದ್ದ ಬ್ಯಾಡ್ಮಿಂಟನ್‌ನಲ್ಲಿ ಭಾರತವು ಉತ್ತಮ ಪ್ರದರ್ಶನ ತೋರಿತು.

ಪ್ರಮೋದ್ ಭಗತ್ ಹಾಗೂ  ಕೃಷ್ಣ ನಗರ್ ಇಬ್ಬರೂ ಚಿನ್ನ ಗೆದ್ದರು.  ಭಾರತೀಯ ಶಟ್ಲರ್‌ಗಳು ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News